Thursday, December 2, 2021
spot_img
Homeಅಂಕಣಕಲಿತನದ ಕನಕ ನಾಯಕ ಕವಿತನದ ಸಂತ

ಕಲಿತನದ ಕನಕ ನಾಯಕ ಕವಿತನದ ಸಂತ

ಕನಕದಾಸರು ಕನ್ನಡ ನಾಡಿನ ದಾಸಪರಂಪರೆಯ ಸಂತ ಶ್ರೇಷ್ಠರು. ಹರಿದಾಸ ಪರಂಪರೆಯಲ್ಲಿ ಪುರಂದರ ದಾಸರ ಅನಂತರ ಹೆಸರಿಸಬಹುದಾದ ಇನ್ನೊಂದು ಪ್ರಮುಖ ಹೆಸರೇ ಕನಕದಾಸರದು. ಲೌಕಾಭ್ಯುದಯದ ಶಿಖರವನ್ನೇತ್ತಿರುವಾಗಲೇ ಅವರ ಕಾವ್ಯಶಕ್ತಿಯೂ ಗಿಡದ ಮೊಗ್ಗಿನಂತೆ ಸ್ವಾತಿ ಮುತ್ತಿನಂತೆ ಹಾಡುಗಬ್ಬವಾಗಿ ಹೊರಹೊಮ್ಮಿ ಕಾವ್ಯಧಾರೆ ಅವಿಚ್ಛಿನ್ನವಾಗಿ ಉಕ್ಕಿಹರಿಯಿತು. ಪಂಪನಂತೆಯೇ ಕವಿತನ ಮತ್ತು ಕಲಿತನ ಗುಣವನ್ನುಹೊಂದಿದ್ದರು. ಕನಕದಾಸರು ಕವಿ ವಿಶಿಷ್ಟವಾದ ಸಹಜ ಪ್ರತಿಭೆಯಿಂದ ಉದಾರತೆಯಿಂದ ವಸ್ತು ವೈವಿಧ್ಯ ಹಾಗೂ ಛಂದೋ ವೈವಿಧ್ಯತೆಯಿಂದ ಸಮಕಾಲೀನ ಪ್ರಜ್ಞೆ ಯಿಂದ ಹರಿದಾಸ ಸಾಹಿತ್ಯ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ.

ಕನಕದಾಸರು ಹಳ್ಳಿಯ ಕುರುಬ ಕುಟುಂಬದಲ್ಲಿ ಜನಿಸಿದರೂ ಎಳವೆಯಲ್ಲಿಯೇ ಕಲೆ ಮತ್ತು ಸಾಹಿತ್ಯದತ್ತ ಮನಸ್ಸು ಆಕರ್ಷಿಸಿತ್ತು. ಜನಪದ ಮತ್ತು ಶಿಷ್ಟ ಸಾಹಿತ್ಯದ ಎರಡರ ರಸವನ್ನು ಹೀರಿ ಬೆಳೆದರು. ಜನಪದ ಸೊಗಡಿನ ಹಾಡುಗಳ ಜನಪದ ಕವಿಗಳಾದರು, ಗಾಯಕರಾದರು. ಗ್ರಾಮಕಲೆಯ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದರು. ಇದು ಮರಗಿಡಗಳು ತಾಯಿ ಬೇರನ್ನೂ ಹೇಗೆ ಮರೆಯುವುದಿಲ್ಲವೋ ಹಾಗೆಯೇ ಕನಕದಾಸರು ತನ್ನ ತಾಯಿ ನೆಲದ ಮೂಲ ಸಂಸ್ಕೃತಿಯನ್ನು ಮರೆಯದೇ ಮೆರೆಯುವಂತೆ ಮಾಡಿದರು. ಅದಕ್ಕೆ ವಿದ್ವಾಂಸರು ಹೀಗೇ  ಅಭಿಪ್ರಾಯ ಪಡುತ್ತಾರೆ. ಮನುಷ್ಯ ಜೀವನದ ಮೇಲೆ ಅಗಾಧ ಪ್ರಭಾವ ಮತ್ತು ಪರಿಣಾಮ ಬೀರುವುದು ಅವನ ಬಾಲ್ಯದ ದಿನಗಳು. ಆ ದಿನಗಳಲ್ಲಿ ಅವನು ಕಂಡುಂಡ ಅವನ ಪರಿಸರ ಜನಜೀವನ ಗಿಡಮರ, ಹಳ್ಳಕೊಳ್ಳ, ಬೆಟ್ಟ ಗುಡ್ಡ, ಪ್ರಾಣಿಪಕ್ಷಿ, ಊಟ ತಿಂಡಿ ಒಡವೆ ವಸ್ತುಗಳು ಕೊನೆಯವರೆಗೆ ಅವನ ಮನಪಟಲದಲ್ಲಿ ಅಚ್ಚೊತ್ತಿ ಉಳಿಯುತ್ತವೆ. ಅಂತವನು ಮುಂದೆ ಸಾಹಿತಿಯಾಗಿಯೋ, ಕಲಾವಿದನಾಗಿಯೋ, ದಾರ್ಶನಿಕನಾಗಿಯೋ, ಸಂತನಾಗಿಯೋ ಅವುಗಳನ್ನೆಲ್ಲ ತನ್ನ ಕೃತಿಗಳಲ್ಲಿ ವಿನಿಮಯ ಮಾಡಿಕೊಳ್ಳುತ್ತಾನೆ. ಬಾಲ್ಯದ ನೆನಪುಗಳಿಂದ ಯಾವ ವ್ಯಕ್ತಿಯೂ ಅಷ್ಟು ಸುಲಭವಾಗಿ ಮುಕ್ತನಾಗಿರುವುದಿಲ್ಲ.

ಕನಕದಾಸರ ಬಾಳು ವಿಕಾಸಗೊಂಡಿರುವುದು ಮೂರು ಮಜಲುಗಳಲ್ಲಿ ಅವರ ಜನ್ಮಸ್ಥಳ ಬಾಡ, ವಿಹಾರ ಸ್ಥಳ ವಿಜಯ ನಗರ, ವಾಸಸ್ಥಳ ಕಾಗಿನೆಲೆ. ಇವೆಲ್ಲವೂ  ಕನಕದಾಸರ ಸಮಗ್ರ  ಸಾಹಿತ್ಯ ಸಂರಚನೆಯಲ್ಲಿ ಸಾಂದರ್ಭಿಕವಾಗಿ ಅಲ್ಲಲ್ಲಿ ಮೂಡಿ ಬಂದಿದೆ. ಹಾಗಾಗಿ  ಕನಕ ಸಾಹಿತ್ಯವೂ  ಬೆಲೆಬಾಳುವ ಕನಕದ ಮೌಲ್ಯದಂತೆ ವಿಶೇಷವಾದ ಲಾಲಿತ್ಯ ಗುಣವನ್ನು ಹೊಂದಿ ಇಂದು ಜನಪ್ರಿಯವಾಗಿದೆ. ಕನಕದಾಸರು ಸಾಕಷ್ಟು ಕೀರ್ತನೆಗಳನ್ನೂ ಒಂದಿಷ್ಟು ಕಾವ್ಯ ಗಳನ್ನೂ ಹಾಗೆಯೇ ಜನಪದ ಛಂದೋಬಂಧ ಭರಿತವಾಗಿ ಅರಿತ ಸಂಗತಿಗಳನ್ನು ಅನುಭವಕ್ಕೆ ತಂದು ಅನುಭಾವಿಗಳಾಗಿ ನಮಗೆ ತಿಳಿಸಿದ್ದಾರೆ.

ಕನಕದಾಸರು ಮುಖ್ಯವಾಗಿ ನಳಚರಿತ್ರೆ , ರಾಮಧಾನ್ಯ ಚರಿತೆ, ಮೋಹನ ತರಂಗಿಣಿ ಹಾಗೂ ಹರಿಭಕ್ತಿಸಾರ ಎನ್ನುವ ಮೌಲ್ಯಯುತ ಕೃತಿಗಳನ್ನು ರಚಿಸಿದ್ದಾರೆ. ಈ ಕೃತಿಗಳ ವಸ್ತು ವಿಷಯಗಳು ಭಿನ್ನ ಭಿನ್ನ ಸಂಗತಿಗಳನ್ನು ಒಳಗೊಂಡವುಗಳಾಗಿವೆ. ತಾವು ಕಂಡ ವಿಜಯನಗರ ವೈಭವನ್ನೂ, ತಾವು ಮೆಚ್ಚಿದ ಕೃಷ್ಣ ದೇವರಾಯನನ್ನು ಮೋಹನ ತರಂಗಿಣಿ ಕಾವ್ಯ ರಚಿಸಿ ಹಾಡಿ ಚಿರಂತನಗೊಳಿಸಿದರು. ಇದು ರತಿ ಪ್ರದ್ಯುಮ್ನರ ಕಥೆಯಾದರೂ ಕೃಷ್ಣ ಕಥೆ. ಪೌರಾಣಿಕ   ಕಥಾವಸ್ತುವಿನಲ್ಲಿ ಸಮಕಾಲೀನತೆಯನ್ನು ಮೈಗೂಡಿಸಲು ಹೊರಟವರು. ನಳಚರಿತ್ರೆ ಪೌರಾಣಿಕ ಕೃತಿ, ಶೃಂಗಾರ ಮತ್ತು ಸೌಂದರ್ಯಗಳೇ ಮೂಲ ದ್ರವ್ಯವಾಗಿರುವ ಕೃತಿ. ತ್ರಿಲೋಕದಲ್ಲಿ ಖ್ಯಾತವೆತ್ತ ನಳಮಹಾರಾಜನೂ ಹೇಗೆ ಕಾಲನ ಕೈಯಲ್ಲಿ ವಶನಾಗಿ ಮತ್ತೆ ಶನಿಪ್ರಭಾವಕ್ಕೆ.ಒಳಗಾದನು ಎನ್ನುವುದನ್ನು ಬಹಳ ಸೊಗಸಾಗಿ ತಿಳಿಸಿದ್ದಾರೆ. ಇದು ಜನಸಾಮಾನ್ಯರ ನೆಲೆಯಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿ ಯ ಬದುಕಿನ ಏರಿಳಿತಗಳಿಗೆ ಕಷ್ಟ ಸುಖಗಳಿಗೆ ನಳನ ಕಥೆ ಒಂದು ಜೀವಂತ  ಸತ್ಯವನ್ನು ಪ್ರತಿಪಾದಿಸುತ್ತದೆ. ರಾಮಧಾನ್ಯ ಚರಿತೆ, ಇದು ರಾಗಿ ಮತ್ತು ಭತ್ತಗಳ ಮಧ್ಯೆ ನಡೆದ ವಾಗ್ವಾದದ ರೂಪದಲ್ಲಿದೆ. ಇದು ವರ್ಗ ಜಾತಿಗಳ ಹೋರಾಟದ ಕತೆಯನ್ನು ಹೊಂದಿದೆ. ಈ ಕೃತಿಯು ೧೫೬ ಚಿಕ್ಕ ಪದ್ಯಗಳನ್ನು ಒಳಗೊಂಡಿದೆ. ಭಾಮಿನೀ ಷಟ್ಪದಿ ಯಲ್ಲಿ ರಚಿತವಾಗಿದೆ. ಹರಿಭಕ್ತಿಸಾರ ಕೃತಿ  ಸಂಪೂರ್ಣವಾಗಿ ಕವಿ ತನ್ನ ಅಂತರಂಗವನ್ನು ವರಪುರದ ಚೆನ್ನಿಗರಾಯನಿಗೆ ತೆರೆದು ತನ್ನನ್ನು ಉದ್ಧರಿಸುವಂತೆ ಪ್ರಾರ್ಥಿಸುವ ಕೃತಿಯಾಗಿದೆ. ಭಾಮಿನೀ ಷಟ್ಪದಿಯಲ್ಲಿದೆ. ಇದೊಂದು ಸುಂದರ ಶತಕಗ್ರಂಥವೂ ಆಗಿದೆ.

ವಿಜಯನಗರದ ಸೇನೆಯಲ್ಲಿ ಕನಕ ನಾಯಕನಾಗಿ ಕಲಿತನದಿಂದ ಹೋರಾಡಿದವರು ಕೃಷ್ಣದೇವರಾಯನ ಸೇನೆಯಲ್ಲಿ ಹತ್ತು ಲಕ್ಷ ಪದಾತಿಗಳಿಂದಲೂ ಐದು ಸಾವಿರ ಗಜಗಳಿಂದಲೂ ಕೂಡಿತ್ತು ಎಂದು ಪ್ರವಾಸಿಗ ನ್ಯೂನಿಜ್ ತನ್ನ ಕೃತಿಯಲ್ಲಿ ಹೇಳಿದ್ದಾನೆ. ಈ ವಿಚಾರಗಳ ಹಿನ್ನೆಲೆಯಲ್ಲಿ ಕಲಿಯಾಗಿಯೂ  ಕನಕನಾಯಕನಾಗಿದ್ದರು ಎನ್ನುವಲ್ಲಿ ಯಾವುದೇ ಸಂದೇಹವಿಲ್ಲ. ಒಂದು ಸಂದರ್ಭದಲ್ಲಿ ಕಲಿ  ಕನಕ ನಾಯಕನ ಸೇನೆ ಬಿಜಾಪುರದ ಸುಲ್ತಾನರ ಸೇನೆಯನ್ನು ಬಾಡ ಹತ್ತಿರದಲ್ಲಿ ಎದುರಿಸಿದ  ಆಧಾರವಿತ್ತಂತೆ. ಕೃಷ್ಣ ದೇವರಾಯನ ನಂತರ ವಿಜಯ ನಗರ ಸಾಮ್ರಾಜ್ಯದಲ್ಲಿ ಯಾದವೀ ಕಲಹಗಳು ತಾಂಡವಾಡ ತೊಡಗಿದವು. ಬಹಮನಿ ಸುಲ್ತಾನರ ಆಕ್ರಮಣವೂ ಆರಂಭವಾಯಿತು. ಯುದ್ಧಗಳಲ್ಲೆದರಲ್ಲೂ ಸೋಲಾಯಿತು. ಹಾಗೆಯೇ ವಿಜಯ ನಗರದ ಅಭ್ಯುದಯದ ಪತನ ಕಂಡ ಕನಕನಾಯಕರಿಗೆ ಹರಿಸಿದ ರಕ್ತಪಾತ ಆದ ಸಾವು ನೋವುಗಳನ್ನು ನೋಡಿ  ವೈರಾಗ್ಯವುಂಟಾಯಿತು. ಮನಸು ರೋಸಿ ಹೋಯಿತು ಮತ್ತೆ ಲೌಕಿಕವನ್ನು ತೊರೆದು ಕಾಗಿನೆಲೆಯಾದಿ ಕೇಶವನ ಸ್ಮರಣೆಯಲ್ಲಿ ತೊಡಗಿದರು. ಗಃರು ವ್ಯಾಸರಾಯರಿಂದ ದೀಕ್ಷೆ ಪಡೆದುಕೊಂಡರು. ಕೀರ್ತನೆಗಳನ್ನು  ರಚಿಸಿದರು. ಮತ್ತೆ ಕನಕದಾಸರಾಗಿಯೇ ಗುರುತಿಸಿಕೊಂಡರು. ಹಾಗೆಯೇ ಮತ್ತೆ ಬೇಲೂರು ಮತ್ತು ಕಾಗಿನೆಲೆಯಲ್ಲಿ ಹೆಚ್ಚಿನ ಕಾಲ ಕಳೆದರು ಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಬಾಡದಿಂದ ಕಾಗಿನೆಲೆಗೆ ಹೋದರು ತಮ್ಮ ಆರಾಧ್ಯ ದೈವ ಆದಿಕೇಶವನ ಒಂದು ಚಿಕ್ಕ ಗುಡಿ ಕಟ್ಟಿಸಿಕೊಂಡರು ಆದಿಕೇಶವನ ಕುರಿತು ಹಾಡಿದರು. ಹಾಡು ಹಾಡುತ್ತಲೇ ಇಹವನ್ನು ತೊರೆದರು. ಹೀಗೇ ಹಾವೇರಿ ಜಿಲ್ಲೆಯ ಬಂಕಾಪುರದ ಹತ್ತಿರದಲ್ಲಿರುವ ಬಾಡ ಗ್ರಾಮದಲ್ಲಿ ಒಂದು ಕುರುಬ ಮನೆತನದಲ್ಲಿ ಹುಟ್ಟಿ ಕಲಿಯಾಗಿ ಕವಿಯಾಗಿ ಸಂತರಾಗಿ ಮತ್ತೆ ಕಾಗಿನೆಲೆಯ ಆದಿಕೇಶವನಲ್ಲಿ ಐಕ್ಯಗೊಂಡರು.

ಸಾಮಾನ್ಯ ಕುಲವೊಂದರಲ್ಲಿ ಹುಟ್ಟಿದ ಕನಕದಾಸರು ಸ್ವಸಾಮರ್ಥ್ಯ ಹಾಗೂ ಹರಿಗುರುಗಳ ಕರುಣೆಯಿಂದ ಅಸಾಮಾನ್ಯರಾಗಿ ಆದರ್ಶಪ್ರಾಯರಾಗಿ  ಪರಿಣಮಿಸಿದೇ ಕನ್ನಡ ನಾಡಿಗೆ ಕನ್ನಡ ಸಾಹಿತ್ಯಕ್ಕೆ ಹಿರಿಮೆ. ಕಲಿತನದ ಕನಕನಾಯಕರು ಮತ್ತೆ ಕವಿತನದ ಸಂತ ಕನಕದಾಸರಾದರು. ಕಲಿತನದ ರೋಷವು ಬತ್ತಿ ಹೋಗಿ ಹರಿ ನಾಮಸ್ಮರಣೆಯ ಭಕ್ತಿರಸ ಹರಿಯಿತು.

ಗಣೇಶ್ ಜಾಲ್ಸೂರು

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!