ಕಾಂಗ್ರೆಸ್ ನಾಯಕನ ವಿರುದ್ಧ ಸಚಿವ ಕಿರಣ್ ರಿಜಿಜು ತೀಕ್ಷ್ಣ ಟೀಕೆ
ಹೊಸದಿಲ್ಲಿ : ಕಾಂಗ್ರೆಸಿನ ಸ್ವಯಂ ಘೋಷಿತ ರಾಜಕುಮಾರ ಈಗ ಎಲ್ಲ ಮಿತಿಗಳನ್ನು ದಾಟಿದ್ದಾರೆ. ಭಾರತದ ಜನರಿಗೆ ರಾಹುಲ್ ಗಾಂಧಿ ಪಪ್ಪು ಎಂದು ತಿಳಿದಿದೆ. ಆದರೆ ವಿದೇಶಿಯರಿಗೆ ಅವರು ಪಪ್ಪು ಎಂದು ತಿಳಿದಿಲ್ಲ ಮತ್ತು ಅವರ ಮೂರ್ಖ ಹೇಳಿಕೆಗಳಿಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ಆದರೆ ಸಮಸ್ಯೆಯೆಂದರೆ, ರಾಹುಲ್ ಗಾಂಧಿ ಅವರ ಭಾರತ ವಿರೋಧಿ ಹೇಳಿಕೆಗಳನ್ನು ಭಾರತ ವಿರೋಧಿ ಶಕ್ತಿಗಳು ದುರುಪಯೋಗಪಡಿಸಿಕೊಂಡಿವೆ. ಇದು ಭಾರತದ ಪ್ರತಿಷ್ಠೆಯನ್ನು ಹಾಳು ಮಾಡುತ್ತಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಟೀಕಿಸಿದ್ದಾರೆ.
ಟ್ವೀಟ್‌ನಲ್ಲಿ ರಾಹುಲ್ ಗಾಂಧಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ರಿಜಿಜು, ಕಾಂಗ್ರೆಸ್ ನಾಯಕ ಭಾರತದ ಏಕತೆಗೆ ಅತ್ಯಂತ ಅಪಾಯಕಾರಿಯಾಗಿದ್ದಾರೆ ಮತ್ತು ಅವರು ಈಗ ಭಾರತವನ್ನು ವಿಭಜಿಸಲು ಜನರನ್ನು ಪ್ರಚೋದಿಸುತ್ತಿದ್ದಾರೆ. ವಿದೇಶಿ ನೆಲದಲ್ಲಿ ಭಾರತವನ್ನು ಅವಮಾನಿಸಿದ್ದಾರೆ ಎಂದು ಆರೊಪಿಸಿದ್ದಾರೆ.
ಕೇಂಬ್ರಿಡ್ಜ್ ವಿವಿಯಲ್ಲಿ ಸಂವಾದದ ಸಂದರ್ಭದಲ್ಲಿ, ನರೇಂದ್ರ ಮೋದಿ ಸರ್ಕಾರದ ಯಾವುದೇ ನೀತಿಯನ್ನು ನೀವು ಉತ್ತಮವಾಗಿ ಕಾಣುತ್ತೀರಾ ಎಂದು ರಾಹುಲ್ ಗಾಂಧಿಗೆ ಪ್ರಶ್ನೆ ಕೇಳಲಾಯಿತು. ಅದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ, ತಾವು ಮೂಲಭೂತವಾಗಿ ಒಪ್ಪದ ಕ್ಷೇತ್ರದಲ್ಲಿ ಒಂದೋ ಎರಡೋ ಒಳ್ಳೆಯ ಸಂಗತಿಗಳನ್ನು ಹುಡುಕುವುದು ಸಂಪೂರ್ಣ ಅರ್ಥವನ್ನು ಕಳೆದುಕೊಳ್ಳುತ್ತದೆ. ನನ್ನ ದೃಷ್ಟಿಯಲ್ಲಿ ನರೇಂದ್ರ ಮೋದಿಯವರು ಭಾರತದ ಚೌಕಟ್ಟನ್ನು ನಾಶಪಡಿಸುತ್ತಿದ್ದಾರೆ. ಅವರು ನನ್ನ ದೇಶವನ್ನು ಅಥವಾ ನಮ್ಮ ದೇಶವನ್ನು ಹೊಡೆದುರುಳಿಸುವ ಕೆಲಸ ಮಾಡುತ್ತಿರುವಾಗ ಅವರು ಮಾಡುತ್ತಿರುವ ಎರಡು ಅಥವಾ ಮೂರು ಒಳ್ಳೆಯ ನೀತಿಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು.
ಲಂಡನ್‌ನಲ್ಲಿ ಸಂವಾದದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಭಾರತದಲ್ಲಿ ಪ್ರಜಾಸತ್ತಾತ್ಮಕ ಸ್ಪರ್ಧೆಯ ಸ್ವರೂಪ ಸಂಪೂರ್ಣವಾಗಿ ಬದಲಾಗಿದೆ. ಇದಕ್ಕೆ ಕಾರಣ ಆರ್‌ಎಸ್‌ಎಸ್ ಎಂಬ ಒಂದು ಸಂಘಟನೆ. ಇದು ಮೂಲಭೂತವಾದಿ, ಪ್ರತಿಗಾಮಿ ಸಂಘಟನೆಯಾಗಿದ್ದು, ಭಾರತದ ಎಲ್ಲ ಸಂಸ್ಥೆಗಳನ್ನು ವಶಪಡಿಸಿಕೊಂಡಿದೆ. ಪತ್ರಿಕೆ, ನ್ಯಾಯಾಂಗ, ಸಂಸತ್ತು ಮತ್ತು ಚುನಾವಣಾ ಆಯೋಗಗಳು ಬೆದರಿಕೆಗೆ ಒಳಗಾಗಿವೆ ಮತ್ತು ಒಂದಲ್ಲ ಒಂದು ರೀತಿಯಲ್ಲಿ ನಿಯಂತ್ರಿಸಲ್ಪಡುತ್ತವೆ ಎಂದಿದ್ದರು.
ಭಾರತದಲ್ಲಿ ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರಿಗೆ ಏನು ಮಾಡಲಾಗುತ್ತಿದೆ ಎಂಬುದನ್ನು ನೀವು ನೋಡಬಹುದು. ಇದನ್ನು ಕೇವಲ ಕಾಂಗ್ರೆಸ್ ಹೇಳುತ್ತಿಲ್ಲ, ಭಾರತೀಯ ಪ್ರಜಾಪ್ರಭುತ್ವದಲ್ಲಿ ಗಂಭೀರ ಸಮಸ್ಯೆ ಇದೆ ಎಂದು ವಿದೇಶಿ ಪತ್ರಿಕೆಗಳಲ್ಲೇ ನಿರಂತರವಾಗಿ ಲೇಖನಗಳು ಬರುತ್ತಿವೆ ಎಂದು ಹೇಳಿದ್ದರು.






















