ಇಂದು ರಾತ್ರಿ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಚಾಲನೆ

ಮೊದಲ ಬಾರಿ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಸ್ಪರ್ಧೆಗಳುಪಿ.ವಿ.ಸಿಂಧು ಭಾರತದ ಧ್ವಜಧಾರಿ

ಬರ್ಮಿಂಗ್‌ಹ್ಯಾಮ್‌ (ಇಂಗ್ಲೆಂಡ್‌) : ಪ್ರಪಂಚದ ಅತಿದೊಡ್ಡ ಕ್ರೀಡಾಕೂಟಗಳಲ್ಲಿ ಒಂದಾದ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಇಂದು ಚಾಲನೆ ಸಿಗಲಿದೆ. ಇಂದಿನಿಂದ ಆಗಸ್ಟ್‌ 8ರವರಗೆ ಈ ಬೃಹತ್‌ ಕ್ರೀಡಾಜಾತ್ರೆ ನಡೆಯಲಿದೆ. ಉದ್ಘಾಟನಾ ಸಮಾರಂಭ ಗುರುವಾರ ಭಾರತದ ಕಾಲಮಾನ ಪ್ರಕಾರ ರಾತ್ರಿ 11.30ಕ್ಕೆ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿರುವ ಅಲೆಕ್ಸಾಂಡರ್ ಕ್ರೀಡಾಂಗಣದಲ್ಲಿ ನಡೆಯಲಿದೆ.ಸ್ಥಳೀಯ ಅಥವಾ ಇಂಗ್ಲೆಂಡ್‌ ಕಾಲಮಾನದ ಪ್ರಕಾರ ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗುತ್ತದೆ.
ಇಂಗ್ಲೆಂಡಿನ ಹೃದಯ ಎಂದೇ ಕರೆಯಲ್ಪಡುವ ಬರ್ಮಿಂಗ್‌ಹ್ಯಾಮ್ ಈ ಬಾರಿಯ ಕ್ರೀಡಾಕೂಟವನ್ನು ಆಯೋಜಿಸುತ್ತಿದೆ.
ಕ್ರೀಡಾಕೂಟದಲ್ಲಿ 72 ಕಾಮನ್‌ವೆಲ್ತ್ ರಾಷ್ಟ್ರಗಳ 5,000ಕ್ಕೂ ಹೆಚ್ಚು ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ. ಈಜು, ಅಥ್ಲೆಟಿಕ್ಸ್, ಜಿಮ್ನಾಸ್ಟಿಕ್ಸ್, ಬಾಕ್ಸಿಂಗ್, ಕುಸ್ತಿ, ಬ್ಯಾಡ್ಮಿಂಟನ್, ಕ್ರಿಕೆಟ್, ಹಾಕಿ, ಬಾಸ್ಕೆಟ್‌ಬಾಲ್, ಸೈಕ್ಲಿಂಗ್ ಸೇರಿದಂತೆ ಹಲವು ಕ್ರೀಡೆಗಳು ನಡೆಯಲಿವೆ. ಜಾಗತಿಕ ಮಟ್ಟದ ಕ್ರೀಡಾಕೂಟದ ಇತಿಹಾಸದಲ್ಲೇ ಮೊದಲ ಬಾರಿಗೆ ಪುರುಷರಿಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಅಥ್ಲೀಟ್‌ಗಳಿಗೆ ಸ್ಪರ್ಧೆಗಳು ನಡೆಯಲಿವೆ. ಕ್ರೀಡಾಕೂಟದಲ್ಲಿ ಪುರುಷರಿಗಾಗಿ 134 ಸ್ಪರ್ಧೆಗಳು ನಡೆದರೆ, ಮಹಿಳೆಯರಿಗಾಗಿ 136 ಪದಕ ಸ್ಪರ್ಧೆಗಳು ನಡೆಯಲಿವೆ.
ಇಂಗ್ಲೆಂಡ್‌ ರಾಜಕುಮಾರ ಚಾರ್ಲ್ಸ್ ಅವರ ಉಪಸ್ಥಿತಿಯಲ್ಲಿ ಕ್ರೀಡಾಕೂಟಕ್ಕೆ ನಗರದ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ಸುಮಾರು 30,000 ಪ್ರೇಕ್ಷಕರ ನಡುವೆ ರ್ಣರಂಜಿತ ಚಾಲನೆ ದೊರೆಯಲಿದೆ.
ಪಿ.ವಿ.ಸಿಂಧು ಧ್ವಜಧಾರಿ
ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಮತ್ತು ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ. ವಿ. ಸಿಂಧು ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಲಿದ್ದಾರೆ. ಭಾರತ 215 ಅಥ್ಲೀಟ್‌ಗಳು ಮತ್ತು 107 ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಕಳುಹಿಸಿದೆ. ಈ ಬಾರಿ ಮೊದಲ ಬಾರಿಗೆ ಮಹಿಳಾ ಕ್ರಿಕೆಟ್ ನಡೆಯುತ್ತಿರುವುದರಿಂದ, ಭಾರತದ ಅಭಿಮಾನಿಗಳ ಖುಷಿ ಇಮ್ಮಡಿಯಾಗಿದೆ.
ಉದ್ಘಾಟನಾ ಸಮಾರಂಭವನ್ನು Sony TEN 1, Sony TEN 2, Sony TEN 3, Sony SIX ಮತ್ತು Sony TEN 4 ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಇದರೊಂದಿಗೆ ಡಿಡಿ ಸ್ಪೋರ್ಟ್ಸ್ ವಾಹಿನಿಯು ಉಚಿತವಾಗಿ ಭಾರತದಲ್ಲಿ ಉದ್ಘಾಟನಾ ಸಮಾರಂಭದ ನೇರಪ್ರಸಾರ ಮಾಡುತ್ತದೆ.







































































































error: Content is protected !!
Scroll to Top