ಉದ್ಯೋಗ ನಿಮಿತ್ತ ವಿದೇಶ ತೆರಳಲಿದ್ದ ಯುವಕ
ಕಾರ್ಕಳ : ನಿಂತಿದ್ದ ಬಸ್ಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವಿಗೀಡಾದ ದಾರುಣ ಘಟನೆ ಹಿರ್ಗಾನ ಚರ್ಚ್ ಬಳಿ ಮಾ. 1ರಂದು ರಾತ್ರಿ 8 ಗಂಟೆಗೆ ಸಂಭವಿಸಿದೆ. ಹಿರ್ಗಾನ ಗ್ರಾಮದ ಕಾನಂಗಿ ಬಳಿಯ ಅಂಕರಬೆಟ್ಟು ನಿವಾಸಿ ಮನೋಹರ್ (43) ಎಂಬವರೇ ಮೃತಪಟ್ಟ ದುರ್ದೈವಿ.
ಕಾರ್ಕಳದಿಂದ ಕೆರ್ವಾಶೆ ಸಾಗುತ್ತಿದ್ದ ಶಾಜಿನ್ ಹೆಸರಿನ ಖಾಸಗಿ ಬಸ್ ಚಾಲಕ ಹಿರ್ಗಾನ ಚರ್ಚ್ ಬಳಿ ಪ್ರಯಾಣಿಕರನ್ನು ಇಳಿಸುವ ನಿಟ್ಟಿನಲ್ಲಿ ಬಸ್ ನಿಲ್ಲಿಸಿದ್ದು, ಈ ವೇಳೆ ಹಿಂಬದಿಯಿಂದ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸವಾರ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಮನೋಹರ್ ಅವರು ಈ ತಿಂಗಳು ಉದ್ಯೋಗ ನಿಮಿತ್ತ ವಿದೇಶ ತೆರಳಲಿದ್ದರು. ಹೀಗಾಗಿ ಫೆ. 28 ಮಂಗಳೂರಿನಲ್ಲಿ ಮೆಡಿಕಲ್ ಚೆಕ್ಅಪ್ ಮಾಡಿಸಿದ್ದರು. ಅದರ ರಿಪೋರ್ಟ್ ತರಲು ಬುಧವಾರ ಮಂಗಳೂರು ತೆರಳಿದ್ದು ಅಲ್ಲಿಂದ ವಾಪಾಸಾಗುತ್ತಿದ್ದ ವೇಳೆ ದುರ್ಘಟನೆ ನಡೆದಿದೆ.






































