ಮಂಗಳೂರು:ಸುಳ್ಯದ ಬೆಳ್ಳಾರೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೂ ಮತಾಂಧ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ ಇಂಡಿಯಾಕ್ಕೂ ನೇರ ಸಂಬಂಧ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವು ಆರೋಪಿಗಳಿಗೆ ಪಿಎಫ್‌ಐ ಸಂಪರ್ಕ ಇರುವುದು ತನಿಖೆಯಿಂದ ಪತ್ತೆಯಾಗಿದೆ. ಪ್ರಮುಖ ಮೂವರು ಆರೋಪಿಗಳನ್ನು ಪಿಎಫ್‌ಐ ರಕ್ಷಿಸುತ್ತಿರುವ ಸುಳಿವು ಸಿಕ್ಕಿದೆ. . ಈ ಬಗ್ಗೆ ತನಿಖೆಯನ್ನು ಮಾಡುತ್ತಿದ್ದೇವೆ ಎಂದು ತನಿಖೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.
ಯಾರಿಗೆಲ್ಲಾ ಪಿಎಫ್ಐ ಸಂಪರ್ಕ ಇದೆ ಎಂಬುವುದರ ಬಗ್ಗೆ ತನಿಖೆಯ ಬಳಿಕ ಹೇಳುತ್ತೇವೆ. ಆರೋಪಿಗಳಿಗೆ ಪಿಎಫ್ಐ ಜೊತೆ ನಂಟು ಇರುವ ವಿಚಾರಕ್ಕೆ ಸಂಬಂಧಿಸಿ ನಾವು ದಾಖಲೆ ಜೊತೆಗೆ ಮಾತನಾಡುತ್ತೇವೆ. ಪ್ರವೀಣ್ ಹತ್ಯೆಯ ಪ್ರಮುಖ ಆರೋಪಿಗಳ ಸಂಪೂರ್ಣ ಮಾಹಿತಿ ಇದೆ, ಅವರ ಫೋಟೊ,ಮನೆ ವಿಳಾಸ, ತಂದೆ-ತಾಯಿ, ಹೆಂಡತಿ ಸೇರಿದಂತೆ ಕುಟುಂಬದವರ ಮಾಹಿತಿಯೂ ಲಭ್ಯವಿದೆ. ಪ್ರಮುಖ ಆರೋಪಿಗಳನ್ನು ಬಚ್ಚಿಡುವ ಕೆಲಸ ನಡೆಯುತ್ತಿದೆ. ಆಗಾಗ ಅವರ ಸ್ಥಳ ಬದಲಾವಣೆ ಮಾಡಲಾಗುತ್ತಿದೆ. ದಾಖಲೆಗಳ ಆಧಾರದ ಮೇಲೆ ಸಾಕ್ಷಿ ಸಂಗ್ರಹಿಸಿ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳುತ್ತೇವೆ. ಪಿಎಫ್‌ಐ ಜತೆ ಶಂಕಿತ ನಂಟು ಕಂಡು ಬಂದಿದೆ. ತನಿಖೆ ನಂತರ ಯಾರಿಗೆಲ್ಲಾ ಪಿಎಫ್‌ಐ ಜತೆ ನಂಟು ಇದೆ ಎನ್ನುವುದನ್ನು ಹೇಳಬಹುದು. ಬಾಯಿ ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ ಎಂದರು.
ಆರೋಪಿಗಳಿಗೆ ನೆರವಾದವರ ಆಸ್ತಿ ಮುಟ್ಟುಗೋಲು
ಆರೋಪಿಗಳನ್ನು ಕೆಲವರು ರಕ್ಷಣೆ ಮಾಡುತ್ತಿದ್ದು, ಆರೋಪಿಗಳಿಗೆ ನೆರವಾದವರ ಆಸ್ತಿ ಮುಟ್ಟುಗೋಲಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಂಗಳೂರು ಎಡಿಜಿಪಿ ಆಲೋಕ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ. ಪರಾರಿಯಾದ ಮೂವರು ಆರೋಪಿಗಳ ಫೋಟೋ , ಮನೆ ವಿಳಾಸ, ಮನೆಯವರ ಬಗ್ಗೆ ತಿಳಿದಿದೆ. ಆದರೆ ಆರೋಪಿಗಳನ್ನು ಕೆಲವರು ಬಚ್ಚಿಟ್ಟಿದ್ದಾರೆ. ಅವರನ್ನು ಯಾವ ರೀತಿ ಪತ್ತೆ ಹಚ್ಚಬೇಕು ಎಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ ಎಂದರು. ಈ ಪ್ರಕರಣಕ್ಕೆ ಸಂಬಂಧಿಸಿ ಪ್ರಚೋದನೆ ನೀಡಿದವರು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದವರ ಮೇಲೂ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಯಾರೆಲ್ಲಾ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಅವರೆಲ್ಲರ ಮೇಲೆ ಕರ್ನಾಟಕ ಪೊಲೀಸ್ ಹಾಗೂ ಎನ್‌ಐಎ ಮೂಲಕ ಕ್ರಮ ಜರುಗಿಸುತ್ತೇವೆ. ಪರಾರಿಯಾದ ಆರೋಪಿಗಳನ್ನು ಪತ್ತೆಹಚ್ಚಲು ಕೋರ್ಟ್ ಮುಖಾಂತರ ವಾರೆಂಟ್ ಪಡೆದು ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.




















