ರಾಮ ನವಮಿಯಂದು ಸಂಭವಿಸಿದ ದುರಂತ
ಇಂದೋರ್: ಇಂದೋರ್‌ನ ಬೇಲೇಶ್ವರ ಮಹಾದೇವ ಜೂಲೇಲಾಲ್ ದೇವಸ್ಥಾನದ ಮೆಟ್ಟಿಲು ಬಾವಿ ಕುಸಿದು ಸಂಭವಿಸಿದ ದುರಂತದಲ್ಲಿ ಮೃತರ ಸಂಖ್ಯೆ 36ಕ್ಕೆ ಏರಿಕೆಯಾಗಿದ್ದು, ಘಟನಾ ಸ್ಥಳಕ್ಕೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಭೇಟಿ ನೀಡಿ ಪರಿಶೀಲನೆ ನಡಸಿದ್ದಾರೆ.
ಪ್ರಕರಣ ಸಂಬಂಧ ಈಗಾಗಲೇ ಎಫ್ಐಆರ್ ದಾಖಲಾಗಿದೆ. ಮ್ಯಾಜಿಸ್ಟ್ರೇಟ್ ತನಿಖೆಗೂ ಆದೇಶಿಸಲಾಗಿದೆ. ದುರ್ಘಟನೆಗೆ ಕಾರಣರಾದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.
ರಾಮನವಮಿ ನಿಮಿತ್ತ ಇಂದೋರ್‌ನ ಬೇಲೇಶ್ವರ ದೇವಸ್ಥಾನದಲ್ಲಿ ಹೋಮ ಹವನ ಏರ್ಪಡಿಸಲಾಗಿತ್ತು. ಇದರಲ್ಲಿ ಪಾಲ್ಗೊಳ್ಳಲು ಭಾರಿ ಸಂಖ್ಯೆಯಲ್ಲಿ ಜನ ಸೇರಿದ ಪರಿಣಾಮ ನೂಕುನುಗ್ಗಲು ಏರ್ಪಟ್ಟಿತ್ತು. ಈ ವೇಳೆ ದೇಗುಲದ ಬಾವಿ ಬಳಿಯ ಭೂಮಿ ಕುಸಿದಿದ್ದು, ಇದರ ಪರಿಣಾಮ ಅಲ್ಲೇ ಇದ್ದ ಬಾವಿಯ ಕಬ್ಬಿಣದ ಸರಳಿನ ಮೇಲ್ಛಾವಣಿಯೂ ಕುಸಿದು ಬಿದ್ದಿತ್ತು. ಈ ವೇಳೆ ಸ್ಥಳದಲ್ಲಿದ್ದ ಹಲವು ಮಂದಿ ಭಕ್ತರು ಬಾವಿಗೆ ಬಿದ್ದಿದ್ದರು. ದುರ್ಘಟನೆಯಲ್ಲಿ ಈ ವರೆಗೂ 36 ಮಂದಿ ಸಾವನ್ನಪ್ಪಿದ್ದಾರೆ.
























