ಮಂಗಳೂರು,ನ. 25 : ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮವಾಗಿ `ಯಕ್ಷಾಂಗಣ’ ಮಂಗಳೂರು, ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯು ನವಂಬರ್ ತಿಂಗಳಲ್ಲಿ 8ನೇ ಕನ್ನಡ ನುಡಿ ಹಬ್ಬದ ಪ್ರಯುಕ್ತ ಏರ್ಪಡಿಸಿರುವ ‘ಯಕ್ಷಗಾನ ತಾಳಮದ್ದಳೆ ಪರ್ವ’ ಸಂದರ್ಭ ಶ್ರೇಷ್ಠ ಸಾಧಕರಿಗೆ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ನೀಡಲು ನಿರ್ಧರಿಸಿದೆ. 2019-2020ರ ಸಾಲಿಗೆ ಅವಿಭಜಿತ ದ.ಕ. ಜಿಲ್ಲೆಯ ಧಾರ್ಮಿಕ, ಸಾಮಾಜಿಕ ನೇತಾರ, ಉದ್ಯಮಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಈ ಪುರಸ್ಕಾರ ಸ್ವೀಕರಿಸಲಿದ್ದಾರೆ ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ.
ಮೂಲ್ಕಿ ಸಮೀಪ ಪುನರೂರಿನಲ್ಲಿ ಜನಿಸಿದ ಹರಿಕೃಷ್ಣ ಪುನರೂರು ಅವರು ಹೊಟೇಲ್ ಉದ್ಯಮಿಯಾಗಿ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಪೋಷಕರಾಗಿ ಖ್ಯಾತರಾದವರು. ಶಿಕ್ಷಣ, ಸಮಾಜ ಸೇವೆ, ಧಾರ್ಮಿಕ, ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಆವರ ಸೇವಾ ಕೈಂಕರ್ಯ ವಿಸ್ತರಿಸಿಕೊಂಡಿದೆ.
ನ. 29ರಂದು ಮಂಗಳೂರಿನ ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಜರಗುವ ಯಕ್ಷಾಂಗಣದ ಎಂಟನೆಯ ನುಡಿಹಬ್ಬದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರಿಗೆ ಶಾಸಕ ವೇದವ್ಯಾಸ ಕಾಮತ್ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ಪ್ರದಾನ ಮಾಡುವರು.
ಹರಿಕೃಷ್ಣ ಪುನರೂರು ಅವರಿಗೆ ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ
































