70 ಜನರಿಗೆ ಗಾಯ
ಶಿವಮೊಗ್ಗ : ಶಿವಮೊಗ್ಗ ತಾಲೂಕಿನ ಚೋರಡಿ ಗ್ರಾಮದ ಬಳಿ ನಿನ್ನೆ ರಾತ್ರಿ ಎರಡು ಖಾಸಗಿ ಬಸ್‌ಗಳು ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿದ್ದಾರೆ. ಭೀಕರ ಅಪಘಾತದಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿರುವುದರಿಂದ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.
ಶ್ರೀನಿವಾಸ ಮತ್ತು ಲಕ್ಷ್ಮಿ ಹೆಸರಿನ ಖಾಸಗಿ ಬಸ್ಸುಗಳ ಮುಖಾಮುಖಿ ಡಿಕ್ಕಿಯಾಗಿವೆ. 70ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಚೋರಡಿ ಸಮೀಪದ ಕುಮದ್ವತಿ ನದಿಯ ಸೇತುವೆ ಮೇಲೆ ಅಪಘಾತ ಸಂಭವಿಸಿದ್ದು, ಅಪಘಾತವಾದ ರಭಸಕ್ಕೆ ಎರಡೂ ಬಸ್‌ಗಳ ಅರ್ಧ ಭಾಗವೇ ಸಂಪೂರ್ಣ ನಜ್ಜುಗುಜ್ಜಾಗಿವೆ. ಕುಂಸಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಶಿವಮೊಗ್ಗದಿಂದ ಶಿಕಾರಿಪುರಕ್ಕೆ ತೆರಳುತ್ತಿದ್ದ ಹಾಗೂ ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಬಸ್‌ಗಳು ಡಿಕ್ಕಿಯಾಗಿವೆ. ರಸ್ತೆಯ ನಡುವೆಯೇ ಅಪಘಾತ ಸಂಭವಿಸಿರುವುದರಿಂದ ಹೆದ್ದಾರಿ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಅಪಘಾತದಿಂದಾಗಿ ಶಿವಮೊಗ್ಗ–ಸಾಗರ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಎರಡು ಬದಿಯಲ್ಲಿ ಸುಮಾರು ಎರಡು ಕಿ.ಮೀ.ನಷ್ಟು ಟ್ರಾಫಿಕ್ ಜಾಮ್ ಉಂಟಾಗಿ ಕುಂಸಿ ಮತ್ತು ಶಿವಮೊಗ್ಗದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
























