ಮೋದಿ ದ್ವೇಷದ ಪರಾಕಾಷ್ಠೆ ಎಂದು ಸಚಿವೆ ಸ್ಮೃತಿ ಇರಾನಿ ಕಿಡಿ
ಹೊಸದಿಲ್ಲಿ : ಉದ್ಯಮಿ ಅದಾನಿ ಜತೆ ನಂಟಿನ ವಿಚಾರ ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಮೇಲೆ ವಾಗ್ದಾಳಿ ಮಾಡುತ್ತಿರುವ ಕಾಂಗ್ರೆಸ್ ರಾಹುಲ್ ನಾಯಕ ರಾಹುಲ್ ಗಾಂಧಿಗೆ ಬಿಜೆಪಿ ಇಂದು ಪ್ರಿಯಾಂಕ ಗಾಂಧಿಯ ಗಂಡ ರಾಬರ್ಟ್ ವಾದ್ರಾ, ಅದಾನಿ ಎದುರು ಕೈಕಟ್ಟಿ ಕುಳಿತಿರುವ ಫೋಟೊ ಬಹಿರಂಗಪಡಿಸಿ ತಿರುಗೇಟು ನೀಡಿದೆ.
ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯನ್ನು ಟೀಕಿಸಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಈ ಫೋಟೊ ಬಹಿರಂಗಪಡಿಸಿ ರಾಹುಲ್ ಗಾಂಧಿಗೆ ಅದಾನಿಯೇ ದೊಡ್ಡ ಸಮಸ್ಯೆಯಾದರೆ ಅವರ ಬಾವ ರಾಬರ್ಟ್ ವಾದ್ರಾ ಅದಾನಿ ಜತೆಗಿರುವುದೇಕೆ ಎಂದು ಹೇಳಲಿ ಎಂದು ಕುಟುಕಿದ್ದಾರೆ.
ಪ್ರಧಾನಿ ಮೋದಿ ಮೇಲಿನ ದ್ವೇಷದಿಂದ ತಾನು ಮೋದಿಯನ್ನು ಹೇಗೆ ಬೇಕಾದರೂ ನಿಂದಿಸಬಹುದು ಎಂದು ರಾಹುಲ್ ಭಾವಿಸಿದ್ದಾರೆ. ಮೋದಿಯನ್ನು ಟೀಕಿಸುವಾಗ ಇಡೀ ಒಬಿಸಿ ಸಮುದಾಯವನ್ನು ಟೀಕಿಸುವುದು ತನ್ನ ಹಕ್ಕು ಎಂದು ಭಾವಿಸಿಕೊಂಡಿದ್ದಾರೆ. ರಾಹುಲ್ ಗಾಂಧಿಯ ಮೋದಿ ದ್ವೇಷ ವಿದೇಶಗಳಲ್ಲೂ ಮುಂದುವರಿದಿದೆ ಎಂದು ಕಿಡಿ ಕಾರಿದ್ದಾರೆ.
2019ರಲ್ಲೇ ರಾಹುಲ್ ಗಾಂಧಿ ಅಧಿಕಾರವೆ ಮೋದಿಯ ವರ್ಚಸ್ಸು, ಆ ವರ್ಚಸ್ಸನ್ನು ನಾನು ಕೆಡುವುತ್ತೇನೆ ಎಂದು ಹೇಳಿದ್ದರು. ರಾಜಕೀಯವಾಗಿ ಹತಾಶೆಗೊಂಡಿರುವ ರಾಹುಲ್ ಗಾಂಧಿಗೆ ಅಮೇಠಿಯ ಸೋಲನ್ನು ಇನ್ನೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಲಂಡನ್ ಪ್ರವಾಸದ ವೇಳೆ ಮೋದಿ ಮೇಲಿರುವ ದ್ವೇಷವನ್ನು ಅವರು ಜಗಜ್ಜಾಹೀರುಪಡಿಸಿದ್ದಾರೆ ಎಂದು ಸ್ಮೃತಿ ಇರಾನಿ ಟೀಕಿಸಿದ್ದಾರೆ.































































