ಬೆಂಗಳೂರು: ಇನ್ನು ಮುಂದೆ ಸರಕಾರಿ ಕಚೇರಿಯಲ್ಲಿ ಸಿಬ್ಬಂದಿಗಳಿಲ್ಲದೆ ಕುರ್ಚಿ ಖಾಲಿಯಿದ್ದರೆ ನೀವು ನೇರವಾಗಿ ದೂರು ಸಲ್ಲಿಸಬಹುದು.ರಾಜ್ಯ ಸರ್ಕಾರಿ ನೌಕರರು ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿ ಹಾಜರಿರುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಎಚ್ಚರಿಕೆ ನೀಡಿದ್ದಾರೆ. ಸರಿಯಾದ ವೇಳೆಗೆ ಕೆಲಸಕ್ಕೆ ಹಾಜರುವಂತೆ ಆದೇಶ ಹೊರಡಿಸಿದ್ದರೂ ಅನೇಕ ಮಂದಿ ಕಚೇರಿಗೆ ತಡವಾಗಿ ಬರುತ್ತಿರುವುದಾಗಿ ದೂರುಗಳು ಬಂದಿವೆ. ಹೀಗಾಗಿ ಸಮಯ ಪಾಲನೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ಧರಿಸಿದ್ದೇವೆ ಎಂದು ನಿನ್ನೆ ಹೊರಡಿಸಿದ ಸುತ್ತೋಲೆಯಲ್ಲಿ ಹೇಳಿದ್ದಾರೆ.
ತಡವಾಗಿ ಬರುವುದು ಇದು ಕೆಲಸದ ಮೇಲಿನ ಬದ್ಧತೆ ಕೊರತೆಯನ್ನು ತೋರಿಸುತ್ತದೆ. ನೌಕರರು ಬೆಳಗ್ಗೆ 10 ಗಂಟೆಗೂ ಮುನ್ನ ಕಚೇರಿಗೆ ಬರಬೇಕು, ಕಚೇರಿ ಅವಧಿ ಮುಗಿಯುವವರೆಗೂ ತಮ್ಮ ಕುರ್ಚಿಗಳಲ್ಲಿ ಕುಳಿತಿರಬೇಕು. ಅನುಮತಿ ಪಡೆದ ನಂತರ ಮಾತ್ರ ಅವರು
ಹೊರಗಡ ಹೋಗಬಹುದು ಎಂದು ಆದೇಶದಲ್ಲಿ ಹೇಳಲಾಗಿದೆ.
ಒಂದು ವೇಳೆ ನೌಕರರು ತಡವಾಗಿ ಬಂದರೆ ಅಥವಾ ಕಚೇರಿ ವೇಳೆಯಲ್ಲಿ ತಮ್ಮ ಸ್ಥಾನದಲ್ಲಿ ಇಲ್ಲದಿದ್ದರೆ ಉನ್ನತ ಅಧಿಕಾರಿಗಳಿಗೆ ಕಾರಣಗಳೊಂದಿಗೆ ತಿಳಿಸಬೇಕು. ಇದಕ್ಕೆ ತಪ್ಪುವ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವಂದಿತಾ ಶರ್ಮಾ ಎಚ್ಚರಿಕೆ ನೀಡಿದ್ದಾರೆ.
ಸರಕಾರಿ ನೌಕರರು ಬೆಳಗ್ಗೆ 10 ಗಂಟೆಯೊಳಗೆ ಕಚೇರಿಯಲ್ಲಿರಬೇಕು!





















