Homeಸಂಪಾದಕೀಯಸಂಪಾದಕೀಯ: ಶಾಸನ ಸಭೆಗಳಲ್ಲಿ ಯುವ ಧ್ವನಿ ಮೊಳಗಲಿ

Related Posts

ಸಂಪಾದಕೀಯ: ಶಾಸನ ಸಭೆಗಳಲ್ಲಿ ಯುವ ಧ್ವನಿ ಮೊಳಗಲಿ

ನನಗೆ ನನ್ನ ದೇಶದ ಯುವಕ ಯುವತಿಯರಲ್ಲಿ ನಂಬಿಕೆ ಇದೆ. ಅವರಿಗೆ ಬೇಕಾದ ಸರಕಾರವನ್ನು ಅವರೇ ಆರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ – ಮಾಜಿ ಪ್ರಧಾನಿ ರಾಜೀವ್ ಗಾಂಧಿ

ಈ ಮೇಲಿನ ಮಾತನ್ನು ಅವರು ಆಡಿದ್ದು ಸಂಸತ್‌ ಭವನದಲ್ಲಿ. ಮತದಾನದ ವಯಸ್ಸನ್ನು 21ರಿಂದ 18ಕ್ಕೆ ಇಳಿಸುವ ಐತಿಹಾಸಿಕ ವಿಧೇಯಕವನ್ನು ಮಂಡಿಸುತ್ತಾ ಅವರು ಹೇಳಿದ ಅರ್ಥಪೂರ್ಣ ಮಾತು ಇದು.
ರಾಜಕೀಯದಲ್ಲಿ ಹೆಚ್ಚು ಹೆಚ್ಚು ಯುವಶಕ್ತಿ ಬರಬೇಕು ಎಂಬ ಮಾತು ಪದೇ ಪದೇ ಕೇಳಿ ಬರುತ್ತಾ ಇದೆ. ಆದ್ರೆ ದೇಶದ ಸಂಸತ್ ಭವನದಲ್ಲಿ 35ಕ್ಕಿಂತ ಕಡಿಮೆ ವಯಸ್ಸಿನ ಯುವಕ, ಯುವತಿಯರ ಸಂಖ್ಯೆ ಒಂದು ಡಜನ್ ಕೂಡ ದಾಟುವುದಿಲ್ಲ‌ ! ಅವರೂ ಕೂಡ ರಾಜಕೀಯದ ಹಿನ್ನೆಲೆಯ ಕುಟುಂಬಗಳಿಂದ ಬಂದವರು. ನಮ್ಮ ದೇಶದ ಎಲ್ಲಾ ವಿಧಾನ ಸಭೆ, ವಿಧಾನ ಪರಿಷತ್ ಸದಸ್ಯರ ಒಟ್ಟು ಸಂಖ್ಯೆಯನ್ನು ಪರಿಗಣಿಸಿದಾಗ ಕೂಡ ಯುವಕ ಯುವತಿಯರ ಸಂಖ್ಯೆ 10% ಕೂಡ ದಾಟುವುದಿಲ್ಲ. ಯಾಕೆ ಹೀಗೆ ? ಯುವಶಕ್ತಿಯ ಸದ್ಬಳಕೆಗೆ ಕಾಲ ಕೂಡಿ ಬರುವುದು ಯಾವಾಗ ? ಹಣ್ಣಾದ ಹಿರಿ ತಲೆಗಳೇ ದೇಶವನ್ನು ಆಳಲು ಫಿಟ್ ಆದ್ರೆ ಹೊಸ ರಕ್ತಕ್ಕೆ ಅವಕಾಶ ಬೇಡವೇ ?

ಈ ಪ್ರಶ್ನೆ ಮತ್ತೆ ಮುನ್ನೆಲೆಗೆ ಬರಲು ಕಾರಣ ಎಂದರೆ ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರ ಕ್ಯಾಬಿನೆಟ್ ವಿಸ್ತರಣೆ ಎಂಬ ವೇದಿಕೆ. ಸಚಿವ ಸಂಪುಟದಲ್ಲಿ ಸಾಕಷ್ಟು ಹೊಸ ತಲೆಗಳು ಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಅನುಭವಿಗಳು ಬೇಕು ಎಂಬ ಕಾರಣ ಒಡ್ಡಿ ಹೊಸಬರನ್ನು ಬದಿಗೆ ಸರಿಸುವ ವ್ಯವಸ್ಥೆಗಳು ಎದ್ದು ಕಾಣುತ್ತಿವೆ. ಹಿರಿಯರೂ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುತ್ತಾರೆ ಎಂದಾದರೆ ಕಿರಿಯರಿಗೆ ಅವಕಾಶ ದೊರೆಯುವುದಾದರೂ ಹೇಗೆ ?

ಕ್ಯಾಬಿನೆಟ್ ರಚನೆ ಆಗುವಾಗ ಈಗಾಗಲೇ ಹೇಳಿದ ಹಾಗೆ ಪ್ರಾದೇಶಿಕ ಹಂಚಿಕೆ, ಜಿಲ್ಲಾವಾರು ಹಂಚಿಕೆ ಆಗಬೇಕಾದದ್ದು ನ್ಯಾಯ. ಅದರ ಜೊತೆಗೆ ಜಾತಿವಾರು ಹಂಚಿಕೆ ಮಾಡುವುದು ಅಷ್ಟು ಸಮಂಜಸವಲ್ಲ. ದೊಡ್ದ ದೊಡ್ದ ಸಮುದಾಯದ ನಾಯಕರು, ಮಠಾಧಿಪತಿಗಳು ಲಾಬಿ ಮಾಡಿ ತಮ್ಮವರಿಗೆ ಸೀಟ್ ಕೊಡಿಸಲು ಹೋರಾಟದ ಮಾರ್ಗ ಹಿಡಿದರೆ ಬೇರೆ ಸಣ್ಣ ಪುಟ್ಟ ಸಮುದಾಯಗಳ ಪ್ರತಿಭೆಗಳು ಉಸಿರುಕಟ್ಟುತ್ತವೆ. ಆಗಲೂ ಅನುಭವದ ಹೆಸರಲ್ಲಿ ಹಿರಿಯರೇ ಆಯಕಟ್ಟಿನ ಜಾಗಗಳಲ್ಲಿ ಕುಳಿತು ಕೊಳ್ಳುತ್ತಾರೆ. ಮತ್ತೆ ಯುವಶಕ್ತಿಗೆ ಅನ್ಯಾಯವಾಗುತ್ತದೆ.
ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಇವುಗಳು ತಮ್ಮದೇ ಆದ ಯುವ ಸಂಘಟನೆಗಳನ್ನು ಹೊಂದಿವೆ. ಅದರಲ್ಲಿ ಕೆಲಸ ಮಾಡುವ ಯುವಕರು ಕೇವಲ ಪ್ರತಿಭಟನೆಗೆ, ಬ್ಯಾನರ್ ಕಟ್ಟಲು, ಜೈಕಾರ ಕೂಗಲು, ರಸ್ತೆ ತಡೆ ಮಾಡಲು ಬಳಕೆ ಆಗುವುದನ್ನು ಕಾಣುತ್ತೇವೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಕೂಡ ಅವರಿಗೆ ಟಿಕೆಟ್ ದೊರೆಯುವುದು ಕಡಿಮೆ. ಅಂತವರ ಕೈಯ್ಯಲ್ಲಿ ಅಧಿಕಾರ ದೊರೆತರೆ ಅವರು ಅದ್ಭುತವಾದ ಫಲಿತಾಂಶ ತರುತ್ತಾರೆ ಅನ್ನುವುದು ಹತ್ತಾರು ಬಾರಿ ಪ್ರೂವ್ ಆಗಿದೆ. ಕರ್ನಾಟಕದ ಈಗಿನ ಸಚಿವ ಸಂಪುಟದ ಸರ್ಕಸ್ ನೋಡಿದಾಗ ಇಷ್ಟು ವರ್ಷ ಅಧಿಕಾರ ನಡೆಸಿದವರಿಗೆ ಸೇವಾ ಮನೋಭಾವ ಇದೆಯಾ ? ಎಂಬ ಪ್ರಶ್ನೆ ಉದ್ಭವವಾಗುತ್ತಿದೆ.
ದೆಹಲಿಯಲ್ಲಿ ಕುಳಿತು ನನಗೆ ಮಂತ್ರಿ ಪದವಿ ಬೇಕು ಎಂದು ಲಾಬಿ ಮಾಡುವವರು, ಇನ್ನೂ ಕೆಲವರು ಯಡಿಯೂರಪ್ಪ ಅವರ ಮನೆಗೆ ಬಾಗಿಲಿಗೆ ತೆರಳಿ ಸಚಿವ ‍ಸ್ಥಾನಕ್ಕಾಗಿ ದುಂಬಾಲು ಬೀಳುವುದು, ಇನ್ನು ಕೆಲವರು ಸಿಎಂ ಮನೆಯ ಮುಂದೆ ಧರಣಿ ಕೂರುವುದು, ಕೆಲವು ಶಾಸಕರು ತಮ್ಮ ಬೆಂಬಲಿಗ ಮತದಾರರ ದೊಡ್ಡ ಗುಂಪು ಕಟ್ಟಿಕೊಂಡು ನಾಯಕರ ಮೇಲೆ ಬ್ಲಾಕ್ ಮೇಲ್ ತಂತ್ರ ಅನುಸರಿಸುವುದು ಕಂಡುಬರುತ್ತಿದೆ.

LEAVE A REPLY

Please enter your comment!
Please enter your name here

Latest Posts

error: Content is protected !!