ಪ್ರಧಾನಿ ಮೋದಿ ಉದ್ಘಾಟಿಸುವುದಕ್ಕೆ ವಿರೋಧ
ಹೊಸದಿಲ್ಲಿ : ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವುದನ್ನು ಪ್ರತಿಭಟಿಸಿ ತೃಣಮೂಲ ಕಾಂಗ್ರೆಸ್, ಆಪ್ ಮತ್ತು ಸಿಪಿಐ ಈ ಐತಿಹಾಸಿಕ ಸಮಾರಂಭವನ್ನು ಬಹಿಷ್ಕರಿಸಲು ನಿರ್ಧರಿಸಿವೆ. ಕಾಂಗ್ರೆಸ್ ಕೂಡ ಪ್ರಧಾನಿ ಉದ್ಘಾಟಿಸುವುದನ್ನು ವಿರೋಧಿಸುತ್ತಿದ್ದರೂ ಸಮಾರಂಭವನ್ನು ಬಹಿಷ್ಕರಿಸುವ ಕುರಿತು ಇಂದು ತನ್ನ ನಿರ್ಧಾರ ಪ್ರಕಟಿಸಲಿದೆ.
ನೂತನವಾಗಿ ನಿರ್ಮಿಸಲಾಗಿರುವ ಅತ್ಯಾಧುನಿಕ ಸೌಲಭ್ಯವುಳ್ಳ ನೂತನ ಸಂಸತ್ ಭವನವನ್ನು ಮೋದಿ ಮೇ 28ರಂದು ಉದ್ಘಾಟಿಸಿದ್ದಾರೆ. ಆದರೆ ಸಂವಿಧಾನದ ಮುಖ್ಯಸ್ಥರಾಗಿರುವ ರಾಷ್ಟ್ರಪತಿ ಉದ್ಘಾಟಿಸಬೇಕೆ ಹೊರತು ಪ್ರಧಾನಿಗೆ ಆ ಅಧಿಕಾರ ಇಲ್ಲ ಎಂಬ ವಿತಂಡ ವಾದ ಮಂಡಿಸಿ ವಿಪಕ್ಷಗಳು ವಿರೋಧಿಸುತ್ತಿವೆ.
ಮೊದಲು ಬಿಜೆಪಿಯ ಬದ್ಧ ವಿರೋಧಿಯಾದ ತೃಣಮೂಲ ಕಾಂಗ್ರೆಸ್ ಸಂಸತ್ ಭವನವನ್ನು ಮೋದಿ ಉದ್ಘಾಟಿಸುವುದನ್ನು ವಿರೋಧಿಸಿ ಸಮಾರಂಭ ಬಹಿಷ್ಕರಿಸಲು ನಿರ್ಧರಿಸಿತ್ತು. ಬಳಿಕ ಸಮಾನ ಮನಸ್ಕ ಪಕ್ಷಗಳು ಅದನ್ನು ಬೆಂಬಲಿಸುತ್ತಿವೆ. ಸಿಪಿಎಂ ಕೂಡ ವಿರೋಧ ವ್ಯಕ್ತಪಡಿಸಿದ್ದರೂ ಇನ್ನು ನಿಲುವು ಬಹಿರಂಗಪಡಿಸಿಲ್ಲ.






























































