ಸಂಪಾದಕೀಯ – ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ ಹೀಗೂ ನಡೆಸಬಹುದು

ಶಿಕ್ಷಣ ಕ್ಷೇತ್ರದಲ್ಲಿ ಇಂದು ಕಣ್ಣಿಗೆ ಬಟ್ಟೆ ಕಟ್ಟಿ ಕತ್ತಲೆಯ ಕೋಣೆಯಲ್ಲಿ ಬಿಟ್ಟ ಹಾಗಿದೆ ಪರಿಸ್ಥಿತಿ. ಒಂದೂವರೆ ವರ್ಷದ ಅವಧಿಯಲ್ಲಿ ಕೊರೋನಾ ಕಾರಣಕ್ಕೆ ಸರಿಯಾದ ಪಾಠಗಳು ನಡೆದಿಲ್ಲ. ವಿದ್ಯಾಗಮ, ಆನ್ಲೈನ್ ಕ್ಲಾಸುಗಳು ತಕ್ಕ ಮಟ್ಟಿಗೆ ನಡೆದರೂ ಅವುಗಳು ವಿದ್ಯಾರ್ಥಿಗಳನ್ನು ಪೂರ್ಣವಾಗಿ ತಲುಪಿಲ್ಲ ಎಂದು ನಮಗೆಲ್ಲ ಗೊತ್ತಿದೆ. ಕಳೆದ ಜನವರಿ ತಿಂಗಳಿಂದ ಏಪ್ರಿಲ್ ತನಕ ಆಫ್ಲೈನ್ ತರಗತಿಗಳು ನಡೆದಿವೆ. ಮಕ್ಕಳು ತಕ್ಕ ಮಟ್ಟಿಗೆ ಪರೀಕ್ಷೆಗೆ ಮಾನಸಿಕವಾಗಿ ತಯಾರಿ ಆಗಿದ್ದರು. ಆದರೆ ನಂತರ ಲಾಕ್ ಡೌನ್ ಘೋಷಣೆ ಆಗಿ ಮತ್ತೆ ಶಿಕ್ಷಣದ ರಥವು ನಿಂತು ಬಿಟ್ಟಿದೆ. ಈಗ ಎಲ್ಲರ ಕುತೂಹಲ ಇರುವುದು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳ ಬಗ್ಗೆ. ಬೇರೆಲ್ಲಾ ತರಗತಿಗಳ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸ್ ಮಾಡಿ ಶಿಕ್ಷಣ ಇಲಾಖೆ ಒಳ್ಳೆಯ ಕೆಲಸ ಮಾಡಿದೆ. ಈಗ ಎಲ್ಲಾ ಪೋಷಕರು ಕೇಳುವ ಪ್ರಶ್ನೆ ಎಸೆಸೆಲ್ಸಿ ಪಿಯುಸಿ ಪರೀಕ್ಷೆ ಯಾವಾಗ? ಹೇಗೆ?

ದಿನೇ ದಿನೇ ಕೊರೋನಾ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿರುವುದು ಸರಕಾರದ ಆತಂಕಕ್ಕೆ ಕಾರಣವಾಗಿದೆ. ಈ ಹಂತದಲ್ಲಿ ಪರೀಕ್ಷೆ ನಡೆಸುವುದು ಸೂಕ್ತ ನಿರ್ಧಾರ ಅಲ್ಲ. ಆದರೆ ಈ ಪರೀಕ್ಷೆಗಳನ್ನು ಯಾವುದೇ ಕಾರಣಕ್ಕೂ ರದ್ದು ಪಡಿಸುವ ಹಾಗಿಲ್ಲ. ಎರಡೂ ಕೂಡ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪ್ರಾಮುಖ್ಯ ಪರೀಕ್ಷೆಗಳು. ಅದಕ್ಕಿಂತ ಹೆಚ್ಚಾಗಿ ಅಧ್ಯಾಪಕರು ತಮ್ಮ ವಿದ್ಯಾರ್ಥಿಗಳನ್ನು ಈ ಎರಡೂ ಪರೀಕ್ಷೆಗಳಿಗೆ ತುಂಬಾ ಚೆನ್ನಾಗಿ ತರಬೇತಿ ಕೊಟ್ಟು ತಯಾರು ಮಾಡಿದ್ದಾರೆ. ಹೆತ್ತವರ ನಿರೀಕ್ಷೆ ಕೂಡ ಪರೀಕ್ಷೆ ಆಗಲಿ ಅಂತ ಇದೆ. ಆದ್ದರಿಂದ ಸರಕಾರ ಈ ದಿಸೆಯಲ್ಲಿ ಪರೀಕ್ಷೆ ನಡೆಸಲು ತಯಾರಿ ನಡೆಸಬೇಕು. ಕೊನೆಯ ಪಕ್ಷ ಜುಲೈ ಮೊದಲ ವಾರದಲ್ಲಿ ಆದರೂ ಪರೀಕ್ಷೆಗಳು ನಡೆಯಬೇಕು. ಈಗಾಗಲೇ ಮಕ್ಕಳು ಓದುವ ಆಸಕ್ತಿಯನ್ನು ಕಳೆದುಕೊಂಡಿದ್ದಾರೆ. ಅವರ ಆಸಕ್ತಿ ಇನ್ನಷ್ಟು ಕುಸಿದು ಹೋಗುವ ಮೊದಲು ಪರೀಕ್ಷೆಗಳನ್ನು ಮಾಡಿ ಫಲಿತಾಂಶ ಕೊಡುವುದು ಒಳ್ಳೆಯದು. ಆದರೆ ಹೇಗೆ?

ಈ ವರ್ಷವನ್ನು ವಿಶೇಷವಾಗಿ ಪರಿಗಣಿಸಿ ಪರೀಕ್ಷೆಗಳನ್ನು ಶಾಲಾ ಮಟ್ಟದಲ್ಲಿ ನೆರವೇರಿಸುವುದು ಒಳ್ಳೆಯದು. ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುವ ಕಾರಣ ಸೋಷಿಯಲ್ ಡಿಸ್ಟೆನ್ಸ್ ಸಾಧ್ಯ ಆಗಬಹುದು. ಸ್ಯಾನಿಟೈಸ್ ಮಾಡುವುದು ಸಮಸ್ಯೆ ಆಗುವುದಿಲ್ಲ. ಪ್ರೋಟೋಕಾಲ್ ಪ್ರಕಾರವೇ ಪರೀಕ್ಷೆ ನಡೆಯಲಿ.

ಪ್ರಶ್ನೆಪತ್ರಿಕೆಯು ರಾಜ್ಯಮಟ್ಟದ್ದೇ ಇರಲಿ. ಅದಕ್ಕೆ ಮೊದಲು ಎಸೆಸೆಲ್ಸಿ ಮತ್ತು ಪಿಯುಸಿ ಬೋರ್ಡುಗಳು ತಮ್ಮ ವೆಬ್ ಸೈಟ್ ನಲ್ಲಿ ಪ್ರತಿ ವಿಷಯಗಳ ಮೂರು ಮೂರು ಮಾದರಿ ಪ್ರಶ್ನೆಗಳನ್ನು ಪ್ರಕಟ ಮಾಡಬೇಕು. ಪರೀಕ್ಷೆಯಲ್ಲಿ ಆ ಮಾದರಿ ಪ್ರಶ್ನಾ ಪತ್ರಿಕೆಗಳಿಂದ 60% ಪ್ರಶ್ನೆಗಳನ್ನು ಕೇಳಬೇಕು. ಶಾಲಾ ಮಟ್ಟದಲ್ಲಿ ಪರೀಕ್ಷೆ ನಡೆದರೂ ಗೌಪ್ಯತೆ ಇತ್ಯಾದಿ ಕಾಪಾಡಬೇಕು. ಕೊಠಡಿ ಮೇಲ್ವಿಚಾರಣೆ ಕರ್ತವ್ಯಕ್ಕೆ ಬೇರೆ ಶಾಲೆಯ ಅಧ್ಯಾಪಕರನ್ನು ಅಥವಾ ಪ್ರಾಥಮಿಕ ಶಾಲೆಯ ಅಧ್ಯಾಪಕರನ್ನು ನಿಯೋಜನೆ ಮಾಡಬೇಕು. ಪ್ರತಿ ಶಾಲಾ ಕೇಂದ್ರಕ್ಕೆ ಒಬ್ಬ ನೋಡಲ್ ಅಧಿಕಾರಿಯನ್ನು ಡಿಡಿಪಿಐ ಅಥವಾ ಡಿಡಿಪಿಯು ನೇಮಕ ಮಾಡಬೇಕು ಮತ್ತು ವರದಿ ಸಂಗ್ರಹ ಮಾಡಬೇಕು. ಹೆಚ್ಚು ಸೋಂಕು ಇರುವ ಪ್ರದೇಶದ ಮಕ್ಕಳಿಗೆ ಪರೀಕ್ಷೆಯಿಂದ ರಿಯಾಯಿತಿ ಕೊಡಬೇಕು ಮತ್ತು ಒಂದು ತಿಂಗಳ ಅವಧಿಯಲ್ಲಿ ಮತ್ತೆ ಪೂರಕ ಪರೀಕ್ಷೆ ನಡೆಸಬೇಕು. ಪರೀಕ್ಷೆಯು ತುಂಬಾ ಸುಲಭ ಇರಬೇಕು ಅನ್ನುವುದು ಕಾಮನ್ ಸೆನ್ಸ್.
ನಂತರ ಮೌಲ್ಯಮಾಪನ ಕೆಲಸ ಕೂಡ ತಾಲೂಕು ಕೇಂದ್ರದಲ್ಲಿ ನಡೆಯಬೇಕು. ಪ್ರತೀ ಕೇಂದ್ರಕ್ಕೆ ಎರಡು ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳನ್ನು ಎಸೆಸೆಲ್ಸಿ ಅಥವ ಪಿಯುಸಿ ಬೋರ್ಡು ನೇಮಕ ಮಾಡಿದರೆ ಹೆಚ್ಚಿನ ಸಮಸ್ಯೆ ಪರಿಹಾರ ಆದೀತು. ಮೌಲ್ಯಮಾಪನ ಕೂಡ ತುಂಬಾ ಲಿಬರಲ್ ಆಗಬೇಕು ಅನ್ನುವುದು ಎಲ್ಲರ ಕಾಳಜಿ.

ಇನ್ನು ಗೌಪ್ಯತೆಯ ವಿಷಯದಲ್ಲಿ ಇದು ವಿಶೇಷ ವರ್ಷ ಆದ್ದರಿಂದ ಎಸೆಸೆಲ್ಸಿ ಮತ್ತು ಪಿಯುಸಿ ಬೋರ್ಡುಗಳು, ಶಿಕ್ಷಣ ಇಲಾಖೆ ಶಿಕ್ಷಕರ ಮೇಲೆ ಹೆಚ್ಚು ಭರವಸೆ ಇಡಬೇಕು. ಶಿಕ್ಷಕರು ಯಾವುದೇ ಮಕ್ಕಳಿಗೆ ಅನ್ಯಾಯ ಅಥವಾ ತಾರತಮ್ಯ ಮಾಡುವುದಿಲ್ಲ. ಯಾವುದೇ ಮಕ್ಕಳಿಗೂ ಅನ್ಯಾಯ ಆಗದಂತೆ ಬೋರ್ಡುಗಳು ಪಾಲಿಸಿಯನ್ನು ಈ ವರ್ಷ ರೂಪಿಸಬೇಕು.
ಇನ್ನೂ ಪರೀಕ್ಷೆಗಳನ್ನು ಮುಂದೆ ಹಾಕಿ ಅಥವ ಪರೀಕ್ಷೆಗಳನ್ನು ರದ್ದು ಮಾಡುವುದಕ್ಕಿಂತ ಇದು ಉತ್ತಮ ಕ್ರಮ ಆದೀತು ಅನ್ನುವುದು ನ್ಯೂಸ್ ಕಾರ್ಕಳದ ಆಶಯ ಆಗಿದೆ.

















































































error: Content is protected !!
Scroll to Top