ಇದೊಂದು ಜನಾಂಗೀಯ ನಿಂದನೆಯ ಉದ್ಧಟತನದ ಹೇಳಿಕೆ – ಬಿಪಿನ್ ಚಂದ್ರಪಾಲ್
ಕಾರ್ಕಳ : ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯಯವರಿಗೆ ಕುರಿ ಚರ್ಬಿ ತಿಂದು ಕೊಬ್ಬು ಎಂದು ತನ್ನ ಯೋಗ್ಯತೆ ಮೀರಿ ಟೀಕಿಸಿದ ಪ್ರತಾಪ ಸಿಂಹ ಅವರಿಗೆ ಅಹಂಕಾರದ ಚರ್ಬಿ ತಲೆಗಡರಿದೆ. ಇದು ಕುರಿ ಮಾಂಸ ತಿಂದ ಚರ್ಬಿಯಂತಲ್ಲ ಬದಲಾಗಿ ಸಮಾಜಕ್ಕೆ ಕೆಡುಕುಂಟು ಮಾಡುವ ವಿಷಕಾರಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ಆಗ್ರಹ ವ್ಯಕ್ತಪಡಿಸಿದ್ದಾರೆ.
ಪ್ರತಾಪ ಸಿಂಹ ನೀಡಿದ ಹೇಳಿಕೆ ಅವರ ಮನುವಾದಿ ಮಾನವೀಯ ಮತ್ತು ರಾಜಕೀಯ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಮನುವಾದಿಗಳಿಗೆ ಮಾಂಸ ಅಹಂಕಾರವಾಗಿ ಕಾಣುವುದರಲ್ಲಿ ಆಶ್ಚರ್ಯವಿಲ್ಲ. ಪ್ರಧಾನಿ ಮೋದಿಯನ್ನು ಮೆಚ್ಚಿಸುವ ಭರದಲ್ಲಿ ಪ್ರತಾಪಸಿಂಹ ಸಿದ್ಧರಾಮಯ್ಯನವರ ಮೇಲೆ ಮಾಡಿದ ಟೀಕೆ ಸಮಗ್ರ ಮಾಂಸಹಾರಿ ಜನಾಂಗವನ್ನೆ ನಿಂದಿಸಿದಂತಾಗಿದೆ. ಇದೊಂದು ಜನಾಂಗೀಯ ನಿಂದನೆಯ ಉದ್ಧಟತನದ ಹೇಳಿಕೆ. ಇವರ ಈ ವರ್ತನೆ ಬಹು:ಶ ಪ್ರಧಾನಿ ಮೋದೀಜಿಯವರು ನೋಡಲು ಬಂದ ವನ್ಯಜೀವಿ ಹುಲಿಗಳಿಗಿಂತಲೂ ನೀಚ ಮಟ್ಟದ್ದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ 6 ತಿಂಗಳಲ್ಲಿ ಪ್ರತಾಪಸಿಂಹ ಕ್ಷೇತ್ರದಲ್ಲಿ 6 ಜೀವಗಳು ಹುಲಿಗಳಿಗೆ ಬಲಿಯಾಗಿದ್ದು, ಅದೆಷ್ಟೋ ಜಾನುವಾರುಗಳು ಹುಲಿಗಳಿಗೆ ಆಹಾರವಾಗಿವೆ. ಯಾವೊಬ್ಬ ಸಂತ್ರಸ್ತನಿಗೂ ಈವರೆಗೆ ಪೂರಕ ಪರಿಹಾರ ಸಿಕ್ಕಿಲ್ಲ. ಸಂಸದ ಪ್ರತಾಪಸಿಂಹ ಪ್ರಧಾನಿ ಮೋದೀಜಿಯವರನ್ನು ಸಫಾರಿಯೆಡೆಯಿಂದ ಸಂತ್ರಸ್ತರ ಮನೆಗೆ ಬೇಟಿ ನೀಡಿಸಿ ಸಾಂತ್ವನ ಹೇಳಿಸಿ ಪರಿಹಾರ ಕೊಡಿಸುವ ಕೆಲಸ ಮಾಡಬೇಕಿತ್ತು. ಇದು ಒಬ್ಬ ಜನಪ್ರತಿನಿಧಿಯಾದವನ ಕರ್ತವ್ಯವೂ ಆಗಿದೆ. ಆದರೆ ಹೆಲಿಕಾಪ್ಟರ್ ಸದ್ದಿಗೆ ಕಾಡಿನಲ್ಲಿ ಹುಲಿಗಳು ಹೆದರಿ ಗುಹೆ ಸೇರುತ್ತವೆ ಎಂದು ಗೊತ್ತಿದ್ದಾಗ್ಯೂ ಪ್ರಧಾನಿಯವರಿಗೆ ಹುಲಿ ನೋಡಲು ಹೆಲಿಕಾಪ್ಟರ್ ಆಯೋಜಿಸಿ ಹುಲಿಗಳು ನೋಡಲು ಸಿಗದಂತೆ ಮಾಡಿದ ವಿಘ್ನ ಸಂತೋಷಿಗಳಿಗೆ ಇದು ಅರ್ಥ ಆಗಲು ಸಾಧ್ಯವಿಲ್ಲ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
























