ನವದೆಹಲಿ: ‘ದಿ ಗ್ರೇಟ್ಖಲಿ’ ಖ್ಯಾತಿಯ ‘ಡಬ್ಲ್ಯುಡಬ್ಲ್ಯುಇ’ ಮಾಜಿ ಕುಸ್ತಿಪಟು ದಲೀಪ್ ಸಿಂಗ್ ರಾಣಾ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಫೆ.10 ರಂದು ದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಪಕ್ಷದ ಮುಖಂಡರ ಸಮ್ಮುಖದಲ್ಲಿ ಖಲಿ ಬಿಜೆಪಿಗೆ ಸೇರ್ಪಡೆಗೊಂಡರು. ರಾಷ್ಟ್ರ ನಾಯಕರು ಖಲಿ ಅವರನ್ನು ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು.
ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಖಲಿ ಅವರು, ಬಿಜೆಪಿ ಸೇರಿದ್ದಕ್ಕೆ ನನಗೆ ಖುಷಿಯಾಗಿದೆ. ಪ್ರಧಾನಿ ಮೋದಿಯವರು ದೇಶಕ್ಕಾಗಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಆ ಕೆಲಸಗಳೇ ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಲಿದೆ. ರಾಷ್ಟ್ರದ ಅಭಿವೃದ್ಧಿಗಾಗಿ ಅವರ ಆಡಳಿತದ ಭಾಗವಾಗವಾಗಬೇಕೆಂದು ಆಸೆ ಇಟ್ಟುಕೊಂಡಿದ್ದೆ. ಹಾಗಾಗಿ ಬಿಜೆಪಿಯ ರಾಷ್ಟ್ರೀಯ ನೀತಿಯಿಂದ ಪ್ರಭಾವಿತನಾಗಿ ಪಕ್ಷ ಸೇರಿದ್ದೇನೆ ಎಂದು ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಮಾತನಾಡಿ, ‘ಬಿಜೆಪಿ ವಿಶ್ವದ ಅತಿ ದೊಡ್ಡ ಪಕ್ಷವಾಗಿದ್ದು, ವಿಶ್ವದ ಹಲವು ಖ್ಯಾತ ಕುಸ್ತಿಪಟುಗಳನ್ನು ಸೋಲಿಸಿದ ಮಹಾನ್ ಖಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ರೈತನ ಮಗ, ಪಂಜಾಬ್ ಪೊಲೀಸ್ ಇಲಾಖೆಯಲ್ಲಿಯೂ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಖಲಿ. ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಅವರು ಬಿಜೆಪಿಗೆ ಸೇರ್ಪಡೆಯಾಗಿರುವುದು ಸಂತಸ ತಂದಿದೆ ಎಂದು ತಿಳಿಸಿದ್ದಾರೆ.
ಪಂಜಾಬ್ ವಿಧಾನಸಭೆ ಚುನಾವಣೆ ಮತದಾನಕ್ಕೆ ಇನ್ನು ಕೆಲವು ದಿನಗಳು ಬಾಕಿ ಇರುವಾಗಲೇ ಖಲಿ ಅವರನ್ನು ಬಿಜೆಪಿಯು ಪಕ್ಷಕ್ಕೆ ಸೇರಿಸಿಕೊಂಡಿದೆ. ಫೆಬ್ರವರಿ 20 ರಂದು ಪಂಜಾಬ್ನಲ್ಲಿ ಒಂದೇ ಹಂತದ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.
‘ದಿ ಗ್ರೇಟ್ ಖಲಿ’ ದಲೀಪ್ ಸಿಂಗ್ ರಾಣಾ ಬಿಜೆಪಿಗೆ ಸೇರ್ಪಡೆ
Recent Comments
ಕಗ್ಗದ ಸಂದೇಶ
on