ಕಾರ್ಕಳ : ಹಿಂದೂ ಧರ್ಮವು ವಸುದೈವ ಕುಟುಂಬಕಂ ಎಂಬ ತತ್ತ್ವ ನಂಬಿಕೆ ಮೇಲೆ ನಿಂತು ವಿಶ್ವಮಟ್ಟದಲ್ಲಿ ಪ್ರಜ್ವಲಿಸುತ್ತಿದೆ. ನಮ್ಮ ಭಾರತ ದೇಶ ಕಟ್ಟುವಲ್ಲಿ ಹಿಂದುಳಿದ ಸಮುದಾಯದ, ದುಡಿಯುವ ಜನರ ಹನಿ ಹನಿ ಬೆವರಿದೆ. ದುಡಿಯುವ ಜನರು ಹಾಗೂ ಹಿಂದುಳಿದ ಸರ್ವ ಸಮುದಾಯಗಳನ್ನು ಪ್ರತಿನಿಧಿಸುವ ನಮ್ಮ ಕುಲದೈವ ಹನುಮಾನ್ ಜೀ ನಂಬಿಕೆಗೆ, ಭಕ್ತಿಗೆ, ವಿಶ್ವಾಸಕ್ಕೆ ಹಾಗೂ ಸ್ವಾಮಿ ನಿಷ್ಠೆಗೆ ಹೆಸರಾಗಿದ್ದಾರೆ ಎಂದು ಜೈ ಹನುಮ ಸೇನೆಯ ರಾಜ್ಯ ಸಂಚಾಲಕ ಹನುಮಂತಪ್ಪ ತಿಳಿಸಿದರು. ಅವರು ಕಾರ್ಕಳದ ಪ್ರಕಾಶ ಹೋಟೆಲ್‌ನಲ್ಲಿ ಏ.11 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹನುಮನ ಶಕ್ತಿಯ ಕಾರಣ ದುಡಿಯುವ ಜನರು ಹಾಗೂ ಹಿಂದುಳಿದ ಸರ್ವ ಸಮುದಾಯಗಳು ಏನೆಲ್ಲ ಕಷ್ಟ-ಕಾರ್ಪಣ್ಯವನ್ನು ಎದುರಿಸಿಯೂ ದಿಟ್ಟತನದಿಂದ ಜೀವನ ನಡೆಸುತ್ತಿವೆ. ಇಂತಹ ಸಂದರ್ಭದಲ್ಲಿ ಆರಾಧ್ಯ ದೈವವನ್ನು ಆರಾಧಿಸುವ ಜೊತೆಗೆ ನಮ್ಮ ಹನುಮಾನ್ ಜೀ ವಿಚಾರಗಳನ್ನು ಬಲಗೊಳಿಸುವುದು, ಪರಸ್ಪರ ಸಹಕರಿಸುವುದು ಆ ಮೂಲಕ ಸಮುದಾಯಗಳ ಸರ್ವರ ಏಳಿಗೆ ಬಯಸುವುದು ಸರ್ವ ಹನುಮಭಕ್ತರ ಜವಾಬ್ದಾರಿಯಾಗಿದೆ ಎಂದರು.
ಈ ವಿಚಾರಗಳನ್ನು ಇಂದಿನ ದಿನಗಳಲ್ಲಿ ಕಾಲಕಾಲಕ್ಕೂ ದುಡಿಯುತ್ತ ಬಂದಿರುವ ಜನರು ಹಾಗೂ ಹಿಂದುಳಿದ ಸಮುದಾಯದ ಜಾತಿಗಳಿಗೆ ತಲುಪಿಸುವ ಕೆಲಸವಾಗಬೇಕಿದೆ. ಈ ಕಾರ್ಯವು ನಮ್ಮ ಕರ್ತವ್ಯವಾಗಿದೆ. ಹನುಮನ ನಾಡಾಗಿರುವ ಕರ್ನಾಟಕದಲ್ಲಿ ಹನುಮನ ವಿಚಾರಗಳನ್ನು, ಹನುಮನ ಅಂತಃಕರಣದ ಹೃದಯವನ್ನು, ಹನುಮನ ಶಕ್ತಿಯನ್ನು, ಹನುಮ ಭಕ್ತರು ತೋರ್ಪಡಿಸುವ ಜೊತೆಗೆ ಸುಭಿಕ್ಷ ಸಮಾಜವನ್ನು ಕಟ್ಟಿಕೊಡುವುದು ನಮ್ಮೆಲ್ಲರ ಕಾಯಕವಾಗಿದೆ. ಇದರ ಭಾಗವಾಗಿ ಕಾರ್ಕಳದಲ್ಲಿ ಸ್ವತ: ತಾನೇ ಸ್ಪರ್ದಿಸಲಿದ್ದೇನೆ ಎಂದರು.
ಸದೃಢ ಕರ್ನಾಟಕ್ಕಾಗಿ ದೆಹಲಿ ಮಾದರಿಯಂತೆ ಸರಕಾರಿ ಶಾಲೆಗಳನ್ನು ಹೈಟೆಕ್ ಮಾಡುವುದು, ಪಿ.ಯು.ಸಿ.ಯಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸಾರಿಗೆ ಅನಾನೂಕೂಲವಿದ್ದರೆ, ವಸತಿ ನಿಲಯಗಳ ವ್ಯವಸ್ಥೆ, ಶೈಕ್ಷಣಿಕ ಭತ್ಯೆ 10ನೇ ತರಗತಿಯಿಂದ ಸ್ನಾತಕೋತ್ತರ ಪದವಿಯ ಎಲ್ಲಾ ವಿದ್ಯಾರ್ಥಿನಿಯರಿಗೆ ಬಸ್ ಪಾಸ್ ಉಚಿತ ಹಾಗೂ ರೂ. 15,000/- ಸಹಾಯ ಧನ, ಪ್ರತಿ ತಾಲೂಕಿಗೆ ಒಂದರಂತೆ ಎಂ.ಆರ್.ಐ. ಸ್ಕ್ಯಾನಿಂಗ್ ಸೆಂಟರ್ ನಿರ್ಮಾಣ, ಪ್ರತಿ ಜಿಲ್ಲೆಗೊಂದು ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆ ನಿರ್ಮಾಣ, ತಾಲೂಕಿಗೆ ಒಂದರಂತೆ ಮೂಳೆ ಎಲುಬು ಶಸ್ತ್ರ ಚಿಕಿತ್ಸಾ ಆಸ್ಪತ್ರೆ ನಿರ್ಮಾಣ, ಜಿಲ್ಲೆಗೊಂದು ಹೃದಯ ಬ್ಯಾಂಕ್ ಆಸ್ಪತ್ರೆ ನಿರ್ಮಾಣ, ಪ್ರತಿ ತಾಲೂಕ ಆಸ್ಪತ್ರೆಗಳಿಗೆ ವಿಶೇಷ ತಜ್ಞರ 24×7 ವೈದ್ಯಾಧಿಕಾರಿಗಳ ಸೇವೆ ದೊರೆಯಲು ವೈದ್ಯರ ನೇಮಕಾತಿ, ಪ್ರತಿ ಜಿಲ್ಲೆಗೊಂದು ಔಷಧ ಸಂಶೋಧನಾ ಕೇಂದ್ರ ಸ್ಥಾಪನೆ, ಪ್ರತಿ ಆರೋಗ್ಯ ಕೇಂದ್ರದಲ್ಲಿ ಎಲ್ಲಾ ತರಹದ ಔಷಧಿಗಳು ರೋಗಿಗೆ ದೊರೆಯುವಂತೆ ಮಾಡುವುದು. ಜಿಲ್ಲೆಗೊಂದು ಮೂತ್ರಪಿಂಡ ಚಿಕಿತ್ಸಾ ಆಸ್ಪತ್ರೆ ನಿರ್ಮಾಣ ಮುಂತಾದ ಪ್ರಮುಖ ವಿಷಯಗಳ ಮೇಲೆ ಪ್ರಾಮುಖ್ಯತೆ ನೀಡಲಿದ್ದು ಇವುಗಳ ಅನುಷ್ಠಾನಕ್ಕಾಗಿ ನಿರಂತರ ಹೋರಾಟ ನಡೆಸಲಿದ್ದೇವೆ ಎಂದರು.

























