ಪುತ್ತೂರು : ವಿಧಾನ ಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ಸಿಗದೆ ಇದ್ದ ಕಾರಣ ಬೇಸರಗೊಂಡಿದ್ದ ಅರುಣ್ ಕುಮಾರ್ ಪುತ್ತಿಲ ಅಭಿಮಾನಿಗಳ ಕೋರಿಕೆಯಂತೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.
ಏ. 17ರಂದು ನಾಮಪತ್ರ ಸಲ್ಲಿಸಲಿಕೆ
ಏ.15 ರಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ, ಕಾರ್ಯಕರ್ತರ ಆಕಾಂಕ್ಷೆಯಂತೆ ಹಿಂದುತ್ವದ ಧ್ವನಿಯಾಗಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದೇನೆ ಎಂದು ಘೋಷಿಸಿದರು. ಏ. 17 ರಂದು ಬೆಳಿಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಬೆಳಿಗ್ಗೆ 10 ಗಂಟೆಯಿಂದ ದರ್ಬೆ ವೃತ್ತದಿಂದ ಪುತ್ತೂರು ತಾಲೂಕು ಆಡಳಿತ ಸೌಧದವರೆಗೆ ಮೆರವಣಿಗೆಯಲ್ಲಿ ತೆರಳಿ ಬಳಿಕ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಮೇ 10ರಂದು ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಅರುಣ್ ಕುಮಾರ್ ಪುತ್ತಿಲ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕೆಂದು ಹಿಂದು ಕಾರ್ಯಕರ್ತರ ಒತ್ತಾಯ ನಡೆದಿತ್ತು. ಅಲ್ಲದೆ ಅವರ ಅಭಿಮಾನಿಗಳು ಟ್ವಿಟ್ ಅಭಿಯಾನ ನಡೆಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಅಭ್ಯರ್ಥಿ ಸ್ಥಾನದ ಅವಕಾಶ ಸಿಗದಾಗ ಬೆಂಬಲಿಗರು ತುರ್ತು ಸಭೆ ನಡೆಸಿ ಅರುಣ್ ಕುಮಾರ್ ಪುತ್ತಿಲ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಒತ್ತಾಯ ಮಾಡಿರುವ ಘಟನೆ ಎ.12ರಂದು ಸಂಜೆ ಪುತ್ತೂರು ಕೊಟೇಚಾ ಹೋಲ್‌ನಲ್ಲಿ ನಡೆದಿತ್ತು.

























