ನಿಗಮ ರಚನೆ ಆಗ್ರಹಿಸಿ ಮಂಗಳೂರಿನಿಂದ ಬೆಂಗಳೂರಿಗೆ ಬಿಲ್ಲವರ ಮಹಾಪಾದಯಾತ್ರೆ

ಜ.6ರಂದು ಕುದ್ರೊಳಿಯಲ್ಲಿ ಜನಾರ್ದನ ಪೂಜಾರಿ ಚಾಲನೆ

ಮಂಗಳೂರು : ಬ್ರಹ್ಮಶ್ರೀ ನಾರಾಯಣ ಗುರು ನಿಗಮ ರಚನೆ, ಈಡಿಗ-ಬಿಲ್ಲವ ಸಮುದಾಯದ ಅಭಿವೃದ್ಧಿಗೆ 500 ಕೋಟಿ ರೂ. ಅನುದಾನ, ಕುಲಕಸುಬು ಶೇಂದಿ ಮೇಲಿನ ನಿಷೇಧ ರದ್ದುಪಡಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮಂಗಳೂರಿನಿಂದ ಬೆಂಗಳೂರು ತನಕ ಈಡಿಗ-ಬಿಲ್ಲವ ಮಹಾಪಾದಯಾತ್ರೆ ನಡೆಯಲಿದೆ.
ಜನವರಿ 6ರಂದು ಮಂಗಳೂರಿನ ಕುದ್ರೋಳಿಯ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಪಾದಯಾತ್ರೆಗೆ ಚಾಲನೆ ಸಿಗಲಿದೆ ಎಂದು ಕಲ್ಯಾಣ ಕರ್ನಾಟಕ ಸಮಿತಿಯ ಅಧ್ಯಕ್ಷ ಸತೀಶ್ ವಿ. ಗುತ್ತೇದಾರ್ ಮತ್ತು ಕಾರ್ಯದರ್ಶಿ ವೆಂಕಟೇಶ್ ಕಡೇಚೂರು ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕು ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾ. ಪ್ರಣವಾನಂದ ಸ್ವಾಮೀಜಿ ಈ ಮಹಾಪಾದಯಾತ್ರೆಯ ನೇತೃತ್ವ ವಹಿಸುತ್ತಿದ್ದಾರೆ. ಮಹಾಪಾದಯಾತ್ರೆಯಲ್ಲಿ ಕರ್ನಾಟಕದ ವಿವಿಧೆಡೆಗಳಲ್ಲಿರುವ ಈಡಿಗ-ಬಿಲ್ಲವ ಸಮುದಾಯದ ಜನರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳಿಂದ ಈಡಿಗ ಸಮುದಾಯದ ಜನರು ಬಸ್ ಮತ್ತಿತರರ ವಾಹನಗಳ ಮೂಲಕ ಜ.5 ರಂದು ಮಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಜಿಲ್ಲಾ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಅಭಿಮಾನಿಗಳು ಈ ಮಹಾನ್ ಯಾತ್ರೆಯಲ್ಲಿ ಭಾಗವಹಿಸಲಿದ್ದು ಕುದ್ರೋಳಿ ಶ್ರೀಕ್ಷೇತ್ರದ ಆವರಣದಲ್ಲಿ ಸೇರಲಿದ್ದಾರೆ.

ಜನಾರ್ದನ ಪೂಜಾರಿ ಚಾಲನೆ

ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಜ.6 ರಂದು ಬೆಳಗ್ಗೆ 10.30ಕ್ಕೆ ಈಡಿಗ ಬಿಲ್ಲವ ಸಮುದಾಯದ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಮಹಾಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ತೆಲಂಗಾಣದ ಅಬಕಾರಿ ಹಾಗು ಪ್ರವಾಸೋದ್ಯಮ ಖಾತೆಯ ಸಚಿವ ಶ್ರೀನಿವಾಸ ಗೌಡ ಮುಖ್ಯ ಅತಿಥಿಗಳಾಗಿರಲಿದ್ದಾರೆ. ಕರ್ನಾಟಕದ ಈಡಿಗ-ಬಿಲ್ಲವ ನಾಮಧಾರಿ ಜೀವರ ನಾಯಕ ಕಲಾಲ್ ಮುಂತಾದ 26 ಪಂಗಡಗಳ ನಾಯಕರು ಭಾಗವಹಿಸಲಿದ್ದಾರೆ.
ಇದು ಐತಿಹಾಸಿಕ ಪಾದಯಾತ್ರೆ ಆಗಲಿದ್ದು, ಮಂಗಳೂರಿನಿಂದ ಹೊರಟು, ಉಡುಪಿ, ತೀರ್ಥಹಳ್ಳಿ, ಸಿದ್ಧಾಪುರ, ಶಿವಮೊಗ್ಗ, ದಾವಣಗೆರೆ ದಾರಿಯಾಗಿ 658 ಕಿ.ಮೀ. ಸಂಚರಿಸಲಿದೆ.
ಮಂಗಳೂರಿನಿಂದ 658 ಕಿಲೋಮೀಟರ್ ಪಾದಯಾತ್ರೆ ಕೇವಲ ಸಮುದಾಯದ ಜನರ ಅಹವಾಲಷ್ಟೇ ಅಲ್ಲ. ಇದಕ್ಕೆ ಸರ್ವ ಪಕ್ಷದ ಬೆಂಬಲವಿದೆ. ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದರೆ ಭವಿಷ್ಯದಲ್ಲಿ ಉತ್ತಮವಾಗಲಿದೆ ಎಂದು ಡಾ. ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.
ಈಗಾಗಲೇ ಪಾದಯಾತ್ರೆ ಮತ್ತು ನಿರಶನ ಹೋರಾಟಗಳನ್ನು ಹತ್ತಿಕ್ಕಲು ಕೇವಲ ಆಶ್ವಾಸನೆಯ ಮಾತುಗಳೊಂದಿಗೆ ಸರಕಾರವು ಸಮುದಾಯದ ಜನರಿಗೆ ಕಣ್ಣಿಗೆ ಮಣ್ಣೆರೆಚುವ ಕೆಲಸವನ್ನು ಮಾಡಿದೆ. ಆದರೆ ಈ ಬಾರಿ ನಿಗಮ ಮತ್ತು ಇತರ ಎಲ್ಲ ಬೇಡಿಕೆಗಳನ್ನು ಈಡೇರಿಸದಿದ್ದರೆ ಪಾದಯಾತ್ರೆಯನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೋರಾಟ ಸಮಿತಿಯ ಉಪಾಧ್ಯಕ್ಷ ಮಹಾದೇವ ಗುತ್ತೇದಾರ್ ಹೇಳಿದ್ದಾರೆ.

















































error: Content is protected !!
Scroll to Top