ವಿದ್ಯಾರ್ಥಿಗಳು ಭಾರತದ ಭವಿಷ್ಯದ ಅಭಿವೃದ್ದಿಯ ಹರಿಕಾರರು – ಸುನೀಲ್ ಕುಮಾರ್
ಕಾರ್ಕಳ : ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 2022-23ನೇ ಸಾಲಿನ ವಿದ್ಯಾರ್ಥಿ ವೇದಿಕೆ ಉದ್ಘಾಟನೆ ಹಾಗೂ ಪ್ರತಿಭಾ ದಿನಾಚರಣೆಯು ಡಿ. 13 ರಂದು ಜರಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್, ವಿದ್ಯಾರ್ಥಿಗಳು ಭವಿಷ್ಯ ಭಾರತಕ್ಕೆ ಅಭಿವೃದ್ದಿಯ ಹರಿಕಾರರು. ಅವರು ಶೈಕ್ಷಣಿಕ ವ್ಯವಸ್ಥೆಯಲ್ಲಿನ ವಿದ್ಯಾರ್ಥಿ ವೇದಿಕೆ ಮೂಲಕ ತಮ್ಮ ನಾಯಕತ್ವದ ಮಹತ್ವವನ್ನು ಅರಿತು ದೇಶಕ್ಕಾಗಿ ನಾವು ಎನ್ನುವ ಪರಿಕಲ್ಪನೆಯೊಂದಿಗೇ ಮುಂದುವರಿಯ ಬೇಕು. ಭಾರತ ಇಡೀ ವಿಶ್ವಕ್ಕೆ ಗುರುವಾಗಿ ಪ್ರಪಂಚವನ್ನ ಮುನ್ನಡೆಸುವ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿದೆ. ಜಿ-20 ಸಮಾವೇಶದ 2023ರ ಅದ್ಯಕ್ಷ ಸ್ಥಾನವು ಭಾರತಕ್ಕೆ ದೊರೆತಿದ್ದು, ಇದು ಭಾರತಕ್ಕೆ ವಿಶ್ವವನ್ನು ಮುನ್ನೆಡಸಲು ದೊರತ ಒಂದು ಅವಕಾಶ. ಭವ್ಯ ಭಾರತದ ಈ ಪ್ರಗತಿಯನ್ನು ಮುಂದುವರೆಸಿಕೊಂಡು ಹೋಗುವ ಜವಬ್ದಾರಿ ಇಂದಿನ ವಿದ್ಯಾರ್ಥಿಗಳ ಮೇಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಮುಂಡಾಜೆ ಮುರಾರ್ಜಿ ದೇಸಾಯಿ ಪ್ರೌಡ ಶಾಲೆಯ ಅದ್ಯಾಪಕ, ಕನ್ನಡ ಸಾಹಿತಿ ಅರವಿಂದ ಚೊಕ್ಕಾಡಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯದ ಕೊರತೆಯಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಭೋದನೆಯ ಜೊತೆ ಜೊತೆಗೆ ಜೀವನ ಮೌಲ್ಯಾಧರಿತ ಶಿಕ್ಷಣ ಪ್ರಸ್ತುತ ಸಮಾಜದಲ್ಲಿ ಅವಶ್ಯ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಕಿರಣ್ ಎಂ ಮಾತನಾಡಿ, ಜೀವನದ ಪ್ರತಿಯೊಂದು ಹಂತದಲ್ಲೂ ಸಮಸ್ಯೆಗಳು ಬರುತ್ತವೆ. ಆ ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರವಲ್ಲ. ಕಷ್ಟದಲ್ಲೂ ಧನಾತ್ಮಕ ಚಿಂತನೆಯನ್ನು ಹೊಂದಿರಬೇಕು. ಆಗ ಬದುಕಿನ ನಿಜವಾದ ಸೌಂದರ್ಯವನ್ನು ಅನುಭವಿಸಲು ಸಾಧ್ಯ ಎಂದರು.

ಸನ್ಮಾನ
ಈ ಸಂದರ್ಭ ಕಾಲೇಜಿನ ಕಾವಲುಗಾರರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಶ್ರೀಧರ ಆಚಾರ್ಯ ಹಾಗೂ ಉನ್ನತಿ ಫೌಂಡೇಶನ್‌ನ ತರಬೇತುದಾರ ಕೆ. ಗುರುಪ್ರಸಾದ ಭಟ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ವೇದಿಕೆ ಸಂಚಾಲಕ ವಿದ್ಯಾಧರ ಹೆಗ್ಡೆ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ವೇದಿಕೆಯ ನಾಯಕರುಗಳಿಗೆ ಪ್ರತಿಜ್ಞಾ ವಿಧಿ ಭೋದಿಸಿದರು.
ವೇದಿಕೆಯಲ್ಲಿ ವಿದ್ಯಾರ್ಥಿ ನಾಯಕರುಗಳಾದ ಪವನ್, ಲವೇಶ್ ಹಾಗೂ ವಿಜಯ್ ಉಪಸ್ತಿತರಿದ್ದರು. ವಿದ್ಯಾರ್ಥಿ ನಾಯಕ ಧನುಷ್ ಸ್ವಾಗತಿಸಿದರು. ಎಂ.ಕಾಂ ವಿಭಾಗದ ನಾಯಕಿ ಪ್ರಣಮ್ಯ ಜೈನ್ ಅತಿಥಿ ಪರಿಚಯಿಸಿದರು. ವಿನಯ ನಾಥು ಹಾಗೂ ಸುಚಿತ್ರ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ನಾಯಕಿ ಶ್ರಾವ್ಯ ವಂದಿಸಿದರು.















































