ಬಡವರಿಗೆ ಹಕ್ಕುಪತ್ರ ನೀಡದಂತೆ ಅಡ್ಡಿಪಡಿಸಿದವರಿಗೆ ಶಾಪ ತಟ್ಟದಿರದು – ಸಂತೋಷ್‌ ಶೆಟ್ಟಿ

ಕಾರ್ಕಳ : ಕಾಂಗ್ರೆಸ್‌ ಸರಕಾರದ ತಪ್ಪು ನೀತಿಯಿಂದಾಗಿ ಡೀಮ್ಡ್ ಸಮಸ್ಯೆ ತಲೆದೋರಿದೆ. ಸರಕಾರಿ ಜಾಗದಲ್ಲಿ ವಾಸ್ತವ್ಯವಿದ್ದು, ಹಕ್ಕುಪತ್ರವಿಲ್ಲದೇ ಬಡ ಕುಟುಂಬ ವಿದ್ಯುತ್‌, ನೀರು ಸಂಪರ್ಕದಿಂದ ವಂಚಿತವಾಗಿತ್ತು. ಅಲ್ಲದೇ ಆ ಕುಟುಂಬ ಮೂಲಭೂತ ಸೌಕರ್ಯ ಪಡೆಯಲು ಬಹಳಷ್ಟು ಕಷ್ಟಕರವಾಗಿತ್ತು.
ಇಂತಹ ಗಂಭೀರ ಸಮಸ್ಯೆಯನ್ನು ಮನಗಂಡು ಕಾರ್ಕಳದ ಶಾಸಕರು, ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ. ಸುನಿಲ್ ಕುಮಾರ್‌ ವಿಶೇಷ ಮುತುವರ್ಜಿ ವಹಿಸಿ, ಸರಕಾರದ ಮಟ್ಟದಲ್ಲಿ ಪ್ರಭಾವ ಬಳಸಿ ಡೀಮ್ಡ್ ಸಮಸ್ಯೆಯನ್ನು ಬಗೆಹರಿಸಿರುತ್ತಾರೆ. ಈ ಮೂಲಕ ಬಡ ಕುಟುಂಬಗಳಿಗೆ ನ್ಯಾಯ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿರುತ್ತಾರೆ. ಒಂದು ವೇಳೆ ಬಡವರಿಗೆ ಹಕ್ಕು ಪತ್ರ ಕೊಡುವ ಸಚಿವರ ಪ್ರಯತ್ನಕ್ಕೆ ಯಾರೇ ಅಡ್ಡಿ ಪಡಿಸಿದರೂ ಅಂತವರಿಗೆ ಬಡವರ ಶಾಪ ತಟ್ಟದೆ ಇರುವುದಿಲ್ಲ ಎಂದು ಪಂಚಾಯತ್‌ ರಾಜ್‌ ಒಕ್ಕೂಟ ಪ್ರಕಟನೆಯಲ್ಲಿ ತಿಳಿಸಿದೆ.

ಪಕ್ಷಾತೀತವಾಗಿ ಖಂಡಿಸುತ್ತೇವೆ
ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರು ಬಡವರಿಗೆ ಹಕ್ಕುಪತ್ರ ನೀಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಹಕ್ಕುಪತ್ರ ನೀಡದಂತೆ ಕಂದಾಯ ಇಲಾಖಾ ಅಧಿಕಾರಿಗಳಿಗೆ‌ ಪರೋಕ್ಷವಾಗಿ ಬೆದರಿಕೆ ಹಾಕಿರುವ ಹಾಗೂ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿರುವುದು ಪಂಚಾಯತ್ ರಾಜ್ ಒಕ್ಕೂಟದ ಗಮನಕ್ಕೆ ಬಂದಿದೆ. ಕಾಂಗ್ರೆಸ್‌ ಮುಖಂಡರ ಈ ನಡೆಯನ್ನು ಕಾರ್ಕಳ ಮತ್ತು ಹೆಬ್ರಿ ತಾಲೂಕಿನ ಪಂಚಾಯತ್ ರಾಜ್ ಒಕ್ಕೂಟವು ಪಕ್ಷಾತೀತವಾಗಿ ಖಂಡಿಸುತ್ತದೆ. ನಾವು ಯಾರೂ ಕೂಡ ಬಡವರ ಹೊಟ್ಟೆಗೆ ಕಲ್ಲು ಹಾಕುವ ಕೆಲಸ ಮಾಡಬಾರದು. ಸಚಿವರ ಇಂತಹ ಜನಪರ ಕೆಲಸಕ್ಕೆ ಕೈ ಜೋಡಿಸಬೇಕೆ ಹೊರತು ಅಡ್ಡಿಪಡಿಸುವುದು ಯಾವುದೇ ಸಂಘಟನೆಗಳಿಗೆ ಶೋಭೆ ತರುವುದಿಲ್ಲ ಎಂದು ಒಕ್ಕೂಟ ತಿಳಿಸಿದೆ.

ಸುನಿಲ್ ಕುಮಾರ್ ಅವರು ಸಚಿವರಾಗಿ ಇಡೀ ರಾಜ್ಯದಲ್ಲಿಯೇ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುವ ಮೂಲಕ ಮಾದರಿಯಾಗಿದ್ದಾರೆ. ಉತ್ತಮ ರೀತಿಯಲ್ಲಿ ಕೆಲಸ ಮಾಡುವ ಮೂಲಕ ಅಸಂಖ್ಯಾತ ಬಡವರಿಗೆ ಹಕ್ಕು ಪತ್ರ ನೀಡುವ ಕಾರ್ಯ ಮಾಡಿರುತ್ತಾರೆ. ಸಚಿವರ ಕಾರ್ಯಕ್ಕೆ ಪಂಚಾಯತ್ ರಾಜ್ ಒಕ್ಕೂಟ ಸದಾ ಬೆಂಬಲ ನೀಡಲಿದೆ ಎಂದು ಒಕ್ಕೂಟದ ಸಂಚಾಲಕ, ಹಿರ್ಗಾನ ಗ್ರಾ.ಪಂ. ಅಧ್ಯಕ್ಷ ಸಂತೋಷ್ ಶೆಟ್ಟಿ, ಒಕ್ಕೂಟದ ಉಪಾಧ್ಯಕ್ಷರಾದ ಸತೀಶ್ ಪೂಜಾರಿ‌, ಅಮೃತ ಪ್ರಭು ಮುಡಾರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





























































































error: Content is protected !!
Scroll to Top