ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಬಿಜೆಪಿ ಸರಕಾರ ಒಂದು ವರ್ಷವನ್ನು ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿಯಿಂದ ರಾಜ್ಯಾದ್ಯಂತ ಇದೇ 28ರಿಂದ ಎಲ್ಲ ಜಿಲ್ಲೆಗಳಲ್ಲಿ ಜನೋತ್ಸವವನ್ನು ಹಮ್ಮಿಕೊಂಡಿದ್ದೇವೆ. ಇದರ ಸಂಬಂಧ ಮೊದಲ ಕಾರ್ಯಕ್ರಮ ಜುಲೈ 28ರಂದು ದೊಡ್ಡಬಳ್ಳಾಪುರದಲ್ಲಿ ನಡೆಯಲಿದೆ ಎಂದು ಸಚಿವ ವಿ. ಸುನೀಲ್ ಕುಮಾರ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ ಆಡಳಿತದ ಮೂರು ವರ್ಷ ಮತ್ತು ಬೊಮ್ಮಾಯಿ ನೇತೃತ್ವದ ಸರಕಾರದ ಒಂದು ವರ್ಷವನ್ನು ಜನೋತ್ಸವವಾಗಿ ರಾಜ್ಯದಾದ್ಯಂತ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ನಮ್ಮ ಇಂಧನ ಇಲಾಖೆಯಲ್ಲಿ ಒಂದು ವರ್ಷದ ಅವಧಿಯಲ್ಲಿ ಹೊಸ ಹೊಸ ಯೋಜನೆಗಳನ್ನು ಜನರಿಗೆ ತಲುಪಿಸಲಾಗಿದೆ. ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕ ಕೊಡಲಾಗಿದೆ. ಪರಿಶಿಷ್ಟ ಜಾತಿ, ಪಂಗಡದವರಿಗೆ 75 ಯೂನಿಟ್ ಉಚಿತ ವಿದ್ಯುತ್ ಕೊಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಟ್ರಾನ್ಸ್‌ಫಾರ್ಮರ್ ನಿರ್ವಹಣಾ ಅಭಿಯಾನವನ್ನು ಹಮ್ಮಿಕೊಂಡಿದ್ದು, ಒಂದು ವಾರದಲ್ಲಿ ಸುಮಾರು 3.5 ಲಕ್ಷದಿಂದ 4 ಲಕ್ಷ ಟ್ರಾನ್ಸ್‌ಫಾರ್ಮರ್ ನಿರ್ವಹಣೆ ಮಾಡಲಾಗಿದೆ ಎಂದು ವಿವರಿಸಿದರು.
ಕೆಪಿಟಿಸಿಎಲ್ ಮೂಲಕ 1,850 ಕಿ.ಮೀ ಹೊಸ ವಿದ್ಯುತ್ ಲೈನನ್ನು ಒಂದು ವರ್ಷದಲ್ಲಿ ಎಳೆಯಲಾಗಿದೆ. ಇದೊಂದು ದೊಡ್ಡ ಸಾಧನೆ. 37 ಕಡೆಗಳಲ್ಲಿ ಸಬ್ ಸ್ಟೇಷನ್ ನಿರ್ಮಾಣ, 200 ಕಡೆಗಳಲ್ಲಿ ಸಬ್ ಸ್ಟೇಷನ್ ಉನ್ನತೀಕರಣ ಮಾಡಲಾಗಿದೆ. ಇದು ಸೇರಿದಂತೆ ವಿವಿಧ ಇಲಾಖೆಗಳ ಸಾಧನೆಯನ್ನು ಜನೋತ್ಸವದ ಮೂಲಕ ತಿಳಿಸಲಾಗುವುದು ಎಂದು ಹೇಳಿದರು.
ನಾವು ಜನರನ್ನು ಕಣ್ಮುಂದೆ ಇಟ್ಟುಕೊಂಡು ಜನೋತ್ಸವ ಮಾಡಿದರೆ, ಕಾಂಗ್ರೆಸ್‍ನವರು ವ್ಯಕ್ತಿಯನ್ನು ಕಣ್ಮುಂದೆ ಇಟ್ಟುಕೊಂಡು ವ್ಯಕ್ತಿಯ ಉತ್ಸವ ಮಾಡುತ್ತಿದ್ದಾರೆ. ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವ್ಯತ್ಯಾಸ ಎಂದು ವಿವರಿಸಿದರು. ನಾವು ಯಾವತ್ತೂ ವ್ಯಕ್ತಿಯನ್ನು ಆರಾಧಿಸಲಿಲ್ಲ. ನಾವು ವಿಚಾರ, ಜನರನ್ನು ಆರಾಧಿಸಿದ್ದೇವೆ. ವ್ಯಕ್ತಿ ಆರಾಧಿಸುವ ಅವರು ಸಿದ್ದರಾಮೋತ್ಸವ ಮಾಡುತ್ತಿದ್ದಾರೆ ಎಂದು ಹೇಳಿದರು.
























