ಕಗ್ಗದ ಸಂದೇಶ – ಬದುಕು ನಾಕು ದಿನದ ಸಂತೆ….

“ಒಂದಗಳು ಹೆಚ್ಚಿರದು, ಒಂದಗಳು ಕೊರೆಯಿರದು|
ತಿಂದು ನಿನ್ನನ್ನ ಋಣ ತೀರುತಲೆ ಪಯಣ||
ಹಿಂದಾಗದೊಂದು ಚಣ, ಮುಂದಕಂ ಕಾದಿರದು|
ಸಂದ ಲೆಕ್ಕವದೆಲ್ಲ-ಮಂಕುತಿಮ್ಮ”

‘ಹುಟ್ಟು ಆಕಸ್ಮಿಕ ಸಾವು ಅನಿವಾರ್ಯ’ ಎನ್ನುವುದು ವಾಸ್ತವ ಸಂಗತಿ. ಅನ್ನದ ಋಣ ಯಾರಿಗೆ ಎಷ್ಟೋ ಅಷ್ಟೇ. ಒಂದಗಳು ಹೆಚ್ಚು ಆಗದು, ಒಂದಗಳು ಕಡಿಮೆಯಾಗಲು ಸಾಧ್ಯವಿಲ್ಲ. ಅವನು ನಿಗದಿ ಪಡಿಸಿದಷ್ಟು ತಿಂದು ಈ ಲೋಕದ ಅನ್ನದ ಋಣ ತೀರಿದ ತಕ್ಷಣ ಇಲ್ಲಿಂದ ಪರಲೋಕಕ್ಕೆ ಪ್ರಯಾಣಿಸಲೇಬೇಕು. ಸಮಯ ಪಾಲನೆಯಲ್ಲಿಯೂ ಕೂಡ ಅವನು ಕಟ್ಟುನಿಟ್ಟು. ಒಂದು ಕ್ಷಣ ಹಿಂದೂ ಆಗದು ಒಂದು ಕ್ಷಣ ಮುಂದೂ ಆಗದು. ಸರಿಯಾದ ಲೆಕ್ಕ ಸಂದಾಯವಾದ ತಕ್ಷಣ ಬದುಕಿನ ಪ್ರಯಾಣ ಅಂತ್ಯವಾಗುತ್ತದೆ ಎನ್ನುವ ನಮ್ಮ ಬಾಳಿನ ನಶ್ವರತೆಯನ್ನು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಚಿತ್ರಿಸಿದ್ದಾರೆ.
‘ಎಣ್ಣೆ ಬೆಣ್ಣೆಯ ಋಣವು, ಅನ್ನ ವಸ್ತ್ರದ ಋಣವು, ಹೊನ್ನು ಹೆಣ್ಣಿನ ಋಣ, ತೀರಿದಾಕ್ಷಣ ಮಣ್ಣು ಪಾಲು’ ಎಂಬ ಸರ್ವಜ್ಞನ ನುಡಿ ನಮ್ಮ ಋಣ ತೀರಿದ ತಕ್ಷಣ ಮಣ್ಣು ಆಗಲೇಬೇಕು. ಬಾಳಿನ ನಶ್ವರತೆಯನ್ನು ಮನವರಿಕೆ ಮಾಡಿಕೊಂಡು ಜೀವನದಲ್ಲಿ ಉತ್ಸಾಹವನ್ನು ತೋರುತ್ತಾ ಅಂತರಂಗದಲ್ಲಿ ನಿರ್ಲಿಪ್ತತೆಯನ್ನು ಮತ್ತು ವಿರಕ್ತಿಯನ್ನು ಬೆಳೆಸಿಕೊಂಡರೆ ಬದುಕು ಶಾಂತವಾಗಿರುತ್ತದೆ. ಲೌಕಿಕ ಜೀವನದಲ್ಲಿ ವ್ಯಾಮೋಹವನ್ನು ತೊರೆದು ಬದುಕುವುದು ಅಷ್ಟು ಸುಲಭವಲ್ಲ ಆದರೆ ದೃಢ ಸಂಕಲ್ಪದಿಂದ ವಿರಕ್ತಿ ಸಾಧ್ಯ. ‘ಮರಣವೇ ಮಹಾನವಮಿ’ ಎಂಬ ಬಸವಣ್ಣನ ನುಡಿಯಂತೆ ‘ಹುಟ್ಟು ಉತ್ಸವವಾದಂತೆ ಮರಣವನ್ನೂ ಮಹೋತ್ಸವವಾಗಿ ಕಾಣಬೇಕು’.
ಕನಕದಾಸರು ಹೇಳುವ “ಹೊನ್ನು ಹೆಣ್ಣು ಮಣ್ಣು ತನ್ನಲ್ಲಿದ್ದು ಉಣ್ಣಲಿಲ್ಲ ಅಣ್ಣತಮ್ಮ ತಾಯಿತಂದೆ ಬಯಸಲಾಗದು, ಅನ್ನ ವಸ್ತ್ರ ಭೋಗಕ್ಕಾಗಿ ತನ್ನ ಸುಖವ ಕಾಣಲಿಲ್ಲ,ಮಣ್ಣುಪಾಲು ಆದಮೇಲೆ ಯಾರಿಗಾಹುದೋ” ಎಂಬ ಕೀರ್ತನೆಯ ಸಾಲುಗಳ ಸಾರವನ್ನರಿತು ಬಾಳಬೇಕು. ನಮ್ಮಲ್ಲಿ ಎಷ್ಟೇ ಸಂಪತ್ತು ಸೌಲಭ್ಯಇದ್ದರೂ ಅದರಿಂದ ಬದುಕುವ ಕ್ಷಣವನ್ನೂ ಹೆಚ್ಚು ಮಾಡಲಾಗದು. ಇದಕ್ಕೊಂದು ಉತ್ತಮ ನಿದರ್ಶನ ಬದುಕಿನ ಸಾರ್ಥಕತೆ ಮೆರೆದು ಮರೆಯಾದ ಅಪ್ಪುವಿನ ಮರಣ. ಬದುಕಿನಲ್ಲಿ ನಾವು ಪಾಠ ಕಲಿಯುತ್ತಲೇ ಇರಬೇಕಾಗುತ್ತದೆ. ಅದರಲ್ಲಿಯೂ ಸಾವು ಕಲಿಸುವ ಪಾಠ ಶ್ರೇಷ್ಠವಾದದ್ದು. ಸಾವನ್ನು ಎಷ್ಟು ಗೌರವಿಸುತ್ತೇವೆಯೋ ಬದುಕನ್ನು ಅಷ್ಟು ಪ್ರೀತಿಸಲು ಸಾಧ್ಯವಾಗುತ್ತದೆ.” ‘ನೀವು ಸತ್ತಾಗ ಎಷ್ಟು ಜನ ಕಣ್ಣೀರು ಹಾಕುತ್ತಾರೋ ಎನ್ನುವುದರ ಮೇಲೆ ನಿಮ್ಮ ಜೀವನದ ಯಶಸ್ಸನ್ನು ಆಳೆಯಲಾಗುತ್ತದೆ” ಎಂಬ ಖ್ಯಾತ ತತ್ತ್ವಜ್ಞಾನಿ ಸಾಕ್ರಟೀಸ್ ನ ಮಾತನ್ನು ಅರ್ಥಮಾಡಿಕೊಂಡಾಗಲೇ ಜೀವನ ಸಾರ್ಥಕವಾಗುವುದಲ್ಲವೆ?

ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು,ಕನ್ನಡ ಸಾಹಿತ್ಯ ಪರಿಷತ್, ಕಾರ್ಕಳ ಘಟಕ.



















































































error: Content is protected !!
Scroll to Top