ಶ್ರಾವಣ ಮಾಸದ ಹುಣ್ಣಿಮೆ ಬಂತು ಅಂದರೆ ರಕ್ಷಾ ಬಂಧನದ ಹಬ್ಬ ನಮ್ಮನ್ನು ಆವರಿಸುತ್ತದೆ. ಭ್ರಾತೃತ್ವದಲ್ಲಿ ನಂಬಿಕೆ ಇರಿಸಿದ ಪ್ರತಿಯೊಬ್ಬರೂ ಈ ಸಂಭ್ರಮಕ್ಕೆ ಸಾಕ್ಷಿ ಆಗುತ್ತಾರೆ.
ಪೌರಾಣಿಕ – ಐತಿಹಾಸಿಕ ಮಹತ್ವ
ಹಬ್ಬಕ್ಕೆ ಒಂದು ಪೌರಾಣಿಕ ಹಿನ್ನೆಲೆ ಕೂಡ ಇದೆ. ಮಹಾಭಾರತದಲ್ಲಿ ದ್ರೌಪದಿ ತಾನು ಅಣ್ಣ ಎಂದು ಕರೆಯುವ ಶ್ರೀ ಕೃಷ್ಣ ದೇವರ ಬೆರಳಿಗೆ ಗಾಯ ಆಗಿ ರಕ್ತವು ಸುರಿಯುತ್ತಿದ್ದಾಗ ತನ್ನ ಸೆರಗಿನ ಒಂದು ಸೀಳು ತೆಗೆದು ಅವನ ಕೈಗೆ ಕಟ್ಟಿದ್ದು ನಾಂದಿ. ಮುಂದೆ ಆ ರಕ್ಷೆಯ ಋಣಕ್ಕಾಗಿ ಕೃಷ್ಣನು ಮಹಾಭಾರತ ಯುದ್ಧವನ್ನು ಗೆದ್ದು ದ್ರೌಪದಿಯ ಪ್ರತಿಜ್ಞೆಯನ್ನು ನೆರವೇರಿಸಿಕೊಟ್ಟದ್ದು ನಮಗೆಲ್ಲರಿಗೂ ಗೊತ್ತಿರುವ ಕತೆ. ಪುರಾಣಗಳಲ್ಲಿ ಇಂಥಹ ನಿದರ್ಶನಗಳು ನೂರಾರು ಬರುತ್ತವೆ.

ಇತಿಹಾಸವನ್ನು ಓದುವವರಿಗೆ
ಶ್ರೇಷ್ಠವಾದ ಉದಾಹರಣೆಗಳು ದೊರೆಯುವುದು 15ನೆ ಶತಮಾನದ ಹೊತ್ತಿಗೆ. ಇಸ್ಲಾಮಿಕ್ ಆಕ್ರಮಣಗಳಿಂದ ನಮ್ಮ ಹಿಂದೂ ಸ್ತ್ರೀಯರ ಅತ್ಯಾಚಾರಗಳು ಆರಂಭ ಆದಾಗ ರಜಪೂತ ಸ್ತ್ರೀಯರು ತಮ್ಮ ರಕ್ಷಣೆಗೆ ಆರಿಸಿಕೊಂಡದ್ದು ಇದೇ ರಕ್ಷೆಯನ್ನು. ರಜಪೂತ ರಾಣಿಯಾದ ಕರ್ಣಾವತಿಯು ತನಗೆ ತೊಂದರೆ ಬಂದಾಗ ರಕ್ಷೆ ಕಳುಹಿಸಿ ಸಹಾಯ ಕೇಳಿದ್ದು ಮೊಗಲ್ ದೊರೆಯಾದ ಹುಮಾಯೂನನನ್ನು. ಆತ ಅದಕ್ಕೆ ಗೌರವ ಕೊಟ್ಟು ಆಕೆಯ ಸಹಾಯಕ್ಕೆ ಧಾವಿಸಿದ್ದು ಒಂದು ಶ್ರೇಷ್ಟವಾದ ಮಾದರಿ!
ರಕ್ಷಾಬಂಧನ ಹಿನ್ನೆಲೆ
ಸೋದರತ್ವವು ರಕ್ತ ಸಂಬಂಧವನ್ನು ಮೀರಿದ್ದು ಜಾತಿ, ಧರ್ಮ, ಭಾಷೆ, ಅಂತಸ್ತು ಎಲ್ಲವನ್ನೂ ಮೀರಿ ನಿಂತಿದೆ. ಯಾವುದೇ ಸ್ತ್ರೀ ತನ್ನ ಮಾನ, ಪ್ರಾಣ, ಸ್ವಾಭಿಮಾನ ರಕ್ಷಣೆಗೆ ತಾನು ಸೋದರ ಎಂದು ಗುರುತು ಮಾಡಿದವನಿಗೆ ರಕ್ಷೆಯನ್ನು ಕಟ್ಟಿ ಅಭಯವನ್ನು ಪಡೆಯುತ್ತಾಳೆ. ಆರತಿ ಎತ್ತಿ, ಸಿಹಿ ತಿಂಡಿ ಕೊಟ್ಟು, ಆತನ ಆಶೀರ್ವಾದ ಪಡೆಯುತ್ತಾಳೆ. ಅವನೂ ಅಷ್ಟೇ ತನಗೆ ರಕ್ಷೆ ಕಟ್ಟಿದ ಸೋದರಿಯ ಮಾನ, ಪ್ರಾಣ ಮತ್ತು ಸ್ವಾಭಿಮಾನದ ರಕ್ಷಣೆಗೆ ಸದಾ ಕಾವಲು ಕಾಯುತ್ತಾನೆ. ನೆರವಿಗೆ ನಿಲ್ಲುತ್ತಾನೆ. ಆಧುನಿಕ ಕಾಲದ ಧಾವಂತದ ಬದುಕಿನಲ್ಲಿ ಮಾನವೀಯ ಸಂಬಂಧಗಳು ನಶಿಸಿ ಹೋಗುತ್ತಿರುವ ಈ ಯುಗದಲ್ಲಿ ಕೂಡ ರಕ್ಷಾ ಬಂಧನದ ಮಹತ್ವ ಮತ್ತು ಪ್ರಭಾವ ಒಂದಿಷ್ಟೂ ಕಡಿಮೆ ಆಗಿಲ್ಲ! ರಕ್ಷಾ ಬಂಧನವನ್ನು ಒಂದು ಸಂಕಲ್ಪದಂತೆ ಕಟ್ಟುವ, ಕಟ್ಟಿಸಿಕೊಳ್ಳುವ ಅಣ್ಣ, ತಂಗಿಯರ ಸಂಖ್ಯೆಯು ಪ್ರತಿ ವರ್ಷ ಹೆಚ್ಚಾಗುತ್ತಾ ಇದೆ.
ರಕ್ಷೆಯ ಸಂಕೇತಗಳು
ಕೇಸರಿ ಬಣ್ಣದ ನೂಲಿನಿಂದ ಮಾಡಿದ ರಕ್ಷೆಯು ಮಾತ್ರ ಪಾವಿತ್ರ್ಯದ ಸಂಕೇತವಾಗಿ ಸ್ವೀಕೃತ ಆಗುತ್ತದೆ. ಬೇರೆ ಬಣ್ಣ ಖಂಡಿತ ಸಲ್ಲ. ಪ್ಲಾಸ್ಟಿಕ್‌ನಿಂದ ಮಾಡಿದ ರಕ್ಷೆಯೂ ಖಂಡಿತ ಬೇಡ. ಕೇಸರಿ ಬಣ್ಣ ತ್ಯಾಗದ ಸಂಕೇತ. ನಮ್ಮ ಋಷಿ ಮುನಿಗಳು ಮಾಡುತ್ತಿದ್ದ ಯಜ್ಞ ಯಾಗಾದಿಗಳ ಧೂಮವು ಕೇಸರಿ. ಸೂರ್ಯನ ಉದಯದ ಮತ್ತು ಅಸ್ತಮಾನದ ಬಣ್ಣ ಕೇಸರಿ. ಇಲ್ಲಿಯ ಮಣ್ಣಿನ ಬಣ್ಣ ಕೂಡ ಕೇಸರಿ. ಹಲವು ನೂಲಿನ ಎಳೆಗಳನ್ನು ಒಂದು ದಾರವು ಕಟ್ಟಿ ನಿಲ್ಲಿಸುವುದು ಐಕ್ಯತೆಯ ಸಂಕೇತ. ಎಲ್ಲಕ್ಕಿಂತ ಹೆಚ್ಚಾಗಿ ಇದು ಭಾವನಾತ್ಮಕ ಸಂಬಂಧದ ಪ್ರತೀಕ. ಪಾವಿತ್ರ್ಯತೆಯ ಸಂಕೇತ. ಸದ್ಭಾವನೆಯ ಸಂಕೇತ. ಅಂತಹ ರಕ್ಷಾ ಬಂಧನದ ಈ ದಿನ ನ್ಯೂಸ್ ಕಾರ್ಕಳ ತನ್ನ ಎಲ್ಲ ಓದುಗರಿಗೆ ರಕ್ಷಾ ಬಂಧನ ಹಬ್ಬದ ಶುಭಾಶಯಗಳನ್ನು ಕೋರುತ್ತದೆ.




















