ಕಾನೂನು ಕಣಜ : ಸ್ವತ್ತಿನ ಅಪ್ರಾಮಾಣಿಕ ದುರ್ವಿನಿಯೋಗ, ದುರುಪಯೋಗ ಮತ್ತು ನಂಬಿಕೆದ್ರೋಹ   

  1. ಇತರ ವ್ಯಕ್ತಿಗೆ ಸಂಬಂದಪಟ್ಟ ಯಾವುದೇ ಚರ ಸ್ವತ್ತನ್ನು ಒಬ್ಬ ವ್ಯಕ್ತಿಯು ದುರುದ್ದೇಶಪೂರ್ವಕವಾಗಿ ಮತ್ತು ಅಪ್ರಾಮಾಣಿಕವಾಗಿ ದುರ್ವಿನಿಯೋಗ ಅಥವಾ ದುರುಪಯೋಗಪಡಿಸಿ ತನ್ನ ಸ್ವಂತ ಉಪಯೋಗಕ್ಕೆ ಬಳಸಿಕೊಂಡಲ್ಲಿ ಅಂತಹ ವ್ಯಕ್ತಿಯು, ಸ್ವತ್ತಿನ ಅಪ್ರಾಮಾಣಿಕ ದುರ್ವಿನಿಯೋಗದ ಅಪರಾಧಕ್ಕಾಗಿ ಕಾನೂನಿನ ಪ್ರಕಾರ ಎರಡು ವರ್ಷಗಳವರೆಗಿನ ಜೈಲು ಶಿಕ್ಷೆಗೆ ಅಥವಾ ಜುಲ್ಮಾನೆಗೆ ಅಥವಾ ಅವೆರಡರಿಂದಲೂ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.
  2. ಮೃತ ವ್ಯಕ್ತಿಗೆ ಸಂಬಂದಪಟ್ಟ ಯಾವುದೇ ಒಂದು ಸ್ವತ್ತನ್ನು ಆತನ ಮರಣದ ನಂತರ ಆ ಸ್ವತ್ತಿಗೆ ಕಾನೂನಿನ ಪ್ರಕಾರ ಅಥವಾ ವಿಧಿ ಸಮ್ಮತವಾಗಿ ಹಕ್ಕು ಹೊಂದಿರದ ವ್ಯಕ್ತಿಯು ತನಗೆ ಸದರಿ ಸ್ವತ್ತಿನ ಮೇಲೆ ಯಾವುದೇ ರೀತಿಯ ಕಾನೂನು ಬದ್ದ ಹಕ್ಕು ಇರುವುದಿಲ್ಲ ಎಂಬುವುದಾಗಿ ಗೊತ್ತಿದ್ದು ಸಹಾ ಆ ಸ್ವತ್ತನ್ನು ಅಪ್ರಾಮಾಣಿಕವಾಗಿ ದುರ್ವಿನಿಯೋಗಿಸಿದಲ್ಲಿ ಅಥವಾ ತನ್ನ ಸ್ವಂತಕ್ಕಾಗಿ ಉಪಯೋಗಿಸಿಕೊಂಡಲ್ಲಿ ಅಂತಹ ಪ್ರಕರಣವು ಕಾನೂನಿನ ಪ್ರಕಾರ ಸ್ವತ್ತಿನ ಅಪ್ರಾಮಾಣಿಕ ದುರ್ವಿನಿಯೋಗ ಮತ್ತು ದುರುಪಯೋಗದ ಶಿಕ್ಷಾರ್ಹ ಅಪರಾಧವಾಗಿರುತ್ತದೆ ಮತ್ತು ಸಂಬಂದಪಟ್ಟ ವ್ಯಕ್ತಿಯು ಮೂರು ವರ್ಷಗಳವರೆಗಿನ ಜೈಲು ಶಿಕ್ಷೆಗೆ ಅಥವಾ ಜುಲ್ಮಾನೆಗೆ ಅಥವಾ ಅವೆರಡರಿಂದಲೂ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.
  3. ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕಿಯ ಮೇಲಿನ ನಂಬಿಕೆಯ ಮೇಲೆ ತನ್ನ ಸ್ವತ್ತನ್ನು ಅಥವಾ ಅದರ ಮೇಲಿನ ಅಧಿಕಾರವನ್ನು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಅಥವಾ ಕಾರಣಕ್ಕೆ ತಾತ್ಕಾಲಿಕವಾಗಿ ಹಸ್ತಾಂತರ ಮಾಡಿದ ಸಂಧರ್ಭದಲ್ಲಿ ಸ್ವತ್ತನ್ನು ಪಡೆದ ಅಥವಾ ಅದರ ಮೇಲಿನ ಅಧಿಕಾರವನ್ನು ಪಡೆದ ವ್ಯಕ್ತಿಯು ಅನಧಿಕೃತವಾಗಿ ಮತ್ತು ವಿಧಿಸಮ್ಮತ ಕರಾರು ಅಥವಾ ನಿರ್ದೇಶನವನ್ನು ಉಲ್ಲಂಘಿಸಿ ಆ ಸ್ವತ್ತನ್ನು ಅಥವಾ ಸ್ವತ್ತಿನ ಮೇಲಿನ ಅಧಿಕಾರವನ್ನು ಅಪ್ರಾಮಾಣಿಕವಾಗಿ ದುರ್ವಿನಿಯೋಗಿಸಿದಲ್ಲಿ ಅಥವಾ ಕಾನೂನು ಬಾಹಿರವಾಗಿ ತನ್ನ ಸ್ವಂತ ಉಪಯೋಗಕ್ಕೆ ಬಳಸಿಕೊಂಡಲ್ಲಿ ಹಾಗೆ ಮಾಡಿದ ವ್ಯಕ್ತಿಯು ಕಾನೂನಿನ ಪ್ರಕಾರ ಅಪರಾಧಿಕ ನಂಬಿಕೆದ್ರೋಹದ, ಅಪರಾಧಕ್ಕಾಗಿ ಆತನು ಮೂರು ವರ್ಷಗಳವರೆಗಿನ ಜೈಲು ಶಿಕ್ಷೆಗೆ ಅಥವಾ ಜುಲ್ಮಾನೆಗೆ ಅಥವಾ ಅವೆರಡರಿಂದಲೂ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.
  4. ಯಾವುದೇ ಖಾಸಗಿ ಅಥವಾ ಸಾರ್ವಜನಿಕ ಸಂಘ ಅಥವಾ ಸಂಸ್ಥೆಯಲ್ಲಿ ಸೇವೆಯಲ್ಲಿರುವ ವ್ಯಕ್ತಿಯು ತನ್ನ ಜವಾಬ್ದಾರಿ ಅಥವಾ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ತನ್ನ ಹತೋಟಿಯಲ್ಲಿರುವ ಇತರರ ಅಥವಾ ಸಾರ್ವಜನಿಕ ಸ್ವತ್ತನ್ನು ತನ್ನ ಸ್ವಂತಕ್ಕಾಗಿ ಅಪ್ರಾಮಾಣಿಕವಾಗಿ ದುರ್ವಿನಿಯೋಗಿಸಿದಲ್ಲಿ ಅಥವಾ ತನ್ನ ಸ್ವಂತಕ್ಕಾಗಿ ಉಪಯೋಗಿಸಿಕೊಂಡಲ್ಲಿ ಅಂತಹ ಪ್ರಕರಣವನ್ನು ಕಾನೂನಿನ ಪ್ರಕಾರ ಸೇವಕನಿಂದ ಅಪರಾಧಿಕ ನಂಬಿಕೆದ್ರೋಹದ ಅಪರಾಧವೆಂದು ಪರಿಗಣಿಸಬೇಕಾಗುತ್ತದೆ ಮತ್ತು ಸಂಬಂಧಪಟ್ಟ ವ್ಯಕ್ತಿಯು ಅಂತಹ ಅಪರಾಧಕ್ಕಾಗಿ ಏಳು ವರ್ಷಗಳವರೇಗಿನ ಜೈಲು ಶಿಕ್ಷೆಗೆ ಅಥವಾ ಜುಲ್ಮಾನೆಗೆ ಅಥವಾ ಅವೆರಡರಿಂದಲೂ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

✒️ ಕೆ. ವಿಜೇಂದ್ರ ಕುಮಾರ್ ವಕೀಲರು, ಕಾರ್ಕಳ
ಮೊ: 98452 32490/ 96116 82681











































































error: Content is protected !!
Scroll to Top