ಕಾನೂನು ಕಣಜ : ಗ್ರಾಹಕರ ಸಂರಕ್ಷಣಾ ಕಾಯ್ದೆ 1986

  1. ಗ್ರಾಹಕ ಸಂರಕ್ಷಣಾ ಕಾಯ್ದೆ 1986 ಎಂಬ ಕಾಯ್ದೆಯು 24-12-1986 ರಿಂದ ಭಾರತ ದೇಶಾದ್ಯಂತ ಜಾರಿಯಲ್ಲಿದ್ದು ದೇಶದ ಪ್ರತಿಯೊಬ್ಬ ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವ ಮತ್ತು ದೋಷಪೂರಿತ ಉತ್ಪನ್ನಗಳು, ಅತೃಪ್ತಿಕರ
    ಸೇವೆಗಳು ಮತ್ತು ಅನ್ಯಾಯಕರ ವ್ಯಾಪಾರ, ಅಭ್ಯಾಸಗಳ ವಿರುದ್ದ ಗ್ರಾಹಕರಿಗೆ ಸುರಕ್ಷತೆಯನ್ನು ಒದಗಿಸುವುದು ಈ ಕಾನೂನಿನ ಮುಖ್ಯ ಉದ್ದೇಶವಾಗಿರುತ್ತದೆ. ಈ ಕಾನೂನು ಅನೇಕ ತಿದ್ದುಪಡಿಯೊಂದಿಗೆ ಈಗ ಗ್ರಾಹಕರಿಗೆ ಬಹಳ
    ಅನುಕೂಲಕರವಾದ ಮತ್ತು ಉಪಯುಕ್ತವಾದ ಕಾನೂನಾಗಿ ಗ್ರಾಹಕರ ಹಿತದೃಷ್ಟಿಯನ್ನು ಸಂರಕ್ಷಿಸುತ್ತಿದೆ.
  2. ಪ್ರತಿಯೊಬ್ಬ ಗ್ರಾಹಕನು ಮೇಲ್ಕಾಣಿಸಿದ ಕಾಯ್ದೆಯನ್ವಯ ಮುಖ್ಯವಾದ ಎಂಟು ರೀತಿಯ ಹಕ್ಕುಗಳನ್ನು ಹೊಂದಿದ್ದು ಇವುಗಳು
    (1) ರಕ್ಷಣೆಯ ಹಕ್ಕು
    (2) ಮಾಹಿತಿ ಪಡೆಯುವ ಹಕ್ಕು
    (3) ಆಯ್ಕೆಯ ಹಕ್ಕು
    (4) ದೂರು ನೀಡುವ ಹಕ್ಕು
    (5) ಪರಿಹಾರ ಪಡೆಯುವ ಹಕ್ಕು
    (6) ಗ್ರಾಹಕ ಶಿಕ್ಷಣದ ಹಕ್ಕು
    (7) ಪ್ರಾತಿನಿಧ್ಯದ ಹಕ್ಕು
    (8) ಆರೋಗ್ಯ ಪೂರ್ಣ ಪರಿಸರದ ಹಕ್ಕು
  3. ಪ್ರತಿಯೊಬ್ಬ ಗ್ರಾಹಕನು ಸರಕು ಮತ್ತು ಸೇವೆಗಳ ವಿವಿಧ ಅಂಶಗಳ ಬಗ್ಗೆ ಮಾಹಿತಿ ಪಡೆಯುವ ಹಕ್ಕನ್ನು ಹೊಂದಿರುತ್ತಾನೆ. ಇದು ಸರಕು ಅಥವಾ ಸೇವೆಗಳ ಪ್ರಮಾಣ, ಗುಣಮಟ್ಟ, ಶುದ್ಧತೆ, ಸಾಮರ್ಥ್ಯ, ಬೆಲೆ ಮತ್ತು ಗುಣ ಮಟ್ಟದ
    ಮಾಹಿತಿಯಾಗಿರಬಹುದು. ಅಪಾಯಕಾರಿ ಸರಕುಗಳು ಮತ್ತು ಸೇವೆಗಳಿಂದ ರಕ್ಷಿಸಲು ಜೀವ ಮತ್ತು ಆಸ್ತಿಗೆ ಅಪಾಯಕಾರಿಯಾಗಬಹುದಾದ ಸರಕು ಮತ್ತು ಸೇವೆಗಳ ವಿರುದ್ಧ ರಕ್ಷಣೆಯ ಹಕ್ಕು ಸೇರಿರುತ್ತದೆ.
  4. ಅನ್ಯಾಯದ ಅಥವಾ ನಿರ್ಭಂದಿತ ವ್ಯಾಪಾರ ಪದ್ಧತಿಗಳಿಂದ ರಕ್ಷಿಸಲು ಸ್ಪರ್ಧಾತ್ಮಕ ಬೆಲೆಯಲ್ಲಿ ವಿವಿಧ ಸರಕುಗಳು ಮತ್ತು ಸೇವೆಯನ್ನು ಪಡೆಯುವ ಹಕ್ಕನ್ನು ಗ್ರಾಹಕನು ಹೊಂದಿರುತ್ತಾನೆ.
  5. ಮೇಲ್ಕಾಣಿಸಿದ ಕಾನೂನಿನ ಪ್ರಕಾರ ಸರಕಾರವು ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಹಾಗೂ ರಾಷ್ಟ್ರ ಮಟ್ಟದಲ್ಲಿ ಗ್ರಾಹಕರ ವೇದಿಕೆಯನ್ನು ಗ್ರಾಹಕರ ಹಿತರಕ್ಷಣೆಗಾಗಿ ರೂಪಿಸಿದ್ದು ಅದು ಕಾನೂನಾತ್ಮಕವಾಗಿ ತನ್ನ ಕಾರ್ಯವನ್ನು ನಿರ್ವಹಿಸಿಕೊಂಡು ಬರುತ್ತಿದೆ.
    ಯಾವುದೇ ಗ್ರಾಹಕನು ಮಾರುಕಟ್ಟೆಯಲ್ಲಿ ಖರೀದಿಸುವ ಯಾವುದೇ ವಸ್ತು ದೋಷಪೂರಿತವಾಗಿದ್ದಲ್ಲಿ ಅಥವಾ ತಾನು ಪಡೆಯುವ ಸೇವೆಯು ಸೇವಾ ನ್ಯೂನತೆಗಳಿಂದ ಕೂಡಿದ್ದಲ್ಲಿ ಮತ್ತು ಇದರಿಂದಾಗಿ ಗ್ರಾಹಕನಿಗೆ ಯಾವುದೇ ನಷ್ಟ ಉಂಟಾದಲ್ಲಿ ಆತ ನೇರವಾಗಿ ಅಥವಾ ವಕೀಲರ ಮೂಲಕ ಗ್ರಾಹಕರ ವೇದಿಕೆಯನ್ನು ಸಂಪರ್ಕಿಸಿ ತನ್ನ ನಷ್ಟಕ್ಕೆ ಕಾರಣಕರ್ತರಾದವರ ವಿರುದ್ದ ಪ್ರಕರಣವನ್ನು ದಾಖಲಿಸಿ ಸೂಕ್ತ ಪರಿಹಾರವನ್ನು ಪಡೆಯಬಹುದಾಗಿದೆ.
  6. ಜಿಲ್ಲಾ ಗ್ರಾಹಕ ಆಯೋಗವು 1 ಕೋಟಿ ಮೌಲ್ಯದ ಪ್ರಕರಣದ ವಿಚಾರಣೆಯ ನ್ಯಾಯ ವ್ಯಾಪ್ತಿಯನ್ನು ಹೊಂದಿರುತ್ತದೆ. 5 ಲಕ್ಷ ಮೌಲ್ಯಕ್ಕಿಂತ ಕಡಿಮೆಯ ಪ್ರಕರಣಗಳಿಗೆ ನ್ಯಾಯಾಲಯದ ಶುಲ್ಕ ಇರುವುದಿಲ್ಲ. 5 ಲಕ್ಷಕ್ಕಿಂತ ಮೇಲೆ 10 ಲಕ್ಷ ಮೌಲ್ಯದ ಒಳಗಿನ ಪ್ರಕರಣಗಳಿಗೆ ರೂಪಾಯಿ 200/- ಶುಲ್ಕ ಹಾಗೂ 10 ಲಕ್ಷದ ಮೇಲೆ ಹಾಗೂ 20 ಲಕ್ಷದ ಒಳಗಿನ ಮೌಲ್ಯದ ಪ್ರಕರಣಗಳಿಗೆ ರೂಪಾಯಿ 400/- ಶುಲ್ಕ ಮತ್ತು 20 ಲಕ್ಷಕ್ಕಿಂತ 50 ಲಕ್ಷದ ಒಳಗಿನ ಮೌಲ್ಯದ ರೂಪಾಯಿ 1000/- ಶುಲ್ಕ ಮತ್ತು 50 ಲಕ್ಷದಿಂದ 1 ಕೋಟಿ ವರೆಗಿನ ಮೌಲ್ಯದ ಪ್ರಕರಣಗಳಿಗೆ ರೂಪಾಯಿ 1000/-ಶುಲ್ಕ ತೆರಬೇಕಾಗುತ್ತದೆ.
  7. ರಾಜ್ಯ ಗ್ರಾಹಕ ಆಯೋಗವು 1 ಕೋಟಿಯಿಂದ 10 ಕೋಟಿ ವರೆಗಿನ ಮೌಲ್ಯದ ಪ್ರಕರಣಗಳ ವಿಚಾರಣೆಯ ನ್ಯಾಯ ವ್ಯಾಪ್ತಿಯನ್ನು ಹೊಂದಿದ್ದು 1 ಕೋಟಿಯಿಂದ 2 ಕೋಟಿವರೆಗಿನ ಮೌಲ್ಯದ ಪ್ರಕರಣಗಳಿಗೆ ರೂಪಾಯಿ 2500/- ಶುಲ್ಕ, 2 ಕೋಟಿಯಿಂದ 4 ಕೋಟಿ ವರೆಗಿನ ಮೌಲ್ಯದ ಪ್ರಕರಣಕ್ಕೆ ರೂಪಾಯಿ 3000/- ಶುಲ್ಕ 4 ಕೋಟಿಯಿಂದ 6 ಕೋಟಿವರೆಗಿನ ಮೌಲ್ಯದ ಪ್ರಕರಣಕ್ಕೆ ರೂಪಾಯಿ 4000/-ಶುಲ್ಕ 6 ಕೋಟಿಯಿಂದ 8 ಕೋಟಿ ವರೆಗಿನ
    ಮೌಲ್ಯದ ಪ್ರಕರಣಗಳಿಗೆ ರೂಪಾಯಿ 5000/- ಶುಲ್ಕ ಮತ್ತು 6 ಕೋಟಿಯಿಂದ 10 ಕೋಟಿವರೆಗಿನ ಮೌಲ್ಯದ ಪ್ರಕರಣಕ್ಕೆ ರೂಪಾಯಿ 6000/- ಶುಲ್ಕ ಪಾವತಿ ಮಾಡಬೇಕಾಗಿರುತ್ತದೆ.
  8. ರಾಷ್ಟ್ರೀಯ ಆಯೋಗವು 10 ಕೋಟಿ ರೂಪಾಯಿಗಿಂತ ಜಾಸ್ತಿ ಮೌಲ್ಯದ ಪ್ರಕರಣಗಳ ವಿಚಾರಣೆಯ ಅಧಿಕಾರ ವ್ಯಾಪ್ತಿಯನ್ನು ಹೊಂದಿದ್ದು ಈ ಬಗ್ಗೆ ರೂಪಾಯಿ 7500/- ನಿರ್ದಿಷ್ಟ ಶುಲ್ಕವನ್ನು ತೆರಬೇಕಾಗುತ್ತದೆ.

ಕೆ. ವಿಜೇಂದ್ರ ಕುಮಾರ್
ಹಿರಿಯ ವಕೀಲರು, ಕಾರ್ಕಳ
ಮೊ: 98452 32490/ 96116 82681

















































error: Content is protected !!
Scroll to Top