ಕಾರ್ಕಳದ ನೂತನ ಬ್ರಾಂಡ್ – ಬಿಳಿ ಬೆಂಡೆ

ಕಾರ್ಕಳ : ಬೇರೆ ಬೇರೆ ಊರುಗಳಿಗೆ ಬೇರೆ ಬೇರೆ ಕೃಷಿಯ ಬ್ರಾಂಡ್‌ಗಳಿವೆ. ಉದಾಹರಣೆಗೆ ಮಟ್ಟು ಗುಳ್ಳ, ಶಂಕರಪೂರ ಮಲ್ಲಿಗೆ, ನಂಜನಗೂಡು ಪುಟ್ಟ ಬಾಳೆ, ತಿಪಟೂರು ತೆಂಗಿನಕಾಯಿ, ಬೆಳಗಾಂ ಹತ್ತಿ, ಮಂಡ್ಯ ಕಬ್ಬು ಇತ್ಯಾದಿ. ಆದರೆ ನಮ್ಮ ಕಾರ್ಕಳಕ್ಕೆ ಏನು ? ಈ ಪ್ರಶ್ನೆಗೆ ಉತ್ತರ ನೀಡುವ ನಿಟ್ಟಿನಲ್ಲಿ ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಮುಂದಾಗಿದ್ದಾರೆ. ಅದೇ ಕಾರ್ಲ ಕಜೆ ಮತ್ತು ಬಿಳಿ ಬೆಂಡೆ.

6 ತಿಂಗಳ ಹಿಂದೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರನ್ನು ಕಾರ್ಕಳಕ್ಕೆ ಕರೆಸಿ ಬಹು ದೊಡ್ಡ ಮಟ್ಟದಲ್ಲಿ ಕಾರ್ಕಳ ಕಜೆ ಅಕ್ಕಿಯನ್ನು ಪ್ರಮೋಟ್ ಮಾಡಲಾಗಿತ್ತು. ರೈತರಿಗೆ ಪೂರಕ ಮಾಹಿತಿ, ಸೌಲಭ್ಯ ಕಲ್ಪಿಸಿದ್ದರಿಂದ ಇಂದು ಕಾರ್ಕಳದ ಬಹುದೊಡ್ಡ ಸಂಖ್ಯೆಯ ರೈತರು ಕಾರ್ಕಳದ ಕಜೆ ಅಕ್ಕಿಯನ್ನು ಬೆಳೆದು ಯಶಸ್ವಿ ಆಗುತ್ತಿದ್ದಾರೆ. ಕಾರ್ಲ ಕಜೆ ಅನ್ನದ ರುಚಿ ಮತ್ತು ಪೋಷಕಾಂಶಗಳ ಗುಣದಿಂದ ಕಾರ್ಕಳ ಕಜೆ ಅಕ್ಕಿಗೆ ದೊಡ್ಡ ಮಾರುಕಟ್ಟೆಯೂ ದೊರೆತಿದೆ. ರಾಜ್ಯದ ಎಲ್ಲೆಡೆಯಿಂದ ಕಾರ್ಕಳ ಕಜೆ ಅಕ್ಕಿಗೆ ಬೇಡಿಕೆಯೂ ಇದೆ.

ಬಿಳಿ ಬೆಂಡೆ
ಈಗ ಅದೇ ಮುತುವರ್ಜಿಯಿಂದ ಇನ್ನೊಂದು ಕೃಷಿ ಉತ್ಪನ್ನಕ್ಕೆ ಕಾರ್ಕಳ ಹೆಬ್ರಿ ಉಭಯ ತಾಲೂಕು ಸಿದ್ಧಗೊಂಡಿದೆ. ಅದು ಬಿಳಿ ಬೆಂಡೆ ಅಥವಾ ಅಷ್ಟ ಪಟ್ಟಿ ಬೆಂಡೆ ಅಥವಾ ಹಾಲು ಬೆಂಡೆ. ಕಾರ್ಕಳದ ಮಣ್ಣಿನ ಗುಣಕ್ಕೆ ಮತ್ತು ವಾತಾವರಣಕ್ಕೆ ಹೆಚ್ಚು ಹೊಂದಿಕೊಳ್ಳುವ ತರಕಾರಿ ಇದು. ಬೆಂಡೆಯನ್ನು ಬ್ರಾಂಡ್ ಆಗಿ ರೂಪಿಸುವ ಪ್ರಯತ್ನ ಈಗ ಆರಂಭವಾಗಿದೆ. ಬಿಳಿ ಬೆಂಡೆಯು ವಿಟಮಿನ್, ಪ್ರೋಟೀನ್, ಖನಿಜಾಂಶಗಳಿಂದ ಸಮೃದ್ಧವಾಗಿದೆ ಮತ್ತು ನಾರಿನಾಂಶ ಹೊಂದಿದೆ. ಅದರ ರುಚಿ ಮತ್ತು ಸ್ವಾದ, ಅದಕ್ಕಿರುವ ವಿಶೇಷವಾದ ಪರಿಮಳವು ಬಿಳಿ ಬೆಂಡೆ ತಳಿಯನ್ನು ಜನಪ್ರಿಯವಾಗಿಸಿದೆ.

ಕುಂಡಗಳಲ್ಲೂ ಬೆಂಡೆ ಬೆಳೆ
ಹಳ್ಳಿಗಳಲ್ಲಿ ಗದ್ದೆ ಮತ್ತು ಕೃಷಿ ಭೂಮಿಗಳಲ್ಲಿ ದರೆ ಮಾಡಿ ಬೆಂಡೆ ಬೆಳೆಯಬಹುದಾಗಿದೆ. ಪೇಟೆಯಲ್ಲಿ ಜಾಗದ ಕೊರತೆ ಇರುವವರು ಗ್ರೋ ಬ್ಯಾಗಲ್ಲಿ ಅಥವಾ ಕುಂಡಗಳಲ್ಲಿ ಈ ಗಿಡಗಳು ಚೆನ್ನಾಗಿ ಬೆಳೆಯಬಹುದಾಗಿದೆ. ತಾರಸಿಯಲ್ಲೂ ಕೂಡ ಕೃಷಿ ಮಾಡಬಹುದಾಗಿದೆ. ಸಾವಯವ ಗೊಬ್ಬರ ಮತ್ತು ಹುಳದ ಬಾಧೆ ನಿವಾರಣೆಗೆ ಬೇವಿನ ಹಿಂಡಿ ಬೆರೆಸಬಹುದು. ಗಿಡಗಳು ಬೆಳೆಯುತ್ತ ಹೋದಂತೆ ಬೇವಿನ ಎಣ್ಣೆ ಸಿಂಪಡಣೆ ಮಾಡಬಹುದು ಎಂದು ಬೆಂಡೆ ಬೆಳೆಗಾರರು ಹೇಳುತ್ತಾರೆ.

ಸೀಜನ್‌ಗೆ ಮಾತ್ರ ಸೀಮಿತವಲ್ಲ
ಬೆಂಡೆಯು ನಾಟಿ ಮಾಡಿದ ಕೆಲವೇ ದಿನಗಳಲ್ಲಿ ಅಂದರೆ ಒಂದೈದು ಎಲೆಗಳು ಬಂದ ಕೂಡಲೇ ಹೂ ಬಿಡಲು ಆರಂಭವಾಗುವುದು. ಅನಂತರ ಕೆಲವೇ ದಿನಗಳ ಅವಧಿಯಲ್ಲಿ ಬೆಂಡೆ ಕಾಯಿ
ಗಿಡದ ತುಂಬಾ ಅರಳುವುದು. ಇದು ಒಂದು ಸೀಸನ್‌ಗೆ ಮಾತ್ರ ಸೀಮಿತ ಆಗದೇ ಇಡೀ ವರ್ಷ ಬೆಳೆಯುವ ಬೆಳೆ ಆಗಿದೆ. ಒಂದು ಕಿಲೋ ಬೆಂಡೆ ಕಾಯಿಗೆ 50-60 ರೂಪಾಯಿ ಸುಲಭವಾಗಿ ದೊರೆಯುತ್ತದೆ. ಶಾಸಕರ ಮುತುವರ್ಜಿಯಿಂದ ಈ ಬಿಳಿ ಬೆಂಡೆಗೆ ಇಡೀ ರಾಜ್ಯದಾದ್ಯಂತ ಮಾರುಕಟ್ಟೆ ಒದಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ.

ಆರ್ಥಿಕ ಬಲವರ್ಧನೆ
ಲಾಕ್ ಡೌನ್ ಪರಿಣಾಮವಾಗಿ ಇಡೀ ನಾಡು ಸಂತ್ರಸ್ತವಾಗಿರುವ ಇಂತಹ ಸಂದರ್ಭದಲ್ಲಿ ಕಾರ್ಕಳಕ್ಕೆ ಅರ್ಥಿಕ ಪುನಶ್ಚೇತನ ನೀಡುವ ಶಾಸಕರ ಪ್ರಯತ್ನವೂ ಅತ್ಯಂತ ಶ್ಲಾಘನೀಯ. ಅದರ ಜೊತೆಗೆ ಕಾರ್ಕಳದ ಎರಡು ಬ್ರಾಂಡ್‌ಗಳು ಕಾರ್ಕಳ ಹೆಬ್ರಿ ತಾಲೂಕಿನ ಪ್ರಭಾವಳಿ ಹೆಚ್ಚಿಸುವ ಮತ್ತು ರೈತರ ಆರ್ಥಿಕ ಬಲವರ್ಧನೆಗೆ ಕಾರಣವಾಗುವುದಲ್ಲಿ ಉಪಯುಕ್ತ ಮತ್ತು ಪರಿಣಾಮಕಾರಿ.





























































































































































































































error: Content is protected !!
Scroll to Top