Wednesday, January 26, 2022
spot_img
Homeಸಂಪಾದಕೀಯಈ ಕೊರೋನಾಕ್ಕಿಂತ ಲಾಕ್ ಡೌನ್ ಸಹಿಸುವುದು ಕಷ್ಟಕರ !

ಈ ಕೊರೋನಾಕ್ಕಿಂತ ಲಾಕ್ ಡೌನ್ ಸಹಿಸುವುದು ಕಷ್ಟಕರ !

ಸಂಪಾದಕೀಯ

ಕೊರೋನ ಮೂರನೇ ಅಲೆ ಈಗಾಗಲೇ ವ್ಯಾಪಕವಾಗಿ ಹರಡಿ ಎಲ್ಲರಿಗೂ ಆತಂಕ ಉಂಟು ಮಾಡಿದೆ. ಅದು ಹರಡುವ ವೇಗವು ಹಿಂದಿನ ಅಲೆಗಿಂತ ಅಧಿಕವಾಗಿದೆ. ಅದರ ಜೊತೆಗೆ ಅದರ ರೂಪಾಂತರಿ ಒಮಿಕ್ರಾನ್ ಕಾಟ ಬೇರೆ ! ಇದು ಸರಕಾರದ ತಲೆ ಕೆಡಿಸಿದೆ. ಅದಕ್ಕೆ ಪೂರಕವಾಗಿ ತಜ್ಞರ ಅಭಿಪ್ರಾಯ ಪಡೆದು ಸರಕಾರ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಿದೆ. ಇದು ಮುಂದಿನ ಒಂದೆರಡು ತಿಂಗಳು ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಮೊದಲೇ ದೇಶದ ಆರ್ಥಿಕತೆ ಹಳ್ಳ ಹಿಡಿದು ಇನ್ನೇನು ಚೇತರಿಕೆ ಕಂಡಿತು ಅನ್ನುವಾಗ ಈ ಮಿನಿ ಲಾಕ್ ಡೌನ್ ಜನರ ಬದುಕಿಗೆ ಮರ್ಮಾಘಾತ ನೀಡಿರುವುದಂತು ಸತ್ಯ. ಸಣ್ಣ ವ್ಯಾಪಾರಿಗಳು, ಉದ್ದಿಮೆಗಳು, ದಿನಗೂಲಿ ನೌಕರರು, ಕೂಲಿ ಕಾರ್ಮಿಕರು, ಕಲಾವಿದರು, ವಿವಿಧ ಸೇವಾ ಕ್ಷೇತ್ರದಲ್ಲಿ ದುಡಿಯುವವರು ಇಂದು ಬೀದಿಗೆ ಬರುವ ಆತಂಕದಲ್ಲಿದ್ದಾರೆ. ಶಾಲೆಗಳ ಭವಿಷ್ಯವು ಅನಿಶ್ಚಿತತೆಗೆ ತುತ್ತಾಗಿದೆ. ಎಲ್ಲರೂ ಈ ವಾರಾಂತ್ಯದ ಕರ್ಫ್ಯೂ ಬೇಕಿತ್ತಾ ಎಂದು ಕೇಳಲು ಆರಂಭ ಮಾಡಿದ್ದಾರೆ.

ನೂರಾರು ಸಮಸ್ಯೆಗಳ ನಡುವೆ ಒಂದು ಸಮಾಧಾನ ಅಂದರೆ ಈ ಅಲೆಯಿಂದ ಸಾವು ನೋವುಗಳ ಸಂಖ್ಯೆ ಕಡಿಮೆ. ಆಸ್ಪತ್ರೆಗೆ ಅಡ್ಮಿಟ್ ಆಗದೇ ಒಂದಿಷ್ಟು ಮನೆಯಲ್ಲಿ ಕ್ವಾರಂಟೈನ್ ಆಗಿ ಜಾಗೃತೆಯಿಂದಿದ್ದರೂ ಕೋರೋನ ನಿಯಂತ್ರಣಕ್ಕೆ ಬರುವುದು ಎಂದು ಜನತೆ ದೃಢವಾಗಿ ನಂಬಿದ್ದಾರೆ. ಅಷ್ಟರ ಮಟ್ಟಿಗೆ ಕೋರೋನಾ ಭಯ ಕಡಿಮೆಯಾಗಿದೆ. ಅದನ್ನು ತಜ್ಞರು ಕೂಡ ಒಪ್ಪುತ್ತಾರೆ. ಆದರೆ, ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸ್ ಮಾಡುವುದನ್ನು ಅವರು ಪದೇ ಪದೇ ಒತ್ತಿ ಹೇಳುತ್ತ ಬಂದಿದ್ದಾರೆ. ಜನತೆ ಇದನ್ನು ಪಾಲಿಸಲೇ ಬೇಕು.

ರಾಜಕೀಯ-ಜಾತ್ರೆ
ಆದರೆ ರಾಜಕೀಯ ಪಕ್ಷಗಳು ನಡೆಸುವ ರ್ಯಾಲಿಗಳು, ಜಾತ್ರೆಗಳು, ಉತ್ಸವಗಳು, ಮದುವೆ, ಗೃಹ ಪ್ರವೇಶ ಮೊದಲಾದ ಕಾರ್ಯಕ್ರಮಗಳು ಜನ ಜಂಗುಳಿಯನ್ನು ಉಂಟು ಮಾಡುತ್ತಿರುವ ಘಟನೆಗಳು ದಿನವೂ ವರದಿ ಆಗುತ್ತವೆ. ಹಿಂದಿನ ಘಟನೆಗಳಿಂದ ಕೆಲವರು, ರಾಜಕೀಯ ಪಕ್ಷಗಳು ಬುದ್ದಿ ಕಲಿಯುವುದೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮೂರನೇ ಅಲೆ ಹಿಂದಿನ ಅಲೆಗಳ ಹಾಗೆ ವಿನಾಶಗಳನ್ನು ಉಂಟು ಮಾಡದಿರಲಿ ಎನ್ನುವ ಕಾಳಜಿಯಿಂದ ಸರಕಾರ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಿದೆ. ಆಶಯ ಒಳ್ಳೇದೇ ಇದೆ. ಆದರೆ, ಪಾಸಿಟಿವ್ ಕೇಸಗಳು ಜಾಸ್ತಿ ಇರುವ ಪ್ರದೇಶಗಳಲ್ಲಿ ಮತ್ತು ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿ ಮಾಡಿದ್ದರೆ ಸಾಕಿತ್ತು. ಜಿಲ್ಲಾಧಿಕಾರಿ ಮತ್ತು ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಗಳ ಬಗ್ಗೆ ತೀರ್ಮಾನ ಕೈಗೊಳ್ಳುವ ಅವಕಾಶ ಕೊಟ್ಟಿದ್ದರೆ ಕರ್ಫ್ಯೂ ಸಹನೀಯ ಆಗುತ್ತಿತ್ತು. ಆದರೆ ಸರಕಾರ ಅದನ್ನು ಮಾಡದೆ ಇಡೀ ರಾಜ್ಯಕ್ಕೆ ವಿಸ್ತಾರ ಮಾಡಿದ್ದನ್ನು ಜನರು ಒಪ್ಪುತ್ತಿಲ್ಲ. ಅದು ವೈಜ್ಞಾನಿಕ ಅಲ್ಲ ಅನ್ನುವುದು ಬಹುಜನರ ಅಭಿಪ್ರಾಯ.

ಈ ಕರ್ಫ್ಯೂ ಕೂಡ ಕೆಲವರು ಉಲ್ಲಂಘನೆ ಮಾಡುವುದು, ಕೆಲವರು ಪಾಲಿಸುವುದು, ಇನ್ನೂ ಕೆಲವರು ದಂಡ ಇತ್ಯಾದಿಗೆ ಒಳಪಡುವುದು.. ಹೀಗೆ ತಾರತಮ್ಯ ನಡೆದಾಗ ಜನರ ಸಿಟ್ಟು ನೆತ್ತಿಗೇರುವುದು. ಕಾಂಗ್ರೆಸ್ ಪಕ್ಷ ನಡೆಸಿದ ಪಾದಯಾತ್ರೆ, ಬಿಜೆಪಿ ಶಾಸಕ ರೇಣುಕಾಚಾರ್ಯ ನೇತೃತ್ವದಲ್ಲಿ ನಡೆದ ಜಾತ್ರೆ ಪ್ರಜ್ಞಾವಂತ ನಾಗರಿಕರ ಆಕ್ರೋಶಕ್ಕೆ ಗುರಿಯಾಗಿತ್ತು.

ಕಲೆಯನ್ನೇ ನಂಬಿಕೊಂಡು ಬದುಕುವ ನಾಟಕ, ಯಕ್ಷಗಾನ, ರಸಮಂಜರಿ ಇತ್ಯಾದಿ ಮಂದಿಗೆ ವಾರಾಂತ್ಯದ ಕರ್ಫ್ಯೂ ನಿಜಕ್ಕೂ ಬಿಸಿ ತುಪ್ಪವಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಮನರಂಜನಾ ಕಾರ್ಯಕ್ರಮಗಳು ಹೆಚ್ಚಾಗಿ ವಾರಾಂತ್ಯದಲ್ಲಿ ನಡೆಯುವ ಕಾರಣ ಈ ಕರ್ಫ್ಯೂ ಅವರನ್ನು ಕಾಡಲು ಆರಂಭ ಮಾಡಿದೆ. ಸರಕಾರ ತಕ್ಷಣ ಅವರ ನೆರವಿಗೆ ಧಾವಿಸುವ ಅಗತ್ಯವಿದೆ.

ಖಾಸಗಿ ಶಿಕ್ಷಕರ ಪಾಡು
ಅದೇ ರೀತಿ ಖಾಸಗಿ ಶಾಲೆಗಳಲ್ಲಿ ಸೇವೆ ಮಾಡುತ್ತಿರುವ ಶಿಕ್ಷಕರು ಕಳೆದೆರಡು ಅಲೆಗಳಲ್ಲಿ ತುಂಬಾ ತೊಂದರೆ ಪಟ್ಟಿದ್ದಾರೆ. ಆಡಳಿತ ಮಂಡಳಿಯವರು ಹಣವಿಲ್ಲದೇ ಕಷ್ಟದಲ್ಲಿದ್ದಾರೆ. ಈ ಬಾರಿ ಶಾಲೆ ಮುಚ್ಚಿದರೆ ಮುಂದೆ ಹೇಗೆ ? ಎಂಬ ಆತಂಕ ಅವರಲ್ಲಿ ಮನೆಮಾಡಿದೆ.

ಎಲ್ಲಕ್ಕಿಂತ ಹೆಚ್ಚಾಗಿ ದಿನಗೂಲಿ ನೌಕರರು, ಕಾರ್ಖಾನೆಗಳಲ್ಲಿ ದುಡಿಯುವವರು, ಸಣ್ಣ ಮತ್ತು ಮಧ್ಯಮ ವರ್ಗದ ವ್ಯಾಪಾರಿಗಳು, ದುಡಿಮೆಯನ್ನು ನಂಬಿದವರು ತುಂಬಾ ತೊಂದರೆ ಪಡುತ್ತ ಇದ್ದಾರೆ. ದುಡಿಯಲು ಮನಸ್ಸು ಇದ್ದವರು ಕೂಡ ಕೆಲಸ ಇಲ್ಲದೆ ಸಂತ್ರಸ್ತ ಆಗಿದ್ದಾರೆ. ಬ್ಯಾಂಕ್ ಸಾಲ ಮಾಡಿ ಬಿಸಿನೆಸ್ ನಡೆಸುವವರು ತೊಂದರೆ ಅನುಭವಿಸುತ್ತಿದ್ದಾರೆ. ರಿಕ್ಷಾ, ಟ್ಯಾಕ್ಸಿ ಚಾಲಕರು ಬಾಡಿಗೆ ಇಲ್ಲದೆ ನೊಂದಿದ್ದಾರೆ. ಈಗ ಸರಕಾರ ಅಂಥವರ ನೆರವಿಗೆ ಧಾವಿಸುವ ಅಗತ್ಯ ಇದೆ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಬೇಕಾಗಿದೆ. ಅನಗತ್ಯ ಕಾಮಗಾರಿಗಳಿಗೆ ಬ್ರೇಕ್ ಹಾಕಬೇಕಾಗಿದೆ. ಸರಕಾರಕ್ಕೆ ಕೂಡ ಇದು ಅಗ್ನಿ ಪರೀಕ್ಷೆಯ ಕಾಲ.

ಹಿಂದೆ ಅಲೆಗಳು ಸ್ಫೋಟ ಆದಾಗ ಮೈ ಮರೆತ ಹಾಗೆ ಈ ಬಾರಿ ಸರಕಾರ ಮಾಡುವ ಹಾಗಿಲ್ಲ. ಜನರೂ ಈ ಅಲೆಯನ್ನು ಹಗುರವಾಗಿ ಪರಿಗಣಿಸುವುದು ತಪ್ಪಾಗುವುದು. ಮುಖ್ಯವಾಗಿ ಸರಕಾರವು ವಾರಾಂತ್ಯದ ಕರ್ಫ್ಯೂ, ಲಾಕ್ ಡೌನ್ ಮೊದಲಾದ ಕ್ರಮಗಳಿಗೆ ಬದಲಾಗಿ ಇತರ ಪರ್ಯಾಯಗಳನ್ನು ಹುಡುಕುವ ಅಗತ್ಯ, ಅನಿವಾರ್ಯವಿದೆ.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!