ಮಾನವೀಯ ಕಾರ್ಯಗಳ ಮೂಲಕ ಮದುವೆ ಸಮಾರಂಭವನ್ನು ಸ್ಮರಣೀಯಗೊಳಿಸಿದ ಕಾರ್ಕಳದ ಸುಕೇಶ್‌ ಶೆಟ್ಟಿ

ಕಾರ್ಕಳ : ದುಡಿದ ಹಣದಲ್ಲಿ ಕೈಲಾದಷ್ಟು ದಾನ ಮಾಡಿದಲ್ಲಿ ಅದರಿಂದ ಒಂದಷ್ಟು ಮಂದಿಗೆ ನೆರವಾಗುವ ಜೊತೆಗೆ ಅಪರಿಮಿತ ತೃಪ್ತಿ ದೊರೆಯುವುದು. ಸಹಾಯ ಮಾಡುತ್ತ ಹೋದಲ್ಲಿ ದೇವರ ಅನಗ್ರಹ ಮತ್ತಷ್ಟು ಪ್ತಾಪ್ತಿಯಾಗುವುದು. ಮದುವೆ ಕಾರ್ಯಕ್ರಮ ಆಡಂಬರದಲ್ಲಿ ಮಾಡುವವರು ಅನೇಕರು, ಆದರೆ, ಇಲ್ಲೊರ್ವರು 10 ಲಕ್ಷ ರೂ.ವಿನಷ್ಟು ದಾನ ಮಾಡುವ ಮೂಲಕ ಮದುವೆ ಸಮಾರಂಭದ ದಿನ ನೊಂದವರ ಕಣ್ಣೀರು ಒರೆಸುವ ಕಾರ್ಯ ಮಾಡಿದ್ದಾರೆ.

ಕಾರ್ಕಳದ ತೆಳ್ಳಾರು ಕನ್ನಡಿ ಬೆಟ್ಟು ಸುಕೇಶ್ ಶೆಟ್ಟಿ ಅವರ ವಿವಾಹವು ಅನುಷಾ ಅವರೊಂದಿಗೆ ಮೇ 8ರಂದು ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು. ಕನ್ನಡಿಬೆಟ್ಟು ಶಂಕರ ಶೆಟ್ಟಿ ಹಾಗೂ ಗುಲಾಬಿ ಶೆಟ್ಟಿ ಅವರ ಪುತ್ರ ಮುಂಬೈಯಲ್ಲಿ ಉದ್ಯಮಿಯಾಗಿರುವ ಸುಕೇಶ್‌ ಅವರು ಈ ಮದುವೆ ಸಂಭ್ರಮದಲ್ಲಿ ನೊಂದವರಿಗೆ ನೆರವಾಗುವ ಮೂಲಕ ಕಳಕಳಿ ಮೆರೆದಿದ್ದಾರೆ.

ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಕರಿಂಜೆ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ, ಹಿಂದೂ ಜಾಗರಣ ವೇದಿಕೆ ಮುಖಂಡ ಜಗದೀಶ್ ಕಾರಂತ್, ಉದ್ಯಮಿ ರವೀಂದ್ರ ಶೆಟ್ಟಿ ಬಜಗೋಳಿ, ಹಿಂದೂ ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ಪ್ರಶಾಂತ್‌ ನಾಯಕ್‌ ಮೊದಲಾದವರು ಉಪಸ್ಥಿತಿಯಲ್ಲಿ ಕರಿಯಕಲ್ಲು ಮೋಹಿನಿ ಮೂಲ್ಯ ಅವರ ಜೀವನಾಧಾರಕ್ಕಾಗಿ ಗೋ ದಾನ, ಹಿಂದೂ ಸಮಾಜದ ಸುರಕ್ಷೆಗಾಗಿ ನಿಧಿ ಸಮರ್ಪಣೆ, ಪ್ರತಿಭಾವಂತ ವಿದ್ಯಾರ್ಥಿನಿ ಪಲಾಯಿ ಬಾಕ್ಯಾರಿನ ನಿರೀಕ್ಷಾ ಪದವಿ ಶಿಕ್ಷಣದ ಸಂಪೂರ್ಣ ವೆಚ್ಚ ಭರಿಸುವ ನಿಟ್ಟಿನಲ್ಲಿ ನೆರವು, ತಂದೆಯನ್ನು ಕಳೆದುಕೊಂಡಿರುವ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಕಾರ ನೀಡಿದರು.

ವೈದ್ಯಕೀಯ ನೆರವು
ಕಿವುಡು ಸಮಸ್ಯೆಯಿರುವ ತೆಳ್ಳಾರು ದುರ್ಗದ 12 ವರುಷದ ಬಾಲೆಗೆ ಉಪಕರಣ ಖರೀದಿಗಾಗಿ 40 ಸಾವಿರ ರೂ., ಬಂಡೆಯಿಂದ ಬಿದ್ದು ತನ್ನ ಎರಡೂ ಕಾಲಿನ ಸ್ವಾಧೀನತೆ ಕಳೆದುಕೊಂಡಿರುವ ಕಾಂತಾವರದ ಯುವತಿಗೆ ನಡೆದಾಡುವಂತಾಗಲು ಉಪಕರಣ ವೆಚ್ಚಕ್ಕಾಗಿ ಧನ ಸಹಾಯ, ಜಠರದ ಕಾಯಿಲೆಯಿಂದ ಬಳಲುತ್ತಿರುವ ಹೊಸ್ಮಾರಿನ ಯುವಕ ಚಿಕಿತ್ಸೆಗಾಗಿ ಧನ ಸಹಾಯ, ಮೆದುಳಿಗೆ ಸಂಬಂಧಿಸಿದ ರೋಗದಿಂದ ಬಳಲುತ್ತಿರುವ ಅಜೆಕಾರಿನ ಯುವಕನ ಚಿಕಿತ್ಸೆಗಾಗಿ ನೆರವು, ಹೃದಯ ಶಸ್ತ್ರಚಿಕಿತ್ಸೆಗಾಗಿ ಉಡುಪಿ 6 ವರ್ಷದ ಬಾಲಗೆ ನೆರವು, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಬೆಳ್ಮಣ್ ಸೂಡದ ಮಹಿಳೆಗೆ ಆರ್ಥಿಕ ನೆರವು ನೀಡಲಾಯಿತು.

ಸೂರು ಕಲ್ಪಿಸಲು ಸಹಾಯ
ಮಕ್ಕಳಿಲ್ಲದ ವೃದ್ಧ ದಂಪತಿ ವಾಸವಿರುವ ಮನೆ ಬೀಳುವ ಸ್ಥಿತಿಯಲ್ಲಿರುವ ಅಣ್ಣಿ ಮೇರ ಅವರ ಮನೆ ರಿಪೇರಿಗೆ ಆರ್ಥಿಕ ಸಹಕಾರ, ಅವಿವಾಹಿತರಾಗಿರುವ ತೆಳ್ಳಾರು ನಿವಾಸಿಯೋರ್ವರಿಗೆ ಮನೆ ನಿರ್ಮಾಣಕ್ಕೆ ನೆರವು, ಉಡುಪಿ ಕಡೆಕಾರು, ಹೆಬ್ರಿ ನಾಡ್ಪಾಲು, ಚಾರ ಗ್ರಾಮದ ಕಾರಾಡಿ ಹಾಗೂ ರಾಘವೇಂದ್ರ ಮಠದ ಬಳಿ ವಾಸವಾಗಿರುವ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಕ್ಕೆ ನೆರವು ನೀಡಲಾಯಿತು.

ಬರಹ : ಅರುಣ್‌ ಮಾಂಜ, ತೆಳ್ಳಾರು





























































































error: Content is protected !!
Scroll to Top