ಶಾಸಕರಾದ ಖುಷಿಯ ಬೆನ್ನಿಗೆ ನ್ಯಾಯಾಲಯದಿಂದ ರೆಡ್ಡಿಗೆ ಶಾಕ್
ಬೆಂಗಳೂರು: ಬಹಳ ವರ್ಷದ ರಾಜಕೀಯ ನೇಪಥ್ಯದ ಬಳಿಕ ಸ್ವಂತ ಪಕ್ಷ ಕಟ್ಟಿ ಗೆದ್ದು ಶಾಸಕರಾಗಿರುವ ಖುಷಿಯಲ್ಲಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರಿಗೆ ಕೋರ್ಟ್ ಶಾಕ್ ನೀಡಿದೆ. ಕ್ರಿಮಿನಲ್ ಕೇಸ್ ಮುಗಿಯುವವರೆಗೆ ಜನಾರ್ದನ ರೆಡ್ಡಿ ಮತ್ತು ಪತ್ನಿ ಲಕ್ಷ್ಮೀ ಅರುಣಾಗೆ ಸೇರಿದ ಆಸ್ತಿ ಜಪ್ತಿ ಮಾಡುವಂತೆ ಸಿಬಿಐ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ.
ಜನಾರ್ದನ ರೆಡ್ಡಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಕೇಸ್ ಮುಗಿಯುವವರೆಗೆ ಅವರ 77 ಆಸ್ತಿಗಳನ್ನು ಜಪ್ತಿ ಮಾಡುವಂತೆ ಸಿಬಿಐ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ. ಜನಾರ್ದನ ರೆಡ್ಡಿ ದಂಪತಿಗೆ ಸೇರಿದ ಒಟ್ಟು 124 ಆಸ್ತಿಗಳ ಜಪ್ತಿ ಕೋರಿ ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಇದೀಗ ನ್ಯಾಯಾಲಯ ಭ್ರಷ್ಟಾಚಾರ ತಡೆ ಕಾಯ್ದೆ, ಕ್ರಿಮಿನಲ್ ಲಾ ತಿದ್ದುಪಡಿ ಕಾಯ್ದೆಯಡಿಯಲ್ಲಿ 77 ಆಸ್ತಿಗಳನ್ನು ಜಪ್ತಿ ಮಾಡುವಂತೆ ಆದೇಶ ಹೊರಡಿಸಿದೆ.
ಈ ಹಿಂದೆ ಕೂಡ 2023ರ ಜನವರಿ 12ರಂದು ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಕರ್ನಾಟಕ ಗೃಹ ಇಲಾಖೆ ಅನುಮತಿ ನೀಡಿ ಆದೇಶ ಹೊರಡಿಸಿತ್ತು. ಹೈಕೋರ್ಟ್ ಚಾಟಿ ಬೀಸಿದ ಬಳಿಕ ಎಚ್ಚೆತ್ತುಕೊಂಡಿದ್ದ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಜನವರಿ 12 ರಂದು ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಪ್ರತಿಕ್ರಿಯೆಗೆ ಅನುಮತಿ ನೀಡಿತ್ತು.





































