ಸಂಘಟಿತ ಹೋರಾಟದಿಂದ ಪಕ್ಷಕ್ಕೆ ಬಲ : ಮಂಜುನಾಥ ಪೂಜಾರಿ
ಹೆಬ್ರಿ : ಯುವ ಜನತೆ ಮತ್ತು ಮಹಿಳೆಯರನ್ನು ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯಗೊಳಿಸುವ ಮೂಲಕ ಪಕ್ಷವನ್ನು ಬಲಪಡಿಸಬೇಕಿದೆ, ಎಲ್ಲರೂ ಸೇರಿ ಸಂಘಟಿತ ಹೋರಾಟ ನಡೆಸುವುದರಿಂದ ಮಾತ್ರ ಕಾಂಗ್ರೆಸ್ ಬಲಗೊಳ್ಳುತ್ತದೆ, ಅದಕ್ಕಾಗಿ ಎಲ್ಲರೂ ಕೈಜೋಡಿಸಬೇಕಿದೆ, ಕಾರ್ಯಕರ್ತರು ಯಾರೂ ಭಯಪಡುವ ಅಗತ್ಯ ಇಲ್ಲ. ಕಾರ್ಯಕರ್ತರ ಜೊತೆಗೆ ನಾವು ಇದ್ದೇವೆ. ನಿಸ್ವಾರ್ಥವಾಗಿ ಕೆಲಸಮಾಡಿ ಪಕ್ಷವನ್ನು ಕಟ್ಟೋಣ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು. ಅವರು ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಚೈತನ್ಯ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ, ಕಂದಾಯ ಅದಾಲತ್, ವಿದ್ಯುತ್ ಅದಾಲತ್, ಅಹವಾಲು ಸ್ವೀಕಾರ ಸಹಿತ ಸಭೆಗಳು ನಡೆಯುತ್ತಿದೆ. ಆದರೆ ಜನರಿಗೆ ಹಕ್ಕುಪತ್ರ ನೀಡುವುದು ಸಹಿತ ಯಾವೂದೇ ಕೆಲಸಗಳು ನಡೆಯುತ್ತಿಲ್ಲ. ಜನ ಸರ್ಕಾರಿ ಕಚೇರಿಗಳಿಗೆ ಅಲೆಯುವುದು ತಪ್ಪುತ್ತಿಲ್ಲ ಎಂದು ಮಂಜುನಾಥ ಪೂಜಾರಿ ಹೇಳಿದರು. ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂದಿ ಮತ್ತು ನಾಯಕ ರಾಹುಲ್ ಗಾಂಧಿ ಅವರಿಗೆ ತನಿಖೆಯ ಹೆಸರಿನಲ್ಲಿ ಇಡಿ ನೀಡುತ್ತಿರುವ ಕಿರುಕುಳವನ್ನು ನಿಲ್ಲಿಸುವಂತೆ ಮಂಜುನಾಥ ಪೂಜಾರಿ ಒತ್ತಾಯಿಸಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಮಾತನಾಡಿ ರಾಜಕೀಯ ಎದುರಾಳಿಗಳನ್ನು ಮುಗಿಸಿ, ಪ್ರಶ್ನೆ ಮಾಡದಂತೆ ನೋಡಿಕೊಳ್ಳುವುದೇ ಬಿಜೆಪಿಯ ತಂತ್ರ. ಅದಕ್ಕಾಗಿಯೇ ತನಿಖೆಯ ಹೆಸರಿನಲ್ಲಿ ಸೋನಿಯಾ ಗಾಂದಿ ಮತ್ತು ನಾಯಕ ರಾಹುಲ್ ಗಾಂಧಿ ಅವರಿಗೆ ಇಡಿಯು ಕಿರುಕುಳ ನೀಡುತ್ತಿದೆ. ಉದ್ಯೋಗ ದೊರೆಯದೇ ಯುವಕರು ಬಿಜೆಪಿ ಮತ್ತು ಮೋದಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅದಕ್ಕಾಗಿ ಕಾಂಗ್ರೆಸ್ ಕಿರುಕುಳ ನೀಡುತ್ತಿದ್ದಾರೆ. ಅಗ್ನಿಪಥ ಹೆಸರಿನಲ್ಲಿ ಯುವಕರಿಗೆ ಮೋಸ ಮಾಡುತ್ತಿದ್ದಾರೆ, ನರೇಂದ್ರ ಮೋದಿ ಅತೀ ಸ್ವಾರ್ಥ ರಾಜಕಾರಣಿ, ಹಿರಿಯರೆಲ್ಲರನ್ನೂ ಬದಿಗೆ ಸರಿಸಿ ಪ್ರಧಾನಿಯಾದರು. ರಾಹುಲ್ ಗಾಂಧಿ ೨ ಸಲ ಪ್ರಧಾನಿ ಹುದ್ದೆ ಕೈಗೆ ಬಂದರೂ ಆರ್ಥಿಕ ತಜ್ಞ ಮನಮೋಹನ ಸಿಂಗ್ ಅವರಿಗೆ ಬಿಟ್ಟುಕೊಟ್ಟು ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸಿದರು. ಬಿಜೆಪಿ ಭಾವನೆಯ ಪಕ್ಷ ಕಾಂಗ್ರೆಸ್ ಬಡವರ ಬದುಕಿನ ಪಕ್ಷ ಎಂದರು.
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಾಘವ ದೇವಾಡಿಗ, ಮುಖಂಡ ಸೀತಾನದಿ ರಮೇಶ ಹೆಗ್ಡೆ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಂಜನಿ ಹೆಬ್ಬಾರ್, ಯುವ ಕಾಂಗ್ರೆಸ್ ಅಧ್ಯಕ್ಷ ದಿನೇಶ ಶೆಟ್ಟಿ, ವಿವಿಧ ಪ್ರಮುಖರಾದ, ಕೆರ್ವಾಶೆ ಪ್ರಕಾಶ ಪೂಜಾರಿ, ಹೆಚ್.ಬಿ.ಸುರೇಶ್, ಎಚ್.ಜನಾರ್ದನ್, ಧೀರಜ್ ಶೆಟ್ಟಿ ಸೋಮೇಶ್ವರ, ರಾಮಕೃಷ್ಣ ಶೆಟ್ಟಿ ಅಜೆಕಾರು, ರವಿ ಪೂಜಾರಿ ಮುನಿಯಾಲು ಸಹಿತ ವಿವಿಧ ಮುಖಂಡರು ಉಪಸ್ಥಿತರಿದ್ದರು.