ಕಾರ್ಕಳ : ನಗರದ ಮುಖ್ಯ ರಸ್ತೆಗಳು, ಗ್ರಾಮೀಣ ಭಾಗದ ರಸ್ತೆಗಳು ಡಾಮರೀಕರಣಗೊಂಡು ರಸ್ತೆ ಅಭಿವೃದ್ದಿಯನ್ನು ಸಾಕ್ಷೀಕರಿಸಿದೆ. ಕಾರ್ಕಳ ಹೆಬ್ರಿ ತಾಲೂಕಿನಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ರಸ್ತೆ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿ ಅಭಿವೃದ್ಧಿಪಡಿಸಲಾಗಿದೆ. ಒಳ ರಸ್ತೆಗಳು ಕಾಂಕ್ರಿಟೀಕರಣಗೊಂಡಿದೆ. ಈ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ ಇದಕ್ಕೆ ಅಪವಾದ ಎಂಬಂತೆ ಕಲ್ಲೊಟ್ಟೆ ರಸ್ತೆಯಿದೆ.
ಬಂಡಿಮಠ ಒಳಮಾರ್ಗವಾಗಿ ಸಂಚರಿಸುವ ಕಲ್ಲೊಟ್ಟೆ ರಸ್ತೆಯಲ್ಲಿ ರಸ್ತೆ ಕಾಮಗಾರಿಗೆ ಬಳಸಿದ ಜಲ್ಲಿಕಲ್ಲುಗಳು ರಸ್ತೆ ಮಧ್ಯೆ ಚೆಲ್ಲಾಪಿಲ್ಲಿಯಾಗಿದ್ದು, ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ. ದ್ವಿಚಕ್ರ ಸವಾರರ ಹಾಗೂ ಪಾದಚಾರಿಗಳ ಪಾಡು ಹೇಳತೀರದು. ಇನ್ನು ಇದೇ ರಸ್ತೆಯ ಇಕ್ಕೆಲಗಳಲ್ಲಿ ರಸ್ತೆಯ ಕಾಮಗಾರಿಗಾಗಿ ಹಾಕಿದ ಜಲ್ಲಿಕಲ್ಲು ರಾಶಿಯಿಂದಾಗಿ ವಾಹನ ಮಾತ್ರವಲ್ಲದೇ ಪಾದಚಾರಿಗಳ ಓಡಾಟಕ್ಕೂ ಅಡಚಣೆಯಾಗಿ ಪರಿಣಮಿಸಿದೆ.
ವಿಪತ್ತಿನ ಕಾಮಗಾರಿ – ಸರಿಯಾದ ಕ್ರಮ ಅವಶ್ಯ
ರಸ್ತೆ ಕಾಮಗಾರಿಗೆ ಬಳಸಿದ ಜಲ್ಲಿಕಲ್ಲು ಮತ್ತಿತರ ಕಚ್ಚಾ ಸಾಮಗ್ರಿಗಳು ರಸ್ತೆ ಮಧ್ಯದಲ್ಲೆ ಬಿದ್ದಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಪ್ರತಿನಿತ್ಯ ಈ ರಸ್ತೆಯಾಗಿ ನೂರಾರು ವಾಹನ, ದ್ಚಿಚಕ್ರಗಳು ಓಡಾಟ ಮಾಡುವುದರಿಂದ ಸಂಬಂಧಪಟ್ಟವರು ಈ ಕುರಿತು ವಿಶೇಷ ಕಾಳಜಿ ವಹಿಸುವುದು ಅವಶ್ಯ. ರಸ್ತೆ ಮಧ್ಯದಲ್ಲಿ ಬಿದ್ದಿರುವ ಜಲ್ಲಿಕಲ್ಲುಗಳನ್ನು ಶೀಘ್ರವೇ ತೆರವುಗೊಳಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಪುರಸಭಾ ಆಡಳಿತ ಮತ್ತು ಸಂಬಂಧಪಟ್ಟ ಇಲಾಖೆ ತಕ್ಷಣವೇ ಸೂಕ್ತ ಕ್ರಮವಹಿಸಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಧೂಳಿನದ್ದೆ ಗೋಳು
ಸುತ್ತಲಿನ ಪರಿಸರವು ಧೂಳಿನಿಂದ ಆವೃತವಾಗಿದ್ದು, ಸಮೀಪದ ಮನೆಯ ಜನರ ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರುತ್ತಿದ್ದು, ಉಸಿರಾಟ ಸಮಸ್ಯೆಯನ್ನು ಉಂಟು ಮಾಡುತ್ತಿದೆ. ಧೂಳು ನಿವಾರಣೆಗೆ ನೀರು ಹಾಯಿಸುವ ಕುರಿತು ಸಂಬಂಧಪಟ್ಟ ಇಲಾಖೆ ಅವಶ್ಯವಾಗಿ ಗಮನ ಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಕಲ್ಲೊಟ್ಟೆ ರಸ್ತೆಯಲ್ಲಿ ಸಂಚಾರ ಮಾಡುವುದು ತ್ರಾಸದಾಯಕವಾಗಿದೆ. ಈ ರಸ್ತೆ ಅಭಿವೃದ್ದಿಯಾದಲ್ಲಿ ಸ್ಥಳೀಯರಿಗೆ ಅನುಕೂಲವಾಗುವ ಜೊತೆಗೆ ಮುಖ್ಯ ರಸ್ತೆಯ ವಾಹನ ದಟ್ಟಣೆ ಕಡಿಮೆಯಾಗಬಹುದಾಗಿದೆ.
–ಸೂರಜ್, ಸ್ಥಳೀಯ ನಿವಾಸಿ
ವರದಿ : ನಳಿನಿ ಎಸ್. ಸುವರ್ಣ




















