Homeಸಂಪಾದಕೀಯಸಂಪಾದಕೀಯ: ಟೋಕಿಯೋ ಒಲಿಂಪಿಕ್ಸ್ ಭಾರತಕ್ಕೆ ಕಭೀ ಖುಷಿ, ಕಭೀ ಗಂ!

Related Posts

ಸಂಪಾದಕೀಯ: ಟೋಕಿಯೋ ಒಲಿಂಪಿಕ್ಸ್ ಭಾರತಕ್ಕೆ ಕಭೀ ಖುಷಿ, ಕಭೀ ಗಂ!

ಈಗ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್ ಕೂಟದಲ್ಲಿ ಭಾರತವು ನಿರೀಕ್ಷೆ ಮಾಡಿದ್ದ ಫಲಿತಾಂಶ ಬರ್ತಾ ಇಲ್ಲ ಅನ್ನುವುದು ಗೋಡೆ ಬರಹದಷ್ಟೆ ಸತ್ಯ! ಭಾರತ ಸರಕಾರದ ಕ್ರೀಡಾ ಫೆಡರೇಶನ್ ಕಳೆದ ಐದು ವರ್ಷಗಳಲ್ಲಿ ಕ್ರೀಡಾಪಟುಗಳ ಆಯ್ಕೆ, ತರಬೇತಿಗೆ ಮತ್ತು ಟೋಕಿಯೋ ಪ್ರವಾಸಕ್ಕೆ ಖರ್ಚು ಮಾಡಿದ ಹಣ 1091.52 ಕೋಟಿ ರೂ. ಎಂದು ಭಾರತ ಸರಕಾರ ತಿಳಿಸಿದೆ. ಸಾಕಷ್ಟು ಗಾಳಿಸಿ ಗಾಳಿಸಿ ಭಾರತ ಆರಿಸಿದ್ದು ಬರೋಬ್ಬರಿ 127 ಕ್ರೀಡಾಪಟುಗಳನ್ನು. ಅದು 18 ಕ್ರೀಡಾ ವಿಭಾಗದಲ್ಲಿ! ಇದು ಹಿಂದಿನ ಒಲಿಂಪಿಕ್ಸ್ ಕೂಟಗಳಿಗೆ ಹೋಲಿಕೆ ಮಾಡಿದರೆ ತುಂಬಾ ಹೆಚ್ಚು. 2016ರ ರಿಯೋ ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಭಾರತ ಕೇವಲ ಎರಡು ಪದಕಗಳನ್ನು ಗೆದ್ದು ಕಳಪೆ ಸಾಧನೆ ಮಾಡಿತ್ತು. ಆಗ ಸ್ವತಃ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಒಲಿಂಪಿಕ್ಸ್ ಕೂಟದಲ್ಲಿ ಉತ್ತಮ ಸಾಧನೆ ಮಾಡುವ ಭರವಸೆ ಕೊಟ್ಟಿದ್ದರು. ಅವರ ಭರವಸೆಯಂತೆ ಕ್ರೀಡಾ ಪಟುಗಳ ಸಿದ್ಧತೆ, ತರಬೇತಿ ಇತ್ಯಾದಿಗಳಿಗೆ ಭಾರೀ ದೊಡ್ಡ ಮೊತ್ತವನ್ನು ವಿನಿಯೋಗ ಮಾಡಲಾಗಿತ್ತು. ಆದರೆ, ಅದಕ್ಕೆ ಸರಿಯಾದ ಫಲಿತಾಂಶ ಬರುವ ಸಾಧ್ಯತೆ ಇದೆಯಾ ? ಸದ್ಯಕ್ಕೆ ಇಲ್ಲ ಅನ್ನಿಸುತ್ತದೆ.

ಭಾರತಕ್ಕೆ ಮೀರಾ ಬಾಯಿ ಚಾನು ಭಾರ ಎತ್ತುವ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರೆ ಪಿ.ವಿ. ಸಿಂಧು ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಕಂಚು ಪಡೆದಿದ್ದಾರೆ. ಇನ್ನು ಹಾಕಿ ಕೂಟದಲ್ಲಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಈ ಬಾರಿ ಪದಕಗಳ ನಿರೀಕ್ಷೆ ಇದೆ. ಮೊದಲ ಬಾರಿ ಡಿಸ್ಕಸ್ ಥ್ರೋದಲ್ಲಿ ಪದಕ ಬರಬಹುದು. ಈಗ ಭಾರತವು ಪದಕದ ಪಟ್ಟಿಯಲ್ಲಿ 61 ನೆಯ ಸ್ಥಾನದಲ್ಲಿದೆ. ಮುಂದೆ ಎಲ್ಲಿಗೆ ತಲುಪುತ್ತೇವೆ ? ಗೊತ್ತಿಲ್ಲ.

ಸಣ್ಣ ಸಣ್ಣ ರಾಷ್ಟ್ರಗಳಾದ ಜಮೈಕಾ, ಸರ್ಬಿಯ, ಫಿಲಿಫೈನ್ಸ್, ಕತಾರ್, ಇಂಡೋನೇಷಿಯಾ,
ವೇನೆಜುವೆಲಾ ಮೊದಲಾದವುಗಳು ಪದಕ ಪಟ್ಟಿಯಲ್ಲಿ ಭಾರತಕ್ಕಿಂತ ಮೇಲಿನ ಸ್ಥಾನವನ್ನು ಪಡೆದಿವೆ. ಒಲಿಂಪಿಕ್ಸ್ ಮುಗಿಯುವಾಗ ಭಾರತ ಎಲ್ಲಿಗೆ ತಲುಪುವುದು ಕಾದು ನೋಡಬೇಕು.

ಜಪಾನ್, ಚೀನಾ ಮೊದಲಾದ ರಾಷ್ಟ್ರಗಳು ಕೇವಲ ಎಂಟು ವರ್ಷಗಳ ಒಳಗೆ ಮಗುವಿನ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಬೇಕಾಗುವ ತರಬೇತು, ಫಿಟ್ನೆಸ್ ಮಂತ್ರ ಹೇಳಿಕೊಡಲು ಆರಂಭ ಮಾಡುತ್ತವೆ. ಮಗುವಿನ ಪೂರ್ತಿ ಖರ್ಚನ್ನು ಸರಕಾರವೇ ಭರಿಸುತ್ತದೆ. ಆ ಮಗು ಶಾಲೆ, ಪರೀಕ್ಷೆ, ಪಾಠ ಎಂದು ಒತ್ತಡ ಮಾಡಿಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ. ಮಗುವಿನ ಹೆತ್ತವರು ಈ ಯೋಜನೆಗೆ ಸಪೋರ್ಟ್ ಮಾಡುತ್ತಾರೆ. ಪ್ರತೀ ಒಬ್ಬ ಕ್ರೀಡಾಪಟು ಆಯಾ ದೇಶದ ಆಸ್ತಿ ಎಂದು ಸರಕಾರ ಘೋಷಣೆ ಮಾಡುತ್ತದೆ. ತುಂಬಾ ವೃತ್ತಿಪರತೆ ಇರುವ ಕೋಚ್‌, ಸುಸಜ್ಜಿತವಾದ ಮೈದಾನ, ಶ್ರೇಷ್ಠ ಕ್ರೀಡಾ ಸಾಮಗ್ರಿಗಳು, ವೈಭವದ ಕ್ರೀಡಾ ಶಾಲೆಗಳು ಅಲ್ಲಿವೆ. ಅವುಗಳು ರಾತ್ರಿ ಹಗಲು ಆಗುವ ಒಳಗೆ ಸೃಷ್ಟಿ ಆದವುಗಳು ಅಲ್ಲ! ಕ್ರೀಡಾ ಸಂಸ್ಕೃತಿ ಅಲ್ಲಿ ಶಾಶ್ವತವಾಗಿದೆ. ಪಠ್ಯ ಪುಸ್ತಕಗಳಲ್ಲಿ ಒಲಿಂಪಿಕ್ಸ್ ಹೀರೋಗಳ ಕತೆಗಳಿವೆ. ಜಮೈಕಾ ಅಂತಹ ಪುಟ್ಟ ರಾಷ್ಟ್ರ 100 ಮೀಟರ್ ಓಟದ ಮಹಿಳಾ ವಿಭಾಗದ ಎಲ್ಲಾ ಮೂರು ಪದಕಗಳನ್ನು ಗೆದ್ದಿತು ಅಂದರೆ ಅವರ ಯೋಜನೆ ಎಷ್ಟು ಪಕ್ಕಾ ಇತ್ತು ಎಂದು ನಾವು ಅರ್ಥ ಮಾಡಿಕೊಳ್ಳಬೇಕು. ತುಂಬಾ ನಿರ್ಣಾಯಕ ಪಂದ್ಯದಲ್ಲಿ ನಮ್ಮ ಕ್ರೀಡಾಪಟುವಿನ ರೈಫಲ್ ಕೈ ಕೊಡುತ್ತದೆ ! ಮೇರಿ ಕೋಮ್ ಗೆಲ್ಲಬೇಕಾದ ಪಂದ್ಯವು
ರೆಫ್ರಿಗಳ ಅವಕೃಪೆಗೆ ಒಳಗಾಗಿ ಸೋಲುತ್ತದೆ ಅಂದ್ರೆ ನಾವು ಯಾರನ್ನು ದೂರಬೇಕು ?
ಭಾರೀ ಭರವಸೆ ಇಟ್ಟ ಅನೇಕ ಕ್ರೀಡಾಪಟುಗಳು ಭಾರತಕ್ಕೆ ನಿರಾಸೆಯನ್ನು ತಂದಿದ್ದಾರೆ. ಅದಕ್ಕೆ ಯಾರನ್ನು ದೂರುವುದು?

ಒಂದು ಕ್ಷಣ ಕಣ್ಣು ಮುಚ್ಚಿ ಯೋಚನೆ ಮಾಡಿ
ನಮ್ಮ ಎಷ್ಟು ಪ್ರೈಮರಿ ಶಾಲೆಗಳಲ್ಲಿ ದೈಹಿಕ ಅಧ್ಯಾಪಕರು ಇದ್ದಾರೆ ? ಒಳ್ಳೆಯ ಕ್ರೀಡಾಂಗಣ ಇದೆ ? ಫಿಟ್ನೆಸ್ ಯಂತ್ರಗಳು ಇವೆ ? ದೈಹಿಕ ಶಿಕ್ಷಣ ಅಧ್ಯಾಪಕರು ಇದ್ದರೂ ತರಗತಿಗಳು ಹೇಗೆ ನಡೆಯುತ್ತಿವೆ ? ಮಕ್ಕಳಿಗೆ ದೊರೆಯುವ ಪೌಷ್ಟಿಕ ಆಹಾರದ ಗುಣಮಟ್ಟ ಹೇಗಿದೆ ? ಪೋಷಕರು ಕ್ರೀಡೆಯ ಬಗ್ಗೆ ಎಷ್ಟು ಸಕಾರಾತ್ಮಕ ಮನೋಭಾವ ಹೊಂದಿದ್ದಾರೆ ? ಕ್ರೀಡೆಗೆ ಎಷ್ಟು ಪ್ರಾಯೋಜಕರು ದೊರೆಯುತ್ತಿದ್ದಾರೆ ? ಕ್ರೀಡೆಗೆ ಸಂಬಂಧ ಪಟ್ಟ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಒಂದು ವರ್ಷದ ಬಜೆಟ್ ಎಷ್ಟು? ಜಿಲ್ಲಾ ಮಟ್ಟದಲ್ಲಿ ಭಾರ ಎತ್ತುಗೆ, ಆರ್ಚರಿ ಸಲಕರಣೆಗಳು ಇವೆಯಾ ? ಕೋಚ್ ನೇಮಕ ಆಗಿದ್ದಾರ ? ಮಗುವಿಗೆ ಪೌಷ್ಟಿಕ ಆಹಾರ ದೊರೆಯುತ್ತಿದೆಯೇ ? ಕ್ರೀಡೆಯಲ್ಲಿ ರಾಜ್ಯ ಮಟ್ಟದಲ್ಲಿ ಪದಕ ಗೆದ್ದ ವಿದ್ಯಾರ್ಥಿಗಳಿಗೆ ಎಸೆಸೆಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಎಷ್ಟು ಕೃಪಾಂಕ ದೊರೆಯುತ್ತಿದೆ ? ಇವುಗಳನ್ನು ಒಮ್ಮೆ ಅವಲೋಕನ ಮಾಡಿದರೆ ಸಾಕು. ನಮ್ಮ ಎಲ್ಲಾ ಪ್ರಶ್ನೆಗೆ ಉತ್ತರ ದೊರೆಯುವುದು. ಇಲ್ಲವಾದರೆ ನಮ್ಮ ಸ್ಥಿತಿಯು ಹೀಗೆಯೇ ಇರುತ್ತದೆ ಎನ್ನುವುದು ನ್ಯೂಸ್ ಕಾರ್ಕಳ ಅಭಿಪ್ರಾಯ.

LEAVE A REPLY

Please enter your comment!
Please enter your name here

Latest Posts

error: Content is protected !!