ರಿಕ್ಷಾದ ಮೇಲೆ ಮರ ಉರುಳಿ ಇಬ್ಬರು ಪ್ರಯಾಣಿಕರು ಸಾವು

ಕಾಪು-ಶಿರ್ವ ರಸ್ತೆಯಲ್ಲಿ ಮಲ್ಲಾರು ಬಳಿ ಸಂಭವಿಸಿದ ಘಟನೆ

ಕಾಪು: ನಿನ್ನೆ ರಾತ್ರಿ ಸುರಿದ ಭಾರಿ ಗಾಳಿ ಮಳೆಯಿಂದಾಗಿ ಕಾಪು–ಶಿರ್ವ ರಸ್ತೆಯಲ್ಲಿ ಬೃಹತ್‌ ಮರ ಆಟೋ ರಿಕ್ಷಾದ ಮೇಲೆ ಬುಡಮೇಲಾಗಿ ಬಿದ್ದು ಇಬ್ಬರು ದುರ್ಮರಣವನ್ನಪ್ಪಿದ್ದಾರೆ. ಮಲ್ಲಾರು ಚಂದ್ರನಗರದ ಬಳಿ ಗುರುವಾರ ರಾತ್ರಿ 8 ಗಂಟೆ ಹೊತ್ತಿಗೆ ಈ ದುರ್ಘಟನೆ ಸಂಭವಿಸಿದ್ದು, ರಿಕ್ಷಾದಲ್ಲಿದ್ದ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದರೆ, ಚಾಲಕ ಪವಾಡ ಸದೃಶವಾಗಿ ಪಾರಾಗಿದ್ದಾರೆ.
ಕಾಪುವಿನಿಂದ ಪಾದೂರಿಗೆ ತೆರಳುತ್ತಿದ್ದ ರಿಕ್ಷಾದ ಮೇಲೆ ಬೃಹತ್‌ ಗಾತ್ರದ ಧೂಪದ ಮರ ಉರುಳಿ ಬಿದ್ದಾಗ ಇಬ್ಬರು ಪ್ರಯಾಣಿಕರು ರಿಕ್ಷಾದೊಳಗೆ ಸಿಲುಕಿಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪಾದೂರು ಕೂರಾಲು ರೈಸ್‌ಮಿಲ್‌ ಬಳಿಯ ನಿವಾಸಿ ಪುಷ್ಪಾ ಕುಲಾಲ್‌ (45) ಮತ್ತು ಕಳತ್ತೂರು ನಿವಾಸಿ ಕೃಷ್ಣ (48) ಮೃತಪಟ್ಟವರು. ರಿಕ್ಷಾ ಚಾಲಕ ಷರೀಫ್ ಪವಾಡ ಸದೃಶ ರೀತಿಯಲ್ಲಿ ರಿಕ್ಷಾದಿಂದ ಜಿಗಿದು ಪಾರಾಗಿದ್ದಾರೆ.
ರಿಕ್ಷಾ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಮರವನ್ನು ತೆರವುಗೊಳಿಸಲು ಹರಸಾಹಸ ಪಡಬೇಕಾಯಿತು. ಪೊಲೀಸ್‌, ಮೆಸ್ಕಾಂ, ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ದಳ ಸಹಿತ ನೂರಾರು ಮಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿ ಜೆಸಿಬಿ, ಕ್ರೇನ್‌ ಸಹಾಯದಿಂದ ಒಂದೂವರೆ ಗಂಟೆ ಪರಿಶ್ರಮದ ಬಳಿಕ ಮರವನ್ನು ಬದಿಗೆ ಸರಿಸಲಾಯಿತು. ರಿಕ್ಷಾದೊಳಗೆ ಸಿಲುಕಿದ್ದವರು ಅಷ್ಟರಲ್ಲೇ ಮೃತಪಟ್ಟಿದ್ದರು. ಮೃತದೇಹಗಳನ್ನು ಆ್ಯಂಬುಲೆನ್ಸ್‌ ಮೂಲಕ ಉಡುಪಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು.
ಪುಷ್ಪಾ ಕುಲಾಲ್‌ ಕಾಪುವಿನಿಂದ ಮನೆಗೆ ತೆರಳುತ್ತಿದ್ದರು. ಅವರು ಪತಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮನೆಯಲ್ಲಿ ಶಾಶ್ವತ ಅಂಗೈವಕಲ್ಯದಿಂದ ಬಳಲುತ್ತಿರುವ ಸಹೋದರನೊಬ್ಬನಿದ್ದು, ಅವರ ಸಂಪೂರ್ಣ ಆರೈಕೆಯ ಜವಾಬ್ದಾರಿಯನ್ನು ಪುಷ್ಪಾ ಅವರೇ ನಿರ್ವಹಿಸುತ್ತಿದ್ದರು. ತಾಯಿಯಂತೆ ಆರೈಕೆ ಮಾಡುತ್ತಿದ್ದ ಸಹೋದರಿಯನ್ನು ಕಳೆದುಕೊಂಡ ಅವರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಕೃಷ್ಣ ಮುಖಾರಿ ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಸ್ಥಳದಲ್ಲಿ ಜಮಾಯಿಸಿದ ಸಾವಿರಾರು ಮಂದಿಯನ್ನು ನಿಯಂತ್ರಿಸಲು ಕಾಪು ಎಸ್‌ಐ ಸುಮಾ ಬಿ., ಕ್ರೈಂ ಎಸ್‌ಐ ಭರತೇಶ ಕಂಕಣವಾಡಿ ಸಹಿತ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬಂದಿ ಪರದಾಡುವಂತಾಯಿತು. ಜನ ಮತ್ತೆ ಮತ್ತೆ ಘಟನಾ ಸ್ಥಳದಲ್ಲಿ ಜಮಾಯಿಸಿದ ಪರಿಣಾಮ ರಕ್ಷಣಾ ಕಾರ್ಯಾಚರಣೆ ನಡೆಸಲೂ ತೊಂದರೆಯಾಗಿದ್ದು, ಜನರನ್ನು ನಿಯಂತ್ರಿಸಲು ಸ್ಥಳೀಯರು ಪೊಲೀಸರೊಂದಿಗೆ ಕೈ ಜೋಡಿಸಿದ್ದರು. ರಸ್ತೆ ಸಂಚಾರವೂ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ವಾಹನಗಳಿಗೆ ಬದಲಿ ರಸ್ತೆ ಮೂಲಕ ಸಂಚರಿಸಲು ಅನುವು ಮಾಡಿಕೊಡಲಾಯಿತು.

ಮರ ಬೀಳುವಾಗ ಮತ್ತೂಂದು ರಿಕ್ಷಾ ಸ್ಪಲ್ಪದರಲ್ಲೇ ಪಾರಾಗಿದ್ದು ಚಾಲಕನ ಸಕಾಲಿಕ ಕ್ರಮದಿಂದ ಎಲ್ಲರೂ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ. ಮರ ಬೀಳುತ್ತಿರುವುದನ್ನು ಗಮನಿಸಿದ ಚಾಲಕ ಕೂಡಲೇ ರಿಕ್ಷಾವನ್ನು ಮುಂದಕ್ಕೆ ಚಲಾಯಿಸಲು ಯತ್ನಿಸಿದಾಗ ರಿಕ್ಷಾ ಮಗುಚಿ ಬಿದ್ದಿತು. ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

















































error: Content is protected !!
Scroll to Top