ಸೆರೆಯಾದ ಭಯೋತ್ಪಾದಕ ಬಾಯಿಬಿಟ್ಟ ಆಘಾತಕಾರಿ ಸತ್ಯ
ಶ್ರೀನಗರ : ಕಳೆದ ಎರಡು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಎರಡು ಒಳನುಸುಳುವಿಕೆ ಪ್ರಯತ್ನಗಳನ್ನು ವಿಫಲಗೊಳಿಸಿದ್ದ ಭಾರತೀಯ ಸೇನೆ, ನೆಲಬಾಂಬ್ ಸ್ಫೋಟದಲ್ಲಿ ಪಾಕಿಸ್ಥಾನಿ ಭಯೋತ್ಪಾದಕನನ್ನು ಸೆರೆಹಿಡಿಯಲಾಗಿದೆ ಮತ್ತು ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದೆ.
ಈಗ ಬಂಧಿತನಾಗಿರುವ ಉಗ್ರನನ್ನು ಈ ಹಿಂದೆ ಗಡಿ ನಿಯಂತ್ರಣ ರೇಖೆಯನ್ನು ದಾಟಿದ್ದಕ್ಕಾಗಿ ಬಂಧಿಸಲಾಗಿತ್ತು. ಆದರೆ ಮಾನವೀಯತೆ ಆಧಾರದ ಮೇಲೆ ಬಿಡುಗಡೆ ಮಾಡಿ ವಾಪಸ್ ಕಳುಹಿಸಲಾಗಿತ್ತು. ಮತ್ತೆ ಗಡಿ ನುಸುಳಿ ಬಂದು ಸಿಕ್ಕಿಬಿದ್ದಿರುವ ಆತ ಭಾರತೀಯ ಸೈನ್ಯದ ಮೇಲೆ ಆತ್ಮಾಹುತಿ ದಾಳಿ ಮಾಡಲು ಪಾಕಿಸ್ಥಾನದ ಸೇನೆಯ ಕರ್ನಲ್ 30,000 ಪಾಕಿಸ್ತಾನಿ ರೂಪಾಯಿ ನೀಡಿದ್ದಾನೆ ಎಂದು ಬಾಯಿಬಿಟ್ಟಿದ್ದಾನೆ.
ಆ.21ರಂದು ಮುಂಜಾನೆ ನೌಶೇರಾ ಪ್ರದೇಶದ ಜಂಗರ್ ಸೆಕ್ಟರ್‌ನಲ್ಲಿ ನಿಯೋಜಿಸಲಾದ ಸೈನಿಕರು ನಿಯಂತ್ರಣ ರೇಖೆಯ ಬದಿಯಲ್ಲಿ ಎರಡರಿಂದ ಮೂರು ಭಯೋತ್ಪಾದಕರ ಚಲನೆಯನ್ನು ಗುರುತಿಸಿ ಸೆರೆಹಿಡಿಯಲಾಯಿತು ಎಂದು ಸೇನೆಯ ಅಧಿಕಾರಿಗಳು ಹೇಳಿದ್ದಾರೆ.
ನುಸುಳುಕೋರರಲ್ಲಿ ಒಬ್ಬ ಭಾರತೀಯ ಪೋಸ್ಟ್‌ಗೆ ಸಮೀಪದಲ್ಲಿದ್ದ ಮತ್ತು ಬೇಲಿಯನ್ನು ಕತ್ತರಿಸಲು ಪ್ರಯತ್ನಿಸುತ್ತಿದ್ದ. ಅವನು ಓಡಿಹೋಗಲು ಪ್ರಯತ್ನಿಸಿದಾಗ, ಸೈನಿಕರು ಗುಂಡು ಹಾರಿಸಿದರು, ಗುಂಡೇಟಿನಿಂದ ಗಾಯಗೊಂಡ ಅವನನ್ನು ಸೆರೆಹಿಡಿಯಲಾಗಿದೆ.
ಇನ್ನಿಬ್ಬರು ನುಸುಳುಕೋರರು ದಟ್ಟ ಕಾಡಿನಲ್ಲಿ ರಕ್ಷಣೆ ಪಡೆದು ಪಾಕಿಸ್ಥಾನ ಆಕ್ರಮಿತ ಪ್ರದೇಶಕ್ಕೆ ಮರಳುವಲ್ಲಿ ಯಶಸ್ವಿಯಾದರು. ಆತನನ್ನು ಪಾಕ್ ಆಕ್ರಮಿತ ಕಾಶ್ಮೀರದ ಕೋಟ್ಲಿ ಜಿಲ್ಲೆಯ ಸಬ್‌ಕೋಟ್ ಗ್ರಾಮದ ನಿವಾಸಿ ತಬಾರಕ್ ಹುಸೇನ್ ಎಂದು ಗುರುತಿಸಲಾಗಿದೆ. ಆತನನ್ನು ಪಾಕಿಸ್ಥಾನದ ಗುಪ್ತಚರ ಸಂಸ್ಥೆಯ ಕರ್ನಲ್ ಯೂನಸ್ ಚೌಧರಿ ಕಳುಹಿಸಿದ್ದಾನೆ ಎಂದು ವಿಚಾರಣೆ ವೇಳೆ ಆತ ಬಹಿರಂಗಪಡಿಸಿದ್ದಾನೆ ಎಂದು ಸೇನೆ ತಿಳಿಸಿದೆ. ಕರ್ನಲ್ ನೀಡಿದ 30,000 ಪಾಕಿಸ್ತಾನಿ ರುಪಾಯಿ ಹಣ ಆತನ ಬಳಿ ಇತ್ತು ಎಂದು ಹೇಳಿದೆ.
























