ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಕನಕ ಚಿಂತನ ಉಪನ್ಯಾಸ – ಕನಕನ ಕನಸುಗಳು

ಸ್ವಚ್ಛ ಮನಸ್ಸು ಸ್ವಸ್ಥ ಸಮುದಾಯವನ್ನು ನಿರ್ಮಿಸುತ್ತದೆ – ಡಾ. ಹಳೆಮನೆ ರಾಜಶೇಖರ್

ಕಾರ್ಕಳ : ಕರ್ನಾಟಕದ ದಾಸಪರಂಪರೆಯಲ್ಲಿ ಕನಕದಾಸರ ಕೊಡುಗೆ ಶ್ರೇಷ್ಠವಾದದ್ದು. ದೇವರೆಡೆಗೆ ಭಕ್ತರು ತೆರಳುವುದಲ್ಲ ಭಕ್ತರೆಡೆಗೆ ದೇವರು ಬರುವಂತಾಗುವಂತೆ ಭಕ್ತರ ನಿರ್ಮಾಣವಾಗಬೇಕು ಎಂಬುದು ಕನಕದಾಸರ ಬಹುದೊಡ್ಡ ಕನಸು. ಈ ನಿಟ್ಟಿನಲ್ಲಿ ಮಾನವನನ್ನು ಸಂಪೂರ್ಣ ಪರಿಪೂರ್ಣತೆಯೆಡೆಗೆ ಹೊರಳಿಸುವ ಪ್ರಯತ್ನವನ್ನು ಕನಕದಾಸರು ನಿರಂತರವಾಗಿ ಮಾಡಿದ್ದಾರೆ. ಆತ್ಮದಲ್ಲಿಯೇ ದೇವರನ್ನು ಕಾಣುವ, ಹೆತ್ತವರನ್ನು ಗೌರವಿಸುವ, ಆಧ್ಯಾತ್ಮಿಕ ಜೀವಿಯಾಗಿ ಶುದ್ಧವಾಗುವ, ದುಷ್ಟರು, ದ್ರೋಹಿಗಳಲ್ಲದ ಸಮಾಜ ನಿರ್ಮಾಣ, ಶುದ್ಧ ಮನದೊಂದಿಗೆ ಸ್ವಸ್ಥ ಸಮಾಜವನ್ನು ಕಟ್ಟುವ ಕನಸನ್ನು ಕಂಡವರು ಕನಕದಾಸರು. ಪ್ರಸ್ತುತ ಸಮಾಜದಲ್ಲಿ ಇಂತಹ ಮನೋಸ್ಥಿತಿ ಅವಶ್ಯ. ಸ್ವಚ್ಛ ಮನಸ್ಸು ಸ್ವಸ್ಥ ಸಮುದಾಯವನ್ನು ನಿರ್ಮಿಸುತ್ತದೆ ಎಂದು ಉಜಿರೆ ಶ್ರಿ. ಧ.ಮಂ.ಸ್ವಾಯತ್ತ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಹಳೆಮನೆ ರಾಜಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಕನಕದಾಸ ಅಧ್ಯಯನ ಪೀಠ , ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ. ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಹಾಗೂ ಕಾಲೇಜಿನ ಸಾಹಿತ್ಯ ಸಂಘದ ಸಂಯುಕ್ತ ಆಶ್ರಯದಲ್ಲಿ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಜ. 12 ರಂದು ನಡೆದ ಕನಕ ಚಿಂತನ ಉಪನ್ಯಾಸ ಮಾಲಿಕೆಯಲ್ಲಿ ಕನಕನ ಕನಸುಗಳು ಎಂಬ ವಿಚಾರವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಎ. ಕೋಟ್ಯಾನ್ ಮಾತನಾಡಿ, ಕನಕದಾಸರಂತಹ ದಾರ್ಶನಿಕರ ಚಿಂತನೆಗಳು ಕಾಲೋಚಿತ ಮತ್ತು ಕಾಲಾತೀತವಾದುದು. ಪ್ರಸ್ತುತ ಕಾಲಮಾನಕ್ಕೂ ಅವರ ಮಾತುಗಳು ಅನ್ವಯ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೋ. ದತ್ತಾತ್ರೇಯ, ಸಾಹಿತ್ಯ ಸಂಘದ ಸಂಯೋಜಕ ಡಾ. ಅರುಣ್ ಕುಮಾರ್ ಎಸ್. ಆರ್., ಕಾರ್ಯದರ್ಶಿ ಸುರಕ್ಷಾ ಕೆ. ಎಸ್. ಉಪಸ್ಥಿತರಿದ್ದರು. ದ್ರವ್ಯ ಸ್ವಾಗತಿಸಿ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ವೇತಾ ಅತಿಥಿಗಳ ಪರಿಚಯ ಮಾಡಿದರು. ಸೌರಭ ಪಾಟಕ್ ಕನಕ ಕೀರ್ತನೆ ಹಾಡಿದರು. ಗಣೇಶ್ ಕಾರ್ಯಕ್ರಮ ನಿರೂಪಿಸಿ, ವಿಯೋಲ ವಂದಿಸಿದರು.

















































error: Content is protected !!
Scroll to Top