ದಕ್ಷಿಣ ಆಫ್ರಿಕದಲ್ಲಿ ಬಳಸಿದ ಮತಯಂತ್ರಗಳಲ್ಲಿ ಕರ್ನಾಟಕದಲ್ಲಿ ಮತದಾನ

ಆರೋಪದ ಮೂಲ ಬಹಿರಂಗಪಡಿಸಲು ಕಾಂಗ್ರೆಸ್‌ಗೆ ಆಯೋಗ ಸೂಚನೆ

ಬೆಂಗಳೂರು: ದಕ್ಷಿಣ ಆಫ್ರಿಕದಲ್ಲಿ ಬಳಸಿದ ಮತಯಂತ್ರಗಳನ್ನು ಕರ್ನಾಟಕದಲ್ಲಿ ಅಸೆಂಬ್ಲಿ ಚುನಾವಣೆಗೆ ಬಳಸಲಾಗಿದೆ ಎಂಬ ಆರೋಪವನ್ನು ಸಾಬೀತುಪಡಿಸಿ ತೋರಿಸಲು ಕಾಂಗ್ರೆಸ್‌ಗೆ ಚುನಾವಣಾ ಅಯೋಗ ಹೇಳಿದೆ. ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗುತ್ತಿದ್ದಂತೆ ಕಾಂಗ್ರೆಸ್‌ ದಕ್ಷಿಣ ಆಫ್ರಿಕದ ಚುನಾವಣೆಗೆ ಬಳಸಿದ ಮತಯಂತ್ರಗಳನ್ನು ಕರ್ನಾಟಕದಲ್ಲಿ ಬುಧವಾರ ನಡೆದ ಮತದಾನಕ್ಕೆ ಬಳಸಲಾಗಿದೆ ಎಂಬ ಆರೋಪ ಮಾಡಿತ್ತು.
ಕಾಂಗ್ರೆಸ್‌ನ ಈ ಹೇಳಿಕೆಯನ್ನು ತಿರಸ್ಕರಿಸಿರುವ ಚುನಾವಣಾ ಆಯೋಗ ಇಂತಹ ಸುಳ್ಳು ಮಾಹಿತಿಗಳನ್ನು ಹರಡುವ ತನ್ನ ಮೂಲಗಳನ್ನು ಕಾಂಗ್ರೆಸ್ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಹೇಳಿದೆ.
ಮೇ 8ರಂದು ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ ಕಾಂಗ್ರೆಸ್ ಇವಿಎಂ ಯಂತ್ರಗಳ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಬಳಸಿದ ಇವಿಎಂಗಳನ್ನು ಕರ್ನಾಟಕ ಚುನಾವಣೆಯಲ್ಲಿ ಮರುಮೌಲ್ಯಮಾಪನ ಮತ್ತು ಮರುಪರಿಶೀಲನೆಯ ಪ್ರಕ್ರಿಯೆಗೆ ಒಳಪಡಿಸದೆ ಮರುಬಳಕೆ ಮಾಡಲಾಗುತ್ತಿದೆಯೇ ಎಂದು ಕಾಂಗ್ರೆಸ್ ಪತ್ರದಲ್ಲಿ ವಿವರಣೆ ಕೇಳಿತ್ತು. ಈ ಯಂತ್ರಗಳನ್ನು ಕರ್ನಾಟಕ ಚುನಾವಣೆಯಲ್ಲಿ ಭಾರತೀಯ ಷರತ್ತುಗಳಿಗೆ ಅನುಗುಣವಾಗಿ ಪರಿಶೀಲನೆ ಪ್ರಕ್ರಿಯೆಗೆ ಒಳಪಡಿಸದೆ ಬಳಸಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಆರೋಪ ಕುರಿತು ಆಯೋಗವು ಕಾಂಗ್ರೆಸ್‌ನಿಂದ ಮಾಹಿತಿ ಕೇಳಿತ್ತು.
ಪಕ್ಷದ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಬರೆದ ಪತ್ರದಲ್ಲಿ ಕಾಂಗ್ರೆಸ್‌ನ ಆರೋಪವನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ. ಇವಿಎಂಗಳನ್ನು ದಕ್ಷಿಣ ಆಫ್ರಿಕಾಕ್ಕೆ ಕಳುಹಿಸಲಾಗಿಲ್ಲ ಅಥವಾ ಆ ದೇಶವು ಇವಿಎಂಗಳನ್ನು ಬಳಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಕರ್ನಾಟಕ ಚುನಾವಣೆಯಲ್ಲಿ ಹೊಸ ECIL ತಯಾರಿಸಿದ ಇವಿಎಂಗಳನ್ನು ಮಾತ್ರ ಬಳಸಲಾಗುವುದು ಎಂದು ಗೊತ್ತಿದ್ದೂ ಕಾಂಗ್ರೆಸ್ ಇಂತಹ ಸುಳ್ಳು ಆರೋಪಗಳನ್ನು ಮಾಡಿದೆ ಎಂದು ಆಯೋಗ ಹೇಳಿದೆ.

ಆರೋಪದ ಮೂಲ ಬಹಿರಂಗಪಡಿಸುಲು ಸವಾಲು

ಇಂತಹ ಗಂಭೀರ ಆರೋಪಗಳನ್ನು ಪಕ್ಷ ಯಾವ ಆಧಾರದ ಮೇಲೆ ಹರಡಿದೆ ಎಂಬ ಮಾಹಿತಿಯನ್ನು ಸಾರ್ವಜನಿಕಗೊಳಿಸಬೇಕು. ಇದರ ವಿರುದ್ಧ ತಾವು ತೆಗೆದುಕೊಂಡ ಕ್ರಮವನ್ನು ತಿಳಿಸಬೇಕು ಎಂದು ಆಯೋಗ ಹೇಳಿದೆ. ಮೇ 15ರಂದು ಸಂಜೆ 5 ಗಂಟೆಯೊಳಗೆ ಕಾಂಗ್ರೆಸ್ ಉತ್ತರಿಸಬೇಕು. ಅಲ್ಲದೆ ತಾವು ತೆಗೆದುಕೊಂಡ ಕ್ರಮವನ್ನು ಖಚಿತಪಡಿಸಬೇಕು ಎಂದು ಆಯೋಗ ಹೇಳಿದೆ.







































































error: Content is protected !!
Scroll to Top