ಪ್ರಯೋಗಗಳನ್ನು ಮಾಡಿ ಕೈ ಸುಟ್ಟುಕೊಂಡ ಬಿಜೆಪಿ

ರಾಜ್ಯ ನಾಯಕತ್ವದ ಶೂನ್ಯ ಸಾಧನೆ

ಇಪ್ಪತ್ತು ದಿನಗಳಿಗೂ ಅಧಿಕ ಅವಧಿಗೆ ಅಳೆದೂ ತೂಗಿ ತನ್ನ ಪಟ್ಟಿಯನ್ನು ಬಿಡುಗಡೆ ಮಾಡಿದ ಬಿಜೆಪಿ ಹೈಕಮಾಂಡ್ 70ಕ್ಕೂ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಣೆ ಮಾಡಿ ಇದೀಗ ಕೈ ಸುಟ್ಟುಕೊಂಡಿದೆ. ಬಿಜೆಪಿ ಈ ರೀತಿಯ ಸೋಲನ್ನು ಕನಸಿನಲ್ಲಿಯೂ ಊಹಿಸಿರಲಿಲ್ಲ. ಸರಕಾರದ ಹತ್ತಕ್ಕೂ ಪ್ರಮುಖ ಸಚಿವರು ಸೋತಿರುವುದು ಅಧಿಕಾರದ ವಿರೋಧಿ ಅಲೆಯ ಸ್ಪಷ್ಟ ಸೂಚನೆ ಎನ್ನದೆ ವಿಧಿಯಿಲ್ಲ.
ಅದೇ ಹೊತ್ತಿಗೆ ಕಾಂಗ್ರೆಸ್ ಈ ಬಾರಿ ಹೆಚ್ಚು ಸಂಘಟಿತವಾಗಿ ಅಖಾಡಕ್ಕೆ ಇಳಿಯಿತು. ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಒಗ್ಗಟ್ಟು ಪ್ರದರ್ಶನ ಮಾಡಿದರು. ಇದು ಕಾರ್ಯಕರ್ತರಿಗೆ ನೈತಿಕ ಬೆಂಬಲ ಒದಗಿಸಿತು.
ಬಿಜೆಪಿ ಸರಕಾರ ಚುನಾವಣೆಯ ಹೊತ್ತಿನಲ್ಲಿ ಪ್ರಕಟ ಮಾಡಿದ ಮೀಸಲಾತಿಯ ಪ್ರಯೋಜನ ಬಿಜೆಪಿಗೆ ದೊರೆತಿಲ್ಲ. ಅದೇ ಹೊತ್ತಿಗೆ ಕಾಂಗ್ರೆಸ್ ಘೋಷಣೆ ಮಾಡಿದ ಐದು ಗ್ಯಾರಂಟಿ ಕಾರ್ಡ್‌ಗಳು ಕಾಂಗ್ರೆಸ್ಸಿನ ಕೈ ಹಿಡಿದಿವೆ ಅನ್ನುವುದು ಸ್ಪಷ್ಟ. ಬಿಜೆಪಿ ಮುಸ್ಲಿಮರಿಗೆ ಇದ್ದ ಶೇ.4 ಮೀಸಲಾತಿಯನ್ನು ರದ್ದು ಮಾಡಿದ್ದು ಹೆಚ್ಚು ಡ್ಯಾಮೇಜ್ ಮಾಡಿತು. ಮುಸ್ಲಿಂ ಮತದಾರರು ಸಂಘಟಿತವಾಗಿ ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಬೆಂಬಲಿಸಿದ್ದು ಎದ್ದು ಕಾಣುತ್ತದೆ.
ಬಿಜೆಪಿ ರಾಜ್ಯದ ನಾಯಕರಿಗೆ ಹೆಚ್ಚು ಪ್ರಾಮುಖ್ಯತೆ ಕೊಡದೆ ಮೋದಿ, ಅಮಿತ್ ಶಾ, ನಡ್ಡಾ, ಯೋಗಿ ಆದಿತ್ಯನಾಥ್ ಅವರನ್ನು ಹೆಚ್ಚು ಅವಲಂಬನೆ ಮಾಡಿದ್ದು ವರ್ಕ್ ಔಟ್ ಆಗಿಲ್ಲ. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸಿದ್ದು, ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನಿರಾಕರಣೆ ಮಾಡಿದ್ದು ಲಿಂಗಾಯತರಿಗೆ ತಪ್ಪು ಸಂದೇಶ ರವಾನೆಗೆ ಬಿಜೆಪಿಯೇ ಅವಕಾಶ ಮಾಡಿಕೊಟ್ಟಿತು.
ಮುಖ್ಯಮಂತ್ರಿ ಆಗಿ ಬಸವರಾಜ್ ಬೊಮ್ಮಾಯಿ ಅವರ ವರ್ಚಸ್ಸು ಕಾಂಗ್ರೆಸ್ ನಾಯಕರ ವರ್ಚಸ್ಸಿನ ಮುಂದೆ ಡಲ್ ಆಗಿದೆ ಅನ್ನುವುದಕ್ಕೆ ಹಾವೇರಿ ಜಿಲ್ಲೆಯ ಫಲಿತಾಂಶವೇ ಸಾಕ್ಷಿ. ಬಜರಂಗದಳ ಬ್ಯಾನ್ ಮೊದಲಾದ ಸೆನ್ಸಿಟಿವ್ ವಿಷಯಗಳನ್ನು ಬಿಜೆಪಿ ನಂಬಿ ಕೂತಿತ್ತು ಹೊರತು ತಾನು ಮಾಡಿದ ಅಭಿವೃದ್ಧಿಯ ಯೋಜನೆಗಳ ಬಗ್ಗೆ ಗಟ್ಟಿಯಾಗಿ ಹೇಳಲಿಲ್ಲ ಅನ್ನುವುದು ಕೊರತೆ.
ಒಟ್ಟು ಪರಿಣಾಮವಾಗಿ ಕಾಂಗ್ರೆಸ್ ಪರವಾದ ಅಲೆ ಕರ್ನಾಟಕದಲ್ಲಿ ಕಂಡು ಬಂದಿದೆ.









































































































error: Content is protected !!
Scroll to Top