ಕಲ್ಯಾದಲ್ಲಿ ಸಮುದಾಯ ಭವನಕ್ಕೆ ಶಿಲಾನ್ಯಾಸ
ಕಾರ್ಕಳ: ಕಲ್ಯಾ ಗ್ರಾಮವೂ ಸೇರಿದಂತೆ ಎಲ್ಲ ಗ್ರಾಮಗಳ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಅಭಿವೃದ್ಧಿ ಎನ್ನುವುದು ನಿರಂತರವಾಗಿ ನಡೆಯುತ್ತಿರುವ ಪ್ರಕ್ರಿಯೆಯಾಗಿದ್ದು, ಈ ಪ್ರಕ್ರಿಯೆಯಲ್ಲಿ ಆಗಾಗ ಸಣ್ಣಪುಟ್ಟ ಬದಲಾವಣೆಗಳು, ಏರಿಳಿತಗಳು ಆಗುವುದು ಸಾಮಾನ್ಯ. ಕಲ್ಯಾ ಗ್ರಾಮಕ್ಕೊಂದು ಸಮುದಾಯ ಭವನ ಬೇಕು ಎಂಬ ಬೇಡಿಕೆ ಬಂದಾಗ ಅದರ ಅಗತ್ಯವನ್ನು ಮನಗಂಡು ಮಂಜೂರು ಮಾಡಲಾಗಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸಕೃತಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ಕಲ್ಯಾ ಗ್ರಾಮದ ಹಾಳೆಕಟ್ಟೆಯಲ್ಲಿ ಪ್ರೌಢ ಶಾಲೆಯ ಸಮೀಪ 38 ಲ.ರೂ.ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸುಸಜ್ಜಿತ ಸಮುದಾಯ ಭವನಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಶಾಲೆಯಲ್ಲಿ ಜರುಗಿದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಗ್ರಾಮ ಪಂಚಾಯಿತಿಗೆ ಸರಕಾರ ಗ್ರಾಮ ಸಮುದಾಯ ಭವನ ಮಂಜೂರು ಮಾಡಿರುವುದು ಇದೇ ಮೊದಲು. ಪಂಚಾಯತ್ ಕಚೇರಿ ಬೇರೆಡೆಗೆ ಸ್ಥಳಾಂತರವಾಗುತ್ತದೆ ಎಂಬ ಚಿಂತೆಯನ್ನು ಜನರು ಬಿಡಬೇಕು. ಅಭಿವೃದ್ಧಿಯಾಗುವಾಗ ಇಂಥ ಬದಲಾವಣೆಗಳು ಅನಿವಾರ್ಯ. ಇದೀಗ ಸಮುದಾಯ ಭವನ ಕಲ್ಯಾಕ್ಕೆ ಬಂದಿರುವುದರಿಂದ ಎಲ್ಲ ಚಟುವಟಿಕೆಗಳ ಕೇಂದ್ರ ಈ ಊರು ಆಗಲಿದೆ. ಗ್ರಾಮ ಒನ್ ಕಚೇರಿಯನ್ನು ಕಲ್ಯಾಕ್ಕೆ ನೀಡಲಾಗುವುದು ಎಂದರು. ಇಡೀ ಕಲ್ಯಾ ಗ್ರಾಮಕ್ಕೆ ಕುಡಿಯುವ ನೀರು ಒದಗಿಸುವ ಸಲುವಾಗಿ ಕಲ್ಯಾ ಇನ್ನೋದು ಕೆರೆಯ ಅಭಿವೃದ್ಧಿಗೆ 4.40 ಕೋ.ರೂ. ಪ್ರಸ್ತಾವ ಮಂಡಿಸಲಾಗಿದೆ. ಕಲ್ಯಾ ಹುಲಿ ಚಾಮುಂಡಿ-ಕಾಜಾರಕಂಬ್ಳ ರಸ್ತೆ 25 ಲ. ರೂ. ವೆಚ್ದದಲ್ಲಿ ಅಭಿವೃದ್ಧಿಯಾಗಲಿದೆ ಎಂದು ತಿಳಿಸಿದರು.
ಕಲ್ಯಾ ಹೃದಯಕ್ಕೆ ಹತ್ತಿರವಾದ ಊರು

ಕಲ್ಯಾ ನನ್ನ ಹೃದಯಕ್ಕೆ ಹತ್ತಿರವಾದ ಊರು. ಈ ಕಾರಣಕ್ಕೆ ಈ ಪಂಚಾಯತಿಯ ಸರ್ವ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಹೈಸ್ಕೂಲು ಸ್ಥಾಪನೆ, ಇದೀಗ ಪ್ರಾಥಮಿಕ ಶಾಲೆಯ ಶತಮಾನೋತ್ಸವ ನಿಮಿತ್ತ ಕೊಠಡಿಗಳ ಮಂಜೂರು, ನೀರಾವರಿ ಸೌಲಭ್ಯ ಸೇರಿದಂತೆ ಊರಿನ ಎಲ್ಲ ಬೇಡಿಕೆಗಳಿಗೆ ಸ್ಪಂದಿಸಿದ್ದೇನೆ. ಇದಕ್ಕೆ ಈ ಊರಿನ ಜನರು ನನ್ನ ಮೇಲಿಟ್ಟಿರುವ ಅಭಿಮಾನ ಕಾರಣ ಎಂದರು.
ಆಭರಣ ಕಳ್ಳರನ್ನು ಪತ್ತೆ ಹಚ್ಚಲು ನೆರವಾದದ್ದಕ್ಕೆ ಅಭಿನಂದನೆ
ಕಲ್ಯಾದ ಕಂಗಿತ್ಲಿನಲ್ಲಿ ಕೆಲ ದಿನಗಳ ಹಿಂದೆ ಮನೆಯೊಂದರಿಂದ ಚಿನ್ನಾಭರಣ ಕಳ್ಳತನವಾದ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಮುತುವರ್ಜಿ ವಹಿಸಿದ ಸಚಿವರಿಗೆ ಆಭರಣ ಕಳೆದುಕೊಂಡಿದ್ದ ಉಷಾ ಜಗದೀಶ್ ಅಂಚನ್ ಅವರು ಹೂಗುಚ್ಚವಿತ್ತು ಧನ್ಯವಾದ ಸಮರ್ಪಿಸಿದರು. ಕಲ್ಯಾದಲ್ಲಿ ಇದೇ ಮಾದರಿಯಲ್ಲಿ ಕೆಲವು ತಿಂಗಳ ಹಿಂದೆ ಮನೆಯೊಂದರಿಂದ ಚಿನ್ನಾಭರಣ ಕಳವಾಗಿದ್ದು, ಈ ಕಳ್ಳರನ್ನು ಪತ್ತೆ ಹಚ್ಚುವ ಸಲುವಾಗಿ ಪೊಲೀಸರ ಜತೆಗೆ ಮಾತನಾಡುತ್ತೇನೆ ಎಂದು ಸಚಿವರು ಭರವಸೆಯಿತ್ತರು.
3 ಕೋಟಿರೂ. ವೆಚ್ಚದಲ್ಲಿ ಅಭಿವೃದ್ಧಿಯಾಗಲಿರುವ ಕಲ್ಯಾ- ಮಲ್ಲಾಯಬೆಟ್ಟು-ಕುಂಟಾಡಿ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿ, ಕಲ್ಯಾದಲ್ಲಿ ನೂತನವಾಗಿ ನಿರ್ಮಾಣಗೊಂಡ ನೀರಿನ ಟಾಂಕಿಯನ್ನು ಸಚಿವರು ಉದ್ಘಾಟಿಸಿದರು. ಕಳೆದ 5 ವರ್ಷಗಳಲ್ಲಿ ಹಾಳೆಕಟ್ಡೆ ವಾರ್ಡ್‌ಗೆ ಬರೋಬ್ಬರಿ 13.50 ಕೋಟಿ ರೂ. ಅನುದಾನ ಒದಗಿಸಿದ ಸಚಿವರನ್ನು ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸುಮಿತ್ ಶೆಟ್ಟಿ ಕೌಡೂರು ಪ್ರಾಸ್ತಾವಿಕ ಮಾತನಾಡಿದರು. ಪಂಚಾಯಿತಿ ಅಧ್ಯಕ್ಷ ಸಂಜೀವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಳ್ಳಿ ಪಂಚಾಯಿತಿ ಮಾಜಿ ಅಧ್ಯಕ್ಷ ರವಿರಾಜ ಉಪಾಧ್ಯಾಯ, ಕಲ್ಯಾ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿದಾಸ್ ಕುಡ್ವ, ಕಲ್ಯಾ ಪಂಚಾಯಿತಿ ಉಪಾಧ್ಯಕ್ಷೆ ಸುಪ್ರಿಯಾ, ಮುಂಡ್ಕೂರು ದುರ್ಗಾ ಪರಮೇಶ್ವರಿ ಕ್ಷೇತ್ರದ ವ್ಯವಸ್ಥಾಪನಾ ರವೀಂದ್ರ ಶೆಟ್ಟಿ, ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಹರೀಶ್ ಅತಿಕಾರಿ ಸ್ವಾಗತಿಸಿ, ಪ್ರೌಆಢಶಾಲೆಯ ಕನ್ನಡ ಶಿಕ್ಷಕ ಪಿಲಾರು ಸುಧಾಕರ ಶೆಣೈ ನಿರೂಪಿಸಿದರು.

























