ಸಾಮಾನ್ಯ ನ್ಯಾಯವಾದಿ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿ

ಪಾರದರ್ಶಕ ಆಡಳಿತ ವ್ಯವಸ್ಥೆಯೊಂದಿಗೆ ಸುಖಿ ರಾಜ್ಯದ ನಿರ್ಮಾಣ

ಅಹಿಂದಾ ಸಿದ್ಧಾಂತ ಸಿದ್ದರಾಮಯ್ಯ ಗೆಲುವಿಗೆ ಕಾರಣ

ಮೈಸೂರು ವಿವಿಯಿಂದ ಕಾನೂನು ಪದವಿ ಪಡೆದು ಒಬ್ಬ ಸಾಮಾನ್ಯ ನ್ಯಾಯವಾದಿಯಾಗಿದ್ದುಕೊಂಡು 1983ರಲ್ಲಿ ಭಾರತೀಯ ಲೋಕದಳದ ಅಭ್ಯರ್ಥಿಯಾಗಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ರಾಜ್ಯದ 7ನೇ ವಿಧಾನಸಭೆ ಪ್ರವೇಶಿಸಿದ ಸಿದ್ದರಾಮನಹುಂಡಿಯ ಸಿದ್ದರಾಮಯ್ಯ ಮುಂದೆ ಈ ರಾಜ್ಯದ ಅರ್ಥ ಮಂತ್ರಿಯೂ ಸೇರಿ ವಿವಿಧ ಖಾತೆಗಳನ್ನು ನಿಭಾಯಿಸಿ, ಎರಡು ಅವಧಿಗೆ ಉಪಮುಖ್ಯಮಂತ್ರಿಯಾಗಿ, ಮತ್ತೆರಡು ಅವಧಿಗೆ ಪ್ರತಿಪಕ್ಷ ನಾಯಕನಾಗಿ, ಮತ್ತೆ ರಾಜ್ಯದಲ್ಲಿ 5 ವರ್ಷ ಪೂರ್ಣಾವಧಿ ಆಡಳಿತ ನಡೆಸಿ ಈ ನಾಡಿನ ಜನತೆಯ ಧ್ವನಿಯಾಗಿ ತನ್ನ ಆಡಳಿತಾವಧಿಯಲ್ಲಿ ರಾಜ್ಯವನ್ನು ಅಭಿವೃದ್ದಿಯಲ್ಲಿ ದೇಶದಲ್ಲಿಯೇ 2ನೇ ಸ್ಥಾನಕ್ಕೇರಿಸಿದ್ದ ಸಿದ್ದರಾಮಯ್ಯ ಮತ್ತೆ ಇದೀಗ ಈ ರಾಜ್ಯದ 24ನೇ ಮುಖ್ಯಮಂತ್ರಿ ಸ್ಥಾನವನ್ನು ಏರುತ್ತಿರುವುದು ಈ ನಾಡಿನ ಸೌಭಾಗ್ಯವಾಗಿದೆ. ಬಹುಶ: ಅವರು ಹಮ್ಮಿಕೊಂಡ ಅಹಿಂದಾ ಸಿದ್ಧಾಂತ ಅವರನ್ನು ಈ ಮಟ್ಟಕ್ಕೆ ಏರಿಸಿದೆ ಎಂದರೆ ಅತಿಶಯೋಕ್ತಿ ಆಗದು.

ಸೋಲು ಗೆಲುವು ಪ್ರಜಾತಂತ್ರ ವ್ಯವಸ್ಥೆಯ ಒಂದು ಭಾಗ. ರಾಮಕೃಷ್ಣ ಹೆಗ್ಡೆ ಆಡಳಿತಾವಧಿಯ 1985ರ ಮಧ್ಯಂತರದ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಗೆಲುವು ಸಾಧಿಸಿ ಅವರ ಸರಕಾರದಲ್ಲಿ ಮಂತ್ರಿಯಾಗಿ ವಿವಿಧ ಖಾತೆಗಳನ್ನು ನಿಭಾಯಿಸಿದ್ದ ಸಿದ್ದರಾಮಯ್ಯ 1989ರ ಚುನಾವಣೆಯಲ್ಲಿ ಸೋಲಬೇಕಾಯ್ತು. ಸೋಲಿನಲ್ಲಿಯೂ ತನ್ನ ಅದೃಷ್ಟ ಹುಡುಕಲು ಹೋದ ಸಿದ್ದರಾಮಯ್ಯ ಜನತಾಪಕ್ಷ ಎರಡು ಹೋಳಾದಾಗ ಜನತಾ ದಳವನ್ನು ಸೇರಿ 1994 ಚುನಾವಣೆಯಲ್ಲಿ ಗೆದ್ದು ದೇವೆಗೌಡರ ಸರಕಾರದಲ್ಲಿ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದರು. 1999ರ ಹೊತ್ತಿಗೆ ಜನತಾದಳ ಇಬ್ಬಾಗವಾದಾಗ ದೇವೆಗೌಡರ ಜಾತ್ಯಾತೀತ ಜನತಾ ದಳದ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದ ಸಿದ್ದರಾಮಯ್ಯ, 1999ರ ಚುನಾವಣೆಯಲ್ಲಿ ಮತ್ತೆ ಸೋಲು ಕಾಣಬೇಕಾಯಿತು. 2004ರಲ್ಲಿ ಮತ್ತೆ ಗೆಲುವು ಸಾಧಿಸಿ ಅಂದಿನ ಅತಂತ್ರ ವಿಧಾನ ಸಭೆಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಸೇರಿ ರಚನೆಯಾದ ಸರಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಹಣಕಾಸು ಸಚಿವರಾಗಿಯೂ ಸೇವೆ ಸಲ್ಲಿಸಿದ್ದ ಸಿದ್ದರಾಮಯ್ಯ ತನ್ನ ಅಹಿಂದ ಸಿದ್ಧಾಂತದ ಅನುಷ್ಠಾನಕ್ಕಾಗಿ ಜನತಾದಳ ತೊರೆಯಬೇಕಾಗಿ ಬಂದುದು ವಿಪರ್ಯಾಸವೂ ಹೌದು, ಅನಿವಾರ್ಯವೂ ಹೌದು. ಜಾತ್ಯಾತೀತತೆಯ ಹೆಸರಲ್ಲಿ ರಾಜ್ಯದಲ್ಲಿ ಸದ್ದು ಮಾಡಿ ಅಧಿಕಾರ ಗ್ರಹಿಸಿದ ಜನತಾ ದಳಕ್ಕೆ ಸಿದ್ದರಾಮಯ್ಯ ಪ್ರತಿಪಾದಿಸಿದ ಅಹಿಂದ ಪ್ರತಿರೋಧವಾಗಿ ಕಂಡು ಬಂದಾಗ ಸಹಜವಾಗಿಯೇ ಸಿದ್ದರಾಮಯ್ಯ ತನ್ನ ಸಿದ್ಧಾಂತದ ಅನುಷ್ಠಾನದ ಪ್ರತಿಪಾದನೆಗಾಗಿ ಕಾಂಗ್ರೆಸ್ ಪಕ್ಷದತ್ತ ಒಲವು ತೋರಿದರು. ಕಾಂಗ್ರೆಸ್ ಅಹಿಂದಾದ ಭದ್ರ ಬುನಾದಿಯಲ್ಲಿ ಕಟ್ಟುವ ಪಣತೊಟ್ಟರು. ಬಹುಶಃ ಆ ನೆಲೆಯಲ್ಲಿ 2008 ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ಹೊರತಾಗಿಯೂ 2013ರ ಕಾಂಗ್ರೆಸ್ ಪಕ್ಷದ ಗೆಲುವು ಸಿದ್ದರಾಮಯ್ಯರವರ ಜನಪರ ಹೋರಾಟದ ತಳಹದಿಯ ಮೇಲೆ ನಿಂತಿದೆ ಅಂದರೆ ಆಶ್ಚರ್ಯವಿಲ್ಲ.

2013ರಿಂದ 5 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಸಿದ್ಧರಾಮಯ್ಯ ಸಾಂವಿಧಾನಿಕ ಬದ್ಧತೆಯ ಜನಪರ ಚಿಂತನೆಯ ಕೆಲಸಗಳನ್ನು ಯಾವುದೇ ಜಾತಿ ಧರ್ಮ ಪಂಥ ಪಂಗಡಗಳ ಪರಿವಭೇದವಿಲ್ಲದೆ ತನ್ನ ಆಡಳಿತದುದ್ದಕ್ಕೂ ರಾಜ್ಯದ ಮನೆ-ಮನಗಳಿಗೆ ತಲಪಿಸಿದರು. ಇದು ಕರ್ನಾಟಕ ಕಂಡ ಸುವರ್ಣ ಯುಗವಾಗಿತ್ತು.
2018ರ ಸೋಲಿನ ಹೊರತಾಗಿಯೂ ಇದೀಗ ಮತ್ತೆ ಕಾಂಗ್ರೆಸ್ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಎರಡನೇ ಬಾರಿಗೆ ರಾಜ್ಯದ ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಅವರ ಮುಂದೆ ಬಹುಶಃ ಬಿಜೆಪಿ ಆಡಳಿತಾವಧಿಯಲ್ಲಿ ಮರೆತು ಹೋದ ಬಹಳಷ್ಟು ಅಭಿವೃದ್ದಿ ಕಾರ್ಯಗಳು ಮತ್ತೆ ಅನುಷ್ಠಾನಕ್ಕಾಗಿ ಎದುರು ನೋಡುತ್ತಿರಬಹುದು. ಕಳೆದು ಹೋದ ಸಾಮಾಜಿಕ ಸೌಹಾರ್ದತೆ, ಪಾರದರ್ಶಕ ಆಡಳಿತ ವ್ಯವಸ್ಥೆ ಸಿದ್ದರಾಮಯ್ಯನವರ ಸಹಿಗಾಗಿ ಎದುರು ನೋಡುತ್ತಿರಲೂ ಬಹುದು.

✒️ ಬಿಪಿನ್‌ ಚಂದ್ರಪಾಲ್‌







































































error: Content is protected !!
Scroll to Top