ಟಿಪ್ಪು ಸುಲ್ತಾನ್‌ನನ್ನು ಮುಸ್ಲಿಂ ಗೂಂಡಾ ಎಂದು ಕರೆದದ್ದಕ್ಕೆ ಆಕ್ಷೇಪ
ಶಿವಮೊಗ್ಗ: ಟಿಪ್ಪು ಸುಲ್ತಾನ್ ವಿರುದ್ಧ ಹಗುರವಾಗಿ ಮಾತನಾಡಿದರೆ ನಾಲಿಗೆ ಕತ್ತರಿಸುವುದಾಗಿ ಮಾಜಿ ಸಚಿವ ಮತ್ತು ಶಿವಮೊಗ್ಗ ಬಿಜೆಪಿ ಶಾಸಕ ಕೆಎಸ್ ಈಶ್ವರಪ್ಪ ಅವರಿಗೆ ಬೆದರಿಕೆ ಪತ್ರವೊಂದು ಬಂದಿದ್ದು, ಈ ಕುರಿತು ಈಶ್ವರಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮತ್ತೊಂದು ಬಾರಿ ಟಿಪ್ಪು ಸುಲ್ತಾನ್‌ನನ್ನು ಮುಸ್ಲಿಂ ಗೂಂಡಾ ಎಂದು ಕರೆದರೆ ನಿನ್ನ ನಾಲಿಗೆಯನ್ನು ಕತ್ತರಿಸುತ್ತೇವೆ ಎಂದು ಈಶ್ವರಪ್ಪ ಅವರಿಗೆ ಪತ್ರದ ಮುಖೇನ ನೇರ ಬೆದರಿಕೆಯೊಡ್ಡಲಾಗಿದೆ. ಶಿವಮೊಗ್ಗದ ಮಲ್ಲೇಶ್ವರ ನಗರದ ಮುಖ್ಯ ರಸ್ತೆಯಲ್ಲಿರುವ ಈಶ್ವರಪ್ಪ ಮನೆಗೆ ಈ ಅನಾಮಧೇಯ ಪತ್ರ ಬಂದಿದೆ.
ಇತ್ತೀಚಿಗೆ ಸಂಭವಿಸಿದ ಶಿವಮೊಗ್ಗ ಗಲಭೆ ಕುರಿತು ಪ್ರತಿಕ್ರಿಯೆ ನೀಡಿದ್ದ ಈಶ್ವರಪ್ಪ, ಕೆಲವು ಮುಸ್ಲಿಂ ಗೂಂಡಾಗಳು ಸಮಾಜದ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಇವರೆಲ್ಲಾ ಮುಸ್ಲಿಂ ಗೂಂಡಾ ಆಗಿದ್ದ ಟಿಪ್ಪು ಸುಲ್ತಾನ್ ಅನುಯಾಯಿಗಳು ಎಂದು ತೀವ್ರ ವಾಗ್ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರಿಗೆ ಈ ಬೆದರಿಕೆ ಪತ್ರ ಬಂದಿದೆ ಎಂದು ಹೇಳಲಾಗುತ್ತಿದೆ.
ನಾನು ಎಲ್ಲ ಮುಸ್ಲಿಮರನ್ನೂ ಗೂಂಡಾಗಳು ಎನ್ನುವುದಿಲ್ಲ. ಆದರೆ ಮುಸ್ಲಿಂ ಸಮಾಜದ ಹಿರಿಯರು ಈ ಗೂಂಡಾಗಳನ್ನು ಹದ್ದುಬಸ್ತಿನಲ್ಲಿಡಬೇಕು ಎಂದು ಆಗ್ರಹಿಸುತ್ತೇನೆ. ಹೇಗೆ ಟಿಪ್ಪು ಸುಲ್ತಾನ್ ಎಂಬ ಮುಸ್ಲಿಂ ಗೂಂಡಾ ತನ್ನ ಹಿಂದೂ ಪ್ರಜೆಗಳನ್ನು ಕಾಡುತ್ತಿದ್ದನೋ, ಅದೇ ರೀತಿ ಕೆಲವು ಮುಸ್ಲಿಂ ಗೂಂಡಾಗಳು ಹಿಂದೂಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಇದನ್ನು ನಿಲ್ಲಿಸದೆ ಹೋದರೆ ಹಿಂದೂ ಸಮಾಜವೂ ತೀಕ್ಷ್ಣ ಪ್ರತಿಕ್ರಿಯೆ ನೀಡಲಿದೆ ಎಂದು ಈಶ್ವರಪ್ಪ ಎಚ್ಚರಿಸಿದ್ದರು.
ಟಿಪ್ಪು ಸುಲ್ತಾನ್‌ನನ್ನು ಮುಸ್ಲಿಂ ಗೂಂಡಾ ಎಂದು ಕರೆದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಇದೀಗ ಕೆಎಸ್ ಈಶ್ವರಪ್ಪ ಅವರಿಗೆ ಬೆದರಿಕೆ ಪತ್ರ ಬಂದಿದೆ. ಈ ಪತ್ರದಲ್ಲಿ ಈಶ್ವರಪ್ಪ ಅವರನ್ನು ಏಕವಚನದಲ್ಲೇ ಸಂಬೋಧಿಸಲಾಗಿದ್ದು, ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್‌ನನ್ನು ಮುಸ್ಲಿಂ ಗೂಂಡಾ ಎಂದು ಕರೆದರೆ ನಾಲಿಗೆ ಕತ್ತರಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ಅಷ್ಟೇ ಅಲ್ಲದೇ ʼಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನ ಕಾಲೇಜಿನ ಕಟ್ಟಡ ಕಟ್ಟಲು, ಈಶ್ವರಪ್ಪಗೆ ಮುಸ್ಲಿಮರು ಮಾಡಿದ ಬ್ರಿಕ್ಸ್‌ಗಳು ಬೇಕು. ಆದರೆ ಮುಸ್ಲಿಮರು ಬೇಡ ಎಂದರೆ ನಾಚಿಕೆಯಾಗಬೇಕು. ಈಶ್ವರಪ್ಪ ಬಾಲ ಬಿಚ್ಚಿದರೆ ಹುಷಾರ್..ʼ ಎಂದು ಪತ್ರದಲ್ಲಿ ಕಿಡಿಕಾರಲಾಗಿದೆ.
ಈಶ್ವರಪ್ಪ ಅವರಿಗೆ ಬಂದಿರುವ ಅನಾಮಧೇಯ ಬೆದರಿಕೆ ಪತ್ರದ ಕುರಿತು ಪೊಲೀಸರಿಗೆ ದೂರು ನೀಡಲಾಗಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ಈ ಕುರಿತು ಈಶ್ವರಪ್ಪ ಏನು ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಶಿವಮೊಗ್ಗದಲ್ಲಿ ನಡೆದ ಹರ್ಷನ ಕೊಲೆ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದ ಈಶ್ವರಪ್ಪ, ಮುಸ್ಲಿಂ ಗೂಂಡಾಗಳೇ ಹರ್ಷನನ್ನು ಕೊಲೆ ಮಾಡಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದರು. ಆ ಸಂದರ್ಭದಲ್ಲೂ ಈಶ್ವರಪ್ಪನವರ ಮುಸ್ಲಿಂ ಗೂಂಡಾಗಳು ಎಂಬ ಪದ ಬಳಕೆಗೆ ಆಕ್ಷೇಪ ವ್ಯಕ್ತವಾಗಿತ್ತು.
ತೀರ ಇತ್ತೀಚಿಗೆ ಅಂದರೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ದಿನ, ಸಾವರ್ಕರ್ ಭಾವಚಿತ್ರವುಳ್ಳ ಫ್ಲೆಕ್ಸ್ ಅಳವಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಗಲಭೆ ಉಂಟಾಗಿತ್ತು. ಈ ಸಂದರ್ಭದಲ್ಲೂ ಈಶ್ವರಪ್ಪ ಮುಸ್ಲಿಂ ಗೂಂಡಾಗಳು ಎಂಬ ಪದ ಬಳಕೆ ಮಾಡಿದ್ದರು.
ಮುಸ್ಲಿಂ ಸಮಾಜದ ಹಿರಿಯರು ಮುಸ್ಲಿಂ ಗೂಂಡಾಗಳನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿದ್ದ ಈಶ್ವರಪ್ಪ, ಕರ್ನಾಟಕದಲ್ಲಿ ಹಿಂದೂ ಸಮಾಜ ಮೇಲೆದ್ದರೆ ಮುಸ್ಲಿಂ ಗೂಂಡಾಗಳು ಉಳಿಯುವ ಪ್ರಶ್ನೆಯೇ ಇಲ್ಲ ಎಂದು ಗುಡುಗಿದ್ದನ್ನು ಇಲ್ಲಿ ಸ್ಮರಿಸಬಹುದು.
























