ಹೆಡಗೇವಾರ್ ಟೀಕೆಗೆ ಬಿಜೆಪಿ ತಿರುಗೇಟು
ಬೆಂಗಳೂರು: ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೇವಾರ್ ಅವರನ್ನು ಹೇಡಿ ಎಂದು ಕರೆದಿರುವ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಮಾನಸಿಕ ಅಸ್ವಸ್ಥ ಎಂದು ಬಿಜೆಪಿ ಕಿಡಿಕಾರಿದೆ. ಹೆಡಗೇವಾರ್ ತರಹದ ಹೇಡಿಗಳ ಪಾಠಗಳನ್ನು ಶಾಲೆಗಳ ಪಠ್ಯದಲ್ಲಿರಲು ಬಿಡುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದರು.
ಇದಕ್ಕೆ ಕಿಡಿಕಾರಿರುವ ಬಿಜೆಪಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಅಲ್ಪಜ್ಞಾನಿಗಳು, ಮತಿಗೇಡಿಗಳು ಬಾಲ ಬಿಚ್ಚುತ್ತಿದ್ದಾರೆ. ಅಂದ ಹಾಗೆ, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿ ಇದುವರೆಗೂ ಮಾಡಿದ ಒಂದೇ ಒಂದು ಒಳ್ಳೆ ಕೆಲಸ ಅಂದರೆ, ಮಾನಸಿಕ ಅಸ್ವಸ್ಥರಾಗಿರುವ ಬಿ.ಕೆ. ಹರಿಪ್ರಸಾದ್ ಅವರಂತಹವರನ್ನು ಸಚಿವ ಸಂಪುಟದಿಂದ ದೂರವಿಟ್ಟಿರುವುದು ಎಂದು ಟ್ವೀಟ್ ಮಾಡಿದೆ. ಗೌರವಾನ್ವಿತ ಹೆಡಗೇವಾರರಂತ ಅಪ್ರತಿಮ ದೇಶಭಕ್ತರ ಹೆಸರು ಹೇಳುವ ಯೋಗ್ಯತೆಯನ್ನು ಹರಿಪ್ರಸಾದ್ ಮೊದಲು ಸಂಪಾದಿಸಲಿ, ಉಳಿದದ್ದೆಲ್ಲ ಮತ್ತೆ ಎಂದು ಟೀಕಿಸಿದೆ.
ಗುರುವಾರ ಶಿವಮೊಗ್ಗದಲ್ಲಿ ಮಾತನಾಡಿದ್ದ ಹರಿಪ್ರಸಾದ್ ಅವರು, ‘ಶಿಕ್ಷಣ ಸೇರಿದಂತೆ ಸರ್ಕಾರದ ಯಾವ ಇಲಾಖೆಯಲ್ಲೂ ಸಂಘ ಪರಿವಾರದ ಸಿದ್ಧಾಂತಗಳು ನುಸುಳಲು ಅವಕಾಶ ನೀಡುವುದಿಲ್ಲ. ಹೆಡಗೇವಾರ್ ತರಹದ ರಣಹೇಡಿಗಳ ವಿಚಾರ ಇನ್ನು ಮುಂದೆ ಪಠ್ಯದಲ್ಲಿ ಇರುವುದಿಲ್ಲ ಎಂದಿದ್ದರು.
ಹೆಡಗೇವಾರ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂಬುದನ್ನು ಬಿಜೆಪಿಯವರು ಸಾಬೀತು ಮಾಡಲಿ. ಬ್ರಿಟಿಷರ ಕ್ಷಮಾಪಣೆ ಕೇಳಿದ ನಕಲಿ ಸ್ವಾತಂತ್ರ್ಯ ಹೋರಾಟಗಾರರಿಗೆಲ್ಲ ಮನ್ನಣೆ ನೀಡಲು ಸಾಧ್ಯವಿಲ್ಲ. ಅವರೆಲ್ಲ ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ನೀಡಿದ್ದು ಏಕೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದರು.



















