ಮಂದಿರ ಲೋಕಾರ್ಪಣೆ ದಿನದಂದೇ ಬಿಡುಗಡೆಯಾಗಲಿದೆ ರಾಮಜನ್ಮಭೂಮಿ ಆಂದೋಲನದ ಚಿತ್ರ
ಮುಂಬಯಿ : ರಾಮಾಯಣ ಟಿವಿ ಸರಣಿಯಲ್ಲಿ ರಾಮನ ಪಾತ್ರದಲ್ಲಿ ಅಭಿನಯಿಸಿ ಜನಪ್ರಿಯರಾಗಿರುವ ಅರುಣ್ ಗೋವಿಲ್ ಈಗ ರಾಮನ ಇನ್ನೊಂದು ಅವತಾರದಲ್ಲಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ರಾಮ ಜನ್ಮಭೂಮಿ ಮುಕ್ತಿಗಾಗಿ ದಶಕಗಳ ಕಾಲ ನಡೆದ ಹೋರಾಟದ ಕಥೆಯನ್ನೊಳಗೊಂಡಿರುವ ʼ6,9,5′ ಎಂಬ ವಿಶಿಷ್ಟ ಚಿತ್ರವನ್ನು ಅವರು ನಿರ್ಮಿಸಿ ನಟಿಸಿದ್ದಾರೆ. ಚಿತ್ರೀಕರಣ ಶೇ.95ರಷ್ಟು ಪೂರ್ಣಗೊಂಡಿದ್ದು ರಾಮ ಮಂದಿರ ಲೋಕಾರ್ಪಣೆಯಾಗುವ ದಿನವೇ ಈ ಚಿತ್ರವೂ ಬಿಡುಗಡೆಯಾಗಲಿದೆ.
‘ಆರು ಒಂಬತ್ತು ಐದು (6,9,5)’ ಚಿತ್ರದಲ್ಲಿ ಗೋವಿಲ್ ರಾಮ ಜನ್ಮಭೂಮಿ ಚಳವಳಿಗೆ ತನ್ನ ಜೀವನವನ್ನು ಮುಡಿಪಾಗಿಟ್ಟ ‘ಸಾಧು’ ಪಾತ್ರವನ್ನು ನಿರ್ವಹಿದ್ದಾರೆ. ರಾಮ ಜನ್ಮಭೂಮಿ ಆಂದೋಲನಕ್ಕೆ ಸಂಬಂಧಿಸಿ ಅತ್ಯಂತ ಮಹತ್ವಪೂರ್ಣವೆಂದು ಪರಿಗಣಿಸಿರುವ ಮೂರು ಸಂಖ್ಯೆಗಳಿಂದ ಚಿತ್ರಕ್ಕೆ ಹೆಸರಿಡಲಾಗಿದೆ. ಡಿಸೆಂಬರ್ 6, 1992 ರಂದು ಬಾಬರಿ ಮಸೀದಿಯನ್ನು ಕೆಡವಲಾಯಿತು, ನವೆಂಬರ್ 9, 2019ರಂದು ಸುಪ್ರೀಂ ಕೋರ್ಟ್ ರಾಮ ಜನ್ಮಭೂಮಿ ಪರವಾಗಿ ತೀರ್ಪು ನೀಡಿತು ಮತ್ತು ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 5, 2020 ರಂದು ಹೊಸ ದೇವಾಲಯಕ್ಕೆ ಶಂಕುಸ್ಥಾಪನೆ ಮಾಡಿದರು. ಇದೇ ಕಾರಣದಿಂದ ಚಿತ್ರ ಈ 6,9,5 ಎಂಬ ಹೆಸರು ಇಡಲಾಗಿದೆ.
‘ಸಿಕ್ಸ್ ನೈನ್ ಫೈವ್ (6,9,5)’ಅಯೋಧ್ಯೆಯ ಹಲವು ಸ್ಥಳಗಳಲ್ಲಿ ಚಿತ್ರೀಕರಣಗೊಂಡಿದೆ. ಹನುಮಾನ್ ಗಡಿ, ದಶರಥ್ ಮಹಲ್, ದಿಗಂಬರ್ ಅಖಾಡ, ರಾಮ್ ಕಿ ಪೈಡಿ, ಗುಪ್ತರ್ ಘಾಟ್, ರಾಜ್ ಘಾಟ್ ಮತ್ತು ಜುಂಕಿ ಘಾಟ್ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.






























































