ಉಡುಪಿ ರಜತ ಸಂಭ್ರಮದಲ್ಲಿ ನಾವು ನೆನಪಿಸಿಕೊಳ್ಳಲೇ ಬೇಕಾದವರು…..

ಜಿಲ್ಲೆಯನ್ನು ಕಟ್ಟಿ ಬೆಳೆಸಿದ ಈ ಐವರು ಸದಾ ಪ್ರಾತಃಸ್ಮರಣೀಯರು

1997 ಆಗಸ್ಟ್ 25…. ಉಡುಪಿಯು ಶ್ರೀ ಕೃಷ್ಣನ ಸಂಭ್ರಮದ ವಿಠ್ಠಲಪಿಂಡಿಯ ಸಂಭ್ರಮದಲ್ಲಿ ಮಿಂದೇಳುತ್ತಿತ್ತು. ಆದರೆ ಆ ವರ್ಷದ ವಿಠ್ಠಲ ಪಿಂಡಿಯು ತುಂಬಾ ವಿಶೇಷವಾಗಿತ್ತು.
ಅದಕ್ಕೆ ಕಾರಣವೆಂದರೆ ಉಡುಪಿ ನವೋದಿತವಾದ ಜಿಲ್ಲೆಯ ಉದ್ಘಾಟನೆಗೆ ಕ್ಷಣಗಣನೆಯು ಆಗಲೇ ಆರಂಭ ಆಗಿತ್ತು. ಇಡೀ ರಾಜ್ಯದ ಗಮನ ಸೆಳೆಯುವ ಘಟನೆ ಆಗಿತ್ತು ಅದು.
ರಾಜ್ಯದ ಆಗಿನ ಮುಖ್ಯಮಂತ್ರಿ ಜೆ. ಎಚ್. ಪಟೇಲ್ ಅವರು ಉಡುಪಿಯ ಅಜ್ಜರಕಾಡಿನ ವಿಶಾಲ ಮೈದಾನದಲ್ಲಿ ಉಡುಪಿ ಜಿಲ್ಲೆ ಆರಂಭವಾದ ಘೋಷಣೆ ಮಾಡಿದರು. ಅವರು ತಮ್ಮ ಎಂದಿನ ಲಹರಿಯಲ್ಲಿ ತಾನು ‘ಕೃಷ್ಣನ ಭಕ್ತ’ ಎಂದು ಕೂಡ ಹೇಳಿದರು.
ಜಯಪ್ರಕಾಶ್ ಹೆಗ್ಡೆ ಅವರು ಮೊದಲ ಉಸ್ತುವಾರಿ ಮಂತ್ರಿ ಆಗಿ ವೇದಿಕೆಯಲ್ಲಿ ಇದ್ದರು. ಆಸ್ಕರ್ ಫರ್ನಾಂಡಿಸ್ ಅವರು ಆಗ ಲೋಕಸಭಾ ಸದಸ್ಯರು. ಯು.ಆರ್. ಸಭಾಪತಿ ಅವರು ವಿಧಾನಸಭಾ ಸದಸ್ಯರು. ಡಾಕ್ಟರ್ ವಿ.ಎಸ್.ಆಚಾರ್ಯರು ವಿಧಾನ ಪರಿಷತ್ ಸದಸ್ಯರು.
ಹುಂಡೆಕರ್ ಸಮಿತಿಯ ಶಿಫಾರಸ್ಸು ಮೇರೆಗೆ ಉಡುಪಿ ಜಿಲ್ಲೆ ರಚನೆ ಆಗಿದ್ದ ಕಾರಣ ವೇದಿಕೆಯಲ್ಲಿ ಹುಂಡೆಕರ್ ಅವರನ್ನು ಸನ್ಮಾನ ಮಾಡಲಾಯಿತು. ಅಂದು ಸೇರಿದ ಲಕ್ಷ ಲಕ್ಷ ಜನರ ಸಂಭ್ರಮಕ್ಕೆ ಪಾರವೇ ಇರಲಿಲ್ಲ.
ಏಕೆಂದರೆ ಉಡುಪಿ ಜಿಲ್ಲೆಯ ರಚನೆ ಅವರೆಲ್ಲರ ಬಹು ದಶಕಗಳ ಕನಸು ಆಗಿತ್ತು.
ಅದೇ ವರ್ಷದಲ್ಲಿ ರಾಜ್ಯದಲ್ಲಿ ಒಟ್ಟು ಏಳು ಹೊಸ ಜಿಲ್ಲೆಗಳು ಉದ್ಘಾಟನೆ ಆಗಿದ್ದವು ಅನ್ನುವುದು ಕೂಡ ಇತಿಹಾಸದ ಒಂದು ಭಾಗ!

ಉಡುಪಿ ಜಿಲ್ಲೆಯ ಹಿರಿಮೆ ಗರಿಮೆಗಳು

ಇಂದು ಏಳು ತಾಲೂಕುಗಳನ್ನು ಹೊಂದಿರುವ, ಏಳು ದೊಡ್ಡ ನದಿಗಳನ್ನು ಹೊಂದಿರುವ, ಹನ್ನೆರಡು ಲಕ್ಷದಷ್ಟು ಜನಸಂಖ್ಯೆ ಹೊಂದಿರುವ, ರಾಜ್ಯದಲ್ಲಿಯೇ ಅತಿ ಹೆಚ್ಚು, ಅಂದರೆ ಶೇ.83 ಸಾಕ್ಷರತೆಯನ್ನು ಹೊಂದಿರುವ, ಎಸೆಸೆಲ್ಸಿ ಮತ್ತು ಪಿಯುಸಿಗಳ ಫಲಿತಾಂಶದಲ್ಲಿ ಇಂದಿಗೂ ಅಗ್ರಣಿ ಆಗಿರುವ, ಸರ್ವ ಧರ್ಮ ಸಮನ್ವಯತೆಯ ಕೇಂದ್ರ ಆಗಿರುವ, ಎರಡು ರಾಷ್ಟ್ರೀಕೃತ ಬ್ಯಾಂಕುಗಳ ಸ್ಥಾಪನೆಗೆ ಸಾಕ್ಷಿಯಾಗಿರುವ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕವಾಗಿ ಬಹಳ ದೊಡ್ಡದಾದ ಕೊಡುಗೆಯನ್ನು ನೀಡಿರುವ ಉಡುಪಿ ಜಿಲ್ಲೆಯ ಸಾಧನೆಯು ನಿಜಕ್ಕೂ ಅದ್ಭುತ ಮತ್ತು ಅನನ್ಯ.
ಅದು ಬರೆದಷ್ಟೂ ಮುಗಿಯುವ ಅಧ್ಯಾಯವೇ ಅಲ್ಲ.

ರಜತ ಮಹೋತ್ಸವ ಸಂಭ್ರಮ

ಆ.25ರಂದು ಸಂಜೆ ಅದೇ ಉಡುಪಿಯ ಕೇಂದ್ರವಾದ ಅಜ್ಜರಕಾಡು ಮೈದಾನದಲ್ಲಿ ರಾಜ್ಯಪಾಲರ ಸಮ್ಮುಖದಲ್ಲಿ ಉಡುಪಿ ಜಿಲ್ಲೆಯ ರಜತ ಮಹೋತ್ಸವದ ಕಾರ್ಯಕ್ರಮ ವೇದಿಕೆ ಏರಲಿದೆ.
ಆದರೆ ಅದೇ ವೇದಿಕೆಯಲ್ಲಿ ಉಡುಪಿ ಜಿಲ್ಲೆಯ ಬಹು ಶ್ರೇಷ್ಠ ಪ್ರಾತಃಸ್ಮರಣೀಯರಾದ ಈ ಐದು ಐಕಾನ್ ವ್ಯಕ್ತಿಗಳ ಸ್ಮರಣೆ ಮಾಡಿಕೊಳ್ಳದೆ ಹೋದರೆ ರಜತ ಕಾರ್ಯಕ್ರಮವು ಅರ್ಥಪೂರ್ಣ ಆಗಲಾರದು.
ಮಹಾನ್‌ ಸಂತ ಪೇಜಾವರ ಶ್ರೀಗಳು
ಮೊದಲನೆಯವರು ಪೇಜಾವರ ಶ್ರೀಗಳು. ಉಡುಪಿಯನ್ನು ಅತಿ ದೊಡ್ಡ ಆಧ್ಯಾತ್ಮಿಕ ಹಬ್ ಆಗಿ ರೂಪಿಸಿದ ಸಂತ ಅವರು. ಹಿಂದೂ ಧರ್ಮದ ಬಹುದೊಡ್ಡ ಮುಖಂಡ. ಸಮಾಜವು ಮಾರ್ಗದರ್ಶನ ಬೇಕು ಎಂದು ಬಂದಾಗ ಹಿಂದೆ ಮುಂದೆ ಯೋಚನೆಯನ್ನು ಮಾಡದೆ ಎಲ್ಲರ ಜೊತೆಗೆ ನಿಂತವರು. ಧರ್ಮಕ್ಕೆ ಬಂದಳಿಕೆಯ ಹಾಗೆ ಹಬ್ಬಿದ ಅಸ್ಪೃಶ್ಯತೆಯ ವಿರುದ್ಧ ಹೋರಾಟಕ್ಕೆ ಇಳಿದವರು. ಎಲ್ಲ ಧರ್ಮದವರನ್ನು ಹತ್ತಿರಕ್ಕೆ ಎಳೆದು ಸ್ವಾಮರಸ್ಯಕ್ಕೆ ಪ್ರಯತ್ನ ಮಾಡಿದವರು. ಅವರನ್ನು ಮರೆತರೆ ಎಲ್ಲವನ್ನೂ ಮರೆತಂತೆ.

ಮಹಾದಾನಿ ಹಾಜಿ ಅಬ್ದುಲ್ಲ

ಎರಡನೆಯವರು ಉಡುಪಿಯ ಮತೀಯ ಸೌಹಾರ್ದದ ಪ್ರತೀಕ ಆಗಿರುವ ಹಾಜಿ ಅಬ್ದುಲ್ಲಾ ಸಾಹೇಬರು. ಅವರು ಉಡುಪಿಯ ಅತಿ ದೊಡ್ಡ ದಾನಿಗಳು, ಸಮಾಜಸೇವಕರು ಮತ್ತು ಕಾರ್ಪೋರೇಶನ್ ಬ್ಯಾಂಕಿನ ಸ್ಥಾಪಕರು. ಉಡುಪಿ ಶ್ರೀಕೃಷ್ಣ ಮಠದ ಎಲ್ಲ ಸ್ವಾಮೀಜಿಯವರ ನಿಕಟ ಸಂಬಂಧ ಇಟ್ಟುಕೊಂಡು ಎಲ್ಲ ಮಠದ ಪರ್ಯಾಯಗಳಿಗೂ ನೆರವಾಗಿ ನಿಂತವರು. ಆಗಿನ ಕಾಲದಲ್ಲಿ ಕರಾವಳಿಯ ಜಿಲ್ಲೆಗಳಲ್ಲಿ ಸ್ವಾತಂತ್ರ್ಯದ ಹೋರಾಟಕ್ಕೆ ಬೆಂಬಲವಾಗಿ ನಿಂತವರು. ಗಾಂಧೀಜಿಯವರನ್ನು ಉಡುಪಿಗೆ ಕರೆತಂದವರು. ತನ್ನ ಎಲ್ಲ ಸಂಪತ್ತನ್ನು ಸಮಾಜಕ್ಕೆ ಧಾರೆ ಎರೆದವರು. ಉಡುಪಿಯ ಸರಕಾರಿ ಆಸ್ಪತ್ರಗೆ ತುಂಬಾ ಬೆಲೆಬಾಳುವ ಭೂಮಿಯನ್ನು ಉಚಿತವಾಗಿ ಕೊಟ್ಟವರು. ಅವರಿಲ್ಲದ ಉಡುಪಿಯನ್ನು ಕಲ್ಪನೆ ಮಾಡಿಕೊಳ್ಳುವುದು ಖಂಡಿತ ಕಷ್ಟ.

ಜಿಲ್ಲೆಯ ಸಾಕ್ಷಿಪ್ರಜ್ಞೆ ಶಿವರಾಮ ಕಾರಂತರು

ಮೂರನೇಯವರು ಕೋಟ ಶಿವರಾಮ ಕಾರಂತರು. ಅವರನ್ನು ಉಡುಪಿ ಜಿಲ್ಲೆಯ ಸಾಕ್ಷಿ ಪ್ರಜ್ಞೆ ಎಂದರೂ ಸರಿಯೇ. ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ, ಕಾದಂಬರಿಕಾರ, ಚಿಂತಕ, ಪರಿಸರದ ಹೋರಾಟಗಾರ, ವೈಜ್ಞಾನಿಕ ಲೇಖಕ ಎಲ್ಲವೂ ಆಗಿದ್ದಾರೆ. ಯಕ್ಷಗಾನವನ್ನು ಬ್ಯಾಲೆಯಾಗಿ ರೂಪಿಸಿ ಸೀಮೋಲ್ಲಂಘನ ಮಾಡಿಸಿದವರು ಅವರು. ಅವರ ಪ್ರತಿಭೆಗೆ ಅವರೇ ಸಾಟಿ. ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಅವರ ಗುಣ ಅದು ಅದ್ಭುತವೇ ಸರಿ. ಹಾಗೆ ಸಾಂಸ್ಕೃತಿಕ, ಸಾಹಿತ್ಯಕ ಪರಿಷೆಗೆ ಅನುಗುಣವಾಗಿ ಕಾರಂತರ ನೆನಪು ಆಗಲೆಬೇಕು.

ಆರ್ಥಿಕ ಅಭಿವೃದ್ಧಿಯ ರೂವಾರಿಗಳು ಪೈ ಪರಿವಾರದವರು

ನಾಲ್ಕನೆಯವರು ಆಧುನಿಕ ಮಣಿಪಾಲದ ಬ್ರಹ್ಮರೆಂದೇ ಖ್ಯಾತರಾಗಿರುವ ಟಿ.ಎ.ಪೈ ಮತ್ತು ಡಾಕ್ಟರ್ ಟಿ.ಎಂ.ಎ ಪೈ ಅವರು. ಕಸ್ತೂರ್ಬಾ ಮೆಡಿಕಲ್ ಕಾಲೇಜು, ಸಿಂಡಿಕೇಟ್ ಬ್ಯಾಂಕ್, ಮಣಿಪಾಲ್ ಹಣಕಾಸು ಸಂಸ್ಥೆಗಳು, ಉಡುಪಿ ಮತ್ತು ನೆರೆಯ ಜಿಲ್ಲೆಗಳಲ್ಲಿ ಮಹೋನ್ನತ ಪದವಿ ಕಾಲೇಜುಗಳು ಅವರದ್ದೇ ಕೊಡುಗೆ. ಇಂದು ಉಡುಪಿಯಲ್ಲಿ ಸಾವಿರಾರು ಹೊರಗಿನ, ವಿದೇಶಗಳ ವಿದ್ಯಾರ್ಥಿಗಳು ಕೂಡ ಕಲಿಯಲು ಬರುತ್ತಾರೆ ಅಂದರೆ ಅದಕ್ಕೆ ಕಾರಣವೇ ಡಾಕ್ಟರ್ ಮಾಧವ ಪೈ ಅವರು. ಶಿಕ್ಷಣರಂಗದ ಪರಿಷೆಯಲ್ಲಿ ಅವರ ಸ್ಮರಣೆ ಆಗಲೇಬೇಕು.

ಆಧುನಿಕ ಉಡುಪಿಯ ಜನಕ ಡಾ| ವಿ.ಎಸ್‌.ಆಚಾರ್ಯ

ಐದನೆಯವರು ನಿಸ್ಸಂಶಯವಾಗಿಯು ಡಾಕ್ಟರ್ ವಿ.ಎಸ್ ಆಚಾರ್ಯ ಅವರು. ಆಧುನಿಕ ಉಡುಪಿಯ ಜನಕ ಎಂದರೆ ಅವರೇ.
ಉಡುಪಿಯ ವೈಭವದ ರಜತಾದ್ರಿ, ಅಗಲವಾದ ರಸ್ತೆಗಳು, ಮಾರುಕಟ್ಟೆ ಕಟ್ಟಡಗಳು, ಉಡುಪಿ ಮಣಿಪಾಲ ನಡುವಿನ ಚತುಷ್ಪಥ ರಸ್ತೆ, ನಗರಸಭೆಯ ಕಟ್ಟಡ, ಒಳ ಚರಂಡಿಯ ಯೋಜನೆ, ರಥ ಬೀದಿಯ ಅಭಿವೃದ್ಧಿ ಹೀಗೆ… ಇವೆಲ್ಲವೂ ಆಚಾರ್ಯರ ಕೊಡುಗೆ.
ಅವರು ಉಡುಪಿ ನಗರಸಭೆಯ ಅಧ್ಯಕ್ಷರಾಗಿದ್ದಾಗ ಇಡೀ ದೇಶಕ್ಕೆ ಮಾದರಿಯಾಗಿ ತಲೆಯ ಮೇಲೆ ಮಲ ಹೊರುವ ಪದ್ಧತಿಯನ್ನು ಪೂರ್ಣ ನಿಷೇಧ ಮಾಡುವ ಶಾಸನವನ್ನು ಅಂಗೀಕಾರ ಮಾಡಲಾಗಿತ್ತು. ಇವೆಲ್ಲ ಶ್ರೇಷ್ಠ ಕೊಡುಗೆಗಳ ಸಂಕೇತವಾಗಿ ರಜತ ಮಹೋತ್ಸವದ ಸಂದರ್ಭದಲ್ಲಿ ಅವರ ಸ್ಮರಣೆ ಅಗತ್ಯವಾಗಿ ಆಗಬೇಕು.
ಉಡುಪಿಯಲ್ಲಿ ಇದೀಗ ಸಾರ್ವಜನಿಕರ ಬೇಡಿಕೆ ಆಗಿರುವ ಸರಕಾರಿ ವೈದ್ಯಕೀಯ ಕಾಲೇಜಿನ ಘೋಷಣೆಯು ಈ ವೇದಿಕೆಯಲ್ಲಿ ಆಗಲಿ ಎಂದು ನಮ್ಮೆಲ್ಲರ ಹಕ್ಕೊತ್ತಾಯ. ಅದು ಡಾಕ್ಟರ್ ವಿ. ಎಸ್. ಆಚಾರ್ಯ ಅವರ ಹೆಸರಿನ ‘ಸರಕಾರಿ ವೈದ್ಯಕೀಯ ಕಾಲೇಜು’ ಆಗಲಿ ಎಂದು ನಮ್ಮೆಲ್ಲರ ಒಕ್ಕೊರಲ ಆಗ್ರಹ. ಅವರು ಕರ್ನಾಟಕದ ಶ್ರೇಷ್ಠ ವೈದ್ಯಕೀಯ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ ನೆನಪಿಗಾಗಿ ಅದು ಆಗಬೇಕು.
ಆಗ ಮಾತ್ರ ನಾವು ಪ್ರೀತಿಸುವ ಉಡುಪಿ ಜಿಲ್ಲೆಯ ರಜತ ಮಹೋತ್ಸವ ಹೆಚ್ಚು ಅರ್ಥಪೂರ್ಣ ಆಗುತ್ತದೆ.
ರಾಜೇಂದ್ರ ಭಟ್‌ ಕೆ.

ರಾಜೇಂದ್ರ ಭಟ್‌

ಜೇಸಿ ರಾಷ್ಟ್ರೀಯ ತರಬೇತಿದಾರ





























































































































































































































error: Content is protected !!
Scroll to Top