ಗಣಿತ ಕಲಿಸುವ ಜೀವನದ ಪಾಠ – ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದೆ

ಸಮಸ್ಯೆಗಳನ್ನು ಎದುರಿಸುವ ಶಕ್ತಿ ನಮ್ಮ ಒಳಗೆ ಇರುತ್ತದೆ

ನಾನೊಬ್ಬ ಗಣಿತ ಅಧ್ಯಾಪಕ. ಗಣಿತ ಜೀವನಕ್ಕೆ ಹಲವು ಪಾಠಗಳನ್ನು ಕೊಡುತ್ತದೆ. ಅದರಲ್ಲಿ ಒಂದು ಪ್ರಮುಖ ಪಾಠ ಎಂದರೆ-ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದೆ ಎನ್ನುವುದು.
ಜೀವನದಲ್ಲಿ ಕೆಲವು ಸಮಸ್ಯೆಗಳು ನಮಗೆ ಹೇಳಿ ಬರುತ್ತವೆ. ಕೆಲವು ಹೇಳದೇ ಬರುತ್ತವೆ. ಕೆಲವು ಅದರಷ್ಟಕ್ಕೆ ಬರುತ್ತವೆ. ಇನ್ನೂ ಕೆಲವನ್ನು ನಾವು ನಮ್ಮದೇ ತಪ್ಪುಗಳಿಂದ ಮೈಮೇಲೆ ಎಳೆದುಕೊಳ್ಳುತ್ತೇವೆ.
ಆದರೆ ಸ್ವಲ್ಪ ತಾಳ್ಮೆಯಿಂದ ಯೋಚನೆ ಮಾಡಿ ನೋಡಿದರೆ ಹೆಚ್ಚಿನ ಸಮಸ್ಯೆ ಅದರಷ್ಟಕ್ಕೆ ಪರಿಹಾರ ಆಗುತ್ತದೆ. ಹೇಳದೇ ಬರುವ ಸಮಸ್ಯೆಗಳಿಗೆ ನಾವು ಹೆಚ್ಚು ಪ್ರಿಪೇರ್ ಆಗಿರಬೇಕು.

ಸಮಸ್ಯೆಗಳು ಬರಲು ಕಾರಣಗಳು ಯಾವುವು?

1) ನಮ್ಮ ದುಡುಕು.
2) ತಪ್ಪು ಕಲ್ಪನೆಗಳು.
3) ನಮ್ಮ ಬೇಜವಾಬ್ದಾರಿ.
4) ನಮ್ಮ ತಪ್ಪು ಯೋಜನೆಗಳು.
5) ತಪ್ಪುಗ್ರಹಿಕೆ.
6) ತಪ್ಪು ಯೋಚನೆಗಳು.
7) ಕೆಲವರನ್ನು ತುಂಬ ಅವಲಂಬನೆ ಮಾಡುವುದು ಮತ್ತು ನಂಬುವುದು.
8) ಹೆಚ್ಚು ಆತಂಕ ಮಾಡುವುದು.
9) ಕೆಲಸಗಳನ್ನು ಮುಂದೂಡುವುದು.
11) ಆತ್ಮವಿಶ್ವಾಸದ ಕೊರತೆ.
12) ಆರಂಭದಲ್ಲಿ ಉದಾಸೀನ ಮಾಡುವುದು ಮತ್ತು ಬೇಜವಾಬ್ದಾರಿ.
13) ನಿರ್ಧಾರ ತೆಗೆದುಕೊಳ್ಳಲು ತುಂಬ ಹೆದರುವುದು.
13) ಇಚ್ಛಾಶಕ್ತಿಯ ಕೊರತೆ.
14) ಯಾವಾಗಲೂ ಕಲ್ಪನೆಯಲ್ಲಿ ತೇಲುವುದು.
15) ತಪ್ಪುಗಳನ್ನು ರಿಪೀಟ್ ಮಾಡುವುದು.
16) ತುಂಬಾ ಭಾವನಾತ್ಮಕವಾಗಿ ಯೋಚನೆ ಮಾಡುವುದು.
17) ಪ್ರಾಕ್ಟಿಕಲ್ ಆಗಿ ಯೋಚನೆ ಮಾಡದಿರುವುದು.
18) ಅತಿಯಾದ ನಿರೀಕ್ಷೆಗಳು.
19) ಅತಿಯಾದ ಆತ್ಮವಿಶ್ವಾಸ ಮತ್ತು ಭಂಡ ಧೈರ್ಯ.
20) ನೆಗೆಟಿವ್ ಯೋಚನೆಗಳು.

ಇನ್ನೂ ನೂರಾರು ಕಾರಣಗಳು ಇರಬಹುದು. ಆದರೆ ಹೆಚ್ಚಿನ ಸಮಸ್ಯೆಗಳಿಗೆ ನಮ್ಮ ನೆಗೆಟಿವ್ ಯೋಚನೆಗಳು ಕಾರಣ ಆಗಿರುತ್ತವೆ ಎಂದರೆ ನಿಮಗೆ ನಂಬುವುದು ಕಷ್ಟ ಆಗಬಹುದು. ಆದರೆ ಅದು ಹೌದು.
ಸಮಸ್ಯೆಗಳನ್ನು ಎದುರಿಸಲು ಬೇಕಾದದ್ದು ಮೂರೇ ಮೂರು ಅಂಶಗಳು. ಬೆಟ್ಟದಷ್ಟು ತಾಳ್ಮೆ, ಸರಿಯಾದ ಪ್ಲಾನಿಂಗ್ ಮತ್ತು ಜೀವನ ಪ್ರೀತಿ ಮಾತ್ರ. ಅದು ಹೇಗೆ?

ಇಲ್ಲಿವೆ ಸಮಸ್ಯೆಗಳಿಗೆ ಕೆಲವು ಸಿಂಪಲ್ ಆದ ಪರಿಹಾರಗಳು

1) ಉದಾಹರಣೆಗೆ ಇಂದಿನ ಹೆಚ್ಚಿನ ಸಮಸ್ಯೆಗಳು ದುಡ್ಡಿನ ಕಾರಣಕ್ಕೆ ಬರುವಂಥದ್ದು. ನಮ್ಮ ಅಮ್ಮ ಪ್ರೈಮರಿ ಸ್ಕೂಲ್ ಟೀಚರ್ ಆಗಿದ್ದು ಯಾರ ಹೆಚ್ಚು ಸಪೋರ್ಟ್ ಇಲ್ಲದೆ ತನ್ನ ನಾಲ್ಕು ಮಕ್ಕಳನ್ನು ವಿದ್ಯಾವಂತರಾಗಿ ಮಾಡಿದ್ದರು. ಅವರ ಆರಂಭಿಕ ವೇತನ ಕೇವಲ 60 ರೂಪಾಯಿ ಮಾತ್ರ ಆಗಿತ್ತು. ಪಕ್ಕಾ ಯೋಜನೆ ಮತ್ತು ಹಣಕಾಸಿನ ನಿರ್ವಹಣೆ ಮಾಡುವುದರಿಂದ ಅದು ಸಾಧ್ಯವಾಗಿತ್ತು. ಅದರಲ್ಲಿ ಕೂಡ ಅವರು ಐದು ರೂಪಾಯಿ ಉಳಿತಾಯ ಮಾಡುತ್ತಿದ್ದರು ಅಂದರೆ ಗ್ರೇಟ್ ಅಲ್ವಾ? ಈ ದುಡ್ಡಿನ ಸಮರ್ಪಕ ಯೋಜನೆ ಮತ್ತು ನಿರ್ವಹಣೆ ನಮ್ಮನ್ನು ಖಂಡಿತವಾಗಿ ಗೆಲ್ಲಿಸುತ್ತದೆ.

2) ಕೆಲವರು ಸಣ್ಣ ಸಣ್ಣ ಸಮಸ್ಯೆಗಳನ್ನು ದೊಡ್ಡದು ಮಾಡಿ ನೋಡುತ್ತಾರೆ. ಸ್ವಲ್ಪ ತಾಳ್ಮೆಯಿಂದ ಅವಲೋಕನ ಮಾಡಿದರೆ ಅವುಗಳು ಕರಗುವ ಮೋಡಗಳ ಹಾಗೆ ಅದರಷ್ಟಕ್ಕೆ ಕರಗಿ ಬಿಡುತ್ತವೆ.

3) ಇನ್ನೂ ಕೆಲವು ಸಮಸ್ಯೆಗಳಿಗೆ ನಾವು ತೆಗೆದುಕೊಳ್ಳುವ ನಿರ್ಧಾರಗಳು ಕಾರಣ ಆಗಿರುತ್ತವೆ. ನಾವು ಕ್ಷಿಪ್ರ ನಿರ್ಧಾರ ತೆಗೆದುಕೊಳ್ಳಬೇಕಾದ ಕಡೆ ನಿಧಾನ ಮಾಡುತ್ತೇವೆ. ನಿಧಾನವಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ಕಡೆ ದುಡುಕು ನಿರ್ಧಾರ ತೆಗೆದುಕೊಳ್ಳುತ್ತೇವೆ. ಇದು ಸರಿಯಾಗಬೇಕು.

4) ನಾವು ತಪ್ಪು ವ್ಯಕ್ತಿಗಳನ್ನು ತುಂಬಾ ನಂಬುತ್ತೇವೆ ಮತ್ತು ನಮ್ಮ ಹತ್ತಿರ ಎಳೆದುಕೊಳ್ಳುತ್ತೇವೆ. ಸರಿಯಾದ ವ್ಯಕ್ತಿಗಳನ್ನು ಸಂಶಯದಿಂದ ನೋಡುತ್ತೇವೆ ಮತ್ತು ದೂರ ಮಾಡುತ್ತೇವೆ. ಇದು ನಮ್ಮ ಹೆಚ್ಚಿನ ಸಮಸ್ಯೆಗಳಿಗೆ ಕಾರಣ.

5) ನಮ್ಮ ಕೆಲಸವನ್ನು ಮುಂದೂಡುವ ಗುಣ(ಪೋಸ್ಟ್‌ಪೋನ್‌ಮೆಂಟ್) ನಮ್ಮನ್ನು ಸಮಸ್ಯೆಗಳ ಬಾಗಿಲಿನವರೆಗೆ ಕರೆದುಕೊಂಡು ಹೋಗುತ್ತದೆ.

6) ಕೆಲವರು ನಮ್ಮ ಎಲ್ಲ ಸಮಸ್ಯೆಗಳಿಗೆ ವಿಧಿಯೇ ಅಥವಾ ದೇವರೇ ಕಾರಣ ಎಂದು ದೂರುತ್ತಾ ಸಮಯ ಕಳೆಯುತ್ತಾರೆ. ಸಮಸ್ಯೆಗಳ ಪರಿಹಾರಕ್ಕೆ ದಾರಿ ಹುಡುಕುವುದಿಲ್ಲ.

7) ಒಂದು ಒಳ್ಳೆಯ ಟೀಮ್‌ನಲ್ಲಿ ಕೆಲಸ ಮಾಡುವುದರಿಂದ, ಸಂಘಟಿತ ಪ್ರಯತ್ನ ಮಾಡುವುದರಿಂದ ಮತ್ತು ಎಲ್ಲರ ಜತೆ ಸೇರಿ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಸಮಸ್ಯೆಗಳನ್ನು ಎದುರಿಸಲು ಭಾರಿ ಶಕ್ತಿ ಬರುತ್ತದೆ.

8)ಆತ್ಮೀಯರಲ್ಲಿ ಮನಸ್ಸು ಬಿಚ್ಚಿ ಮಾತಾಡುವುದರಿಂದ ಮನಸ್ಸು ಹಗುರ ಆಗ್ತದೆ ಮತ್ತು ಸಮಸ್ಯೆ ಎದುರಿಸಲು ಧೈರ್ಯ ಬರುತ್ತದೆ. ಅಂತರ್ಮುಖಿ ವ್ಯಕ್ತಿಗಳು ಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತಾರೆ.

9) ಸಮಸ್ಯೆಗಳು ಬಂದಾಗ ತಣ್ಣಗೆ ಒಂದು ಕಡೆ ಕೂತು ಆ ಸಮಸ್ಯೆಗಳಿಗೆ ಹಲವು ಪರ್ಯಾಯ ಪರಿಹಾರಗಳನ್ನು ಹುಡುಕಿದಾಗ ಮತ್ತು ಅವುಗಳಲ್ಲಿ ಸೂಕ್ತವಾದದ್ದನ್ನು ಮತ್ತು ಕಡಿಮೆ ರಿಸ್ಕ್ ಇರುವುದನ್ನು ಆರಿಸಿಕೊಂಡು ಅನುಷ್ಠಾನ ಮಾಡಿದಾಗ ಯಾವ ಸಮಸ್ಯೆಯನ್ನು ಬೇಕಾದರೂ ಬಿಡಿಸಬಹುದು.

10) ನಾನು ಆರಂಭದಲ್ಲಿಯೇ ಹೇಳಿದ ಹಾಗೆ ತಾಳ್ಮೆಯಿಂದ ಅವಲೋಕನ ಮಾಡಿದರೆ, ಸಮಸ್ಯೆಗೆ ಕಾರಣಗಳನ್ನು ಪಟ್ಟಿ ಮಾಡಿದಾಗ ಮತ್ತು ಪಾಸಿಟಿವ್ ಥಿಂಕಿಂಗ್ ಮಾಡಿದರೆ ಯಾವ ಸಮಸ್ಯೆಯೂ ನಮಗೆ ತೊಂದರೆ ಕೊಡದೆ ಹಾಗೇ ಮಾಯವಾಗುತ್ತದೆ.

ಭರತ ವಾಕ್ಯ

ಸಮಸ್ಯೆಗಳನ್ನು ಎದುರಿಸುವ ಶಕ್ತಿ ನಮ್ಮ ಒಳಗೆ ಇರುತ್ತದೆ. ನಾವು ಒಳಗಿನಿಂದ ಸ್ಟ್ರಾಂಗ್ ಆದರೆ ಯಾವ ಸಮಸ್ಯೆಯನ್ನೂ ಪರಿಹಾರ ಮಾಡಬಹುದು. ಪ್ರಯತ್ನ ಮಾಡೋಣ ಅಲ್ಲವೇ..?
ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು.error: Content is protected !!
Scroll to Top