ಕಾರ್ಕಳ, ನ. 25 : ಮಿಯಾರು ಪರಿಸರದಲ್ಲಿ ನೆಟ್ ವರ್ಕ್ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳ ಆನ್ ಲೈನ್ ಕಲಿಕೆಗೆ ಬಹಳ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ದೂರಿಕೊಂಡಿದ್ದಾರೆ. ವರ್ಕ್ ಫ್ರಮ್ ಹೋಂ ಮಾಡುತ್ತಿರುವ ಕೆಲವರು ಕೂಡ ನೆಟ್ ವರ್ಕ್ ಸಮರ್ಪಕವಾಗಿ ಸಿಗದೆ ಸಮಸ್ಯೆ ಎದುರಿಸುತ್ತಿದ್ದಾರೆ.
ನಿರ್ದಿಷ್ಟವಾಗಿ ಮಿಯಾರು ಚರ್ಚ್‌ನಿಂದ ಕೂಷ್ಮಾಂಡಿನಿ ಪೆಟ್ರೋಲು ಪಂಪ್ ತನಕ ಏರ್ ಟೆಲ್, ಜಿಯೊ, ಬಿಎಸ್‌ಎನ್‌ಎಲ್ ಸೇರಿ ಯಾವ ಮೊಬೈಲ್ ನೆಟ್ ವರ್ಕ್ ಕೂಡ ಸರಿಯಾಗಿ ಸಿಗುತ್ತಿಲ್ಲ. ಇದರಿಂದಾಗಿ ಮಕ್ಕಳು ಆನ್‌ಲೈನ್ ಕಲಿಕೆಗಾಗಿ ಎಲ್ಲೆಲ್ಲೋ ಹೋಗಬೇಕಾಗಿದೆ. ಕೆಲವು ಪೋಷಕರು ಮಕ್ಕಳನ್ನು ನೆಟ್‌ವರ್ಕ್ ಇರುವ ಜಾಗಕ್ಕೆ ಕರೆದುಕೊಂಡು ಹೋಗಿ ಬಳಿಕ ಕರೆತರುವ ಕೆಲಸ ಮಾಡುತ್ತಿದ್ದಾರೆ. ಕರೆಗಳು ಕೂಡ ಸಮರ್ಪಕವಾಗಿ ಕನೆಕ್ಟ್ ಆಗದೇ ಇರುವುದು, ಆದರೂ ಅರ್ಧದಲ್ಲಿ ಕಟ್ ಆಗುವ ಸಮಸ್ಯಗಳಿವೆ.
ಮಿಯಾರಿನ ಮಸೀದಿ ಸಮೀಪ, ಬಜಗೋಳಿ ಮತ್ತು ಮುಡಾರಿನಲ್ಲಿ ಏರ್‌ಟೆಲ್, ಜಿಯೋ ಮತ್ತು ಬಿಎಸ್‌ಎನ್‌ಎಲ್ ಟವರ್ ಇದೆ. ಆದರೂ ನೆಟ್ ವರ್ಕ್ ಸಮಸ್ಯೆ ಇರುವುದು ಆಶ್ಚರ್ಯವುಂಟು ಮಾಡಿದೆ. ಸದ್ಯಕ್ಕೆ ಶಾಲೆಗಳು ಪ್ರಾರಂಭವಾಗುವ ಸಾಧ್ಯತೆಗಳು ಇಲ್ಲದಿರುವುದರಿಂದ ಮಕ್ಕಳಿಗೆ ಆನ್‌ಲೈನ್ ಕಲಿಕೆಯೇ ಗತಿ. ಹೀಗಾಗಿ ನೆಟ್‌ವರ್ಕ್ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಿಕೊಡಬೇಕೆಂದು ಸ್ಥಳೀಯರು ವಿನಂತಿಸಿದ್ದಾರೆ.
ಮಿಯಾರಿನಲ್ಲಿ ನೆಟ್‌ವರ್ಕ್ ಸಮಸ್ಯೆ : ವಿದ್ಯಾರ್ಥಿಗಳು ಕಂಗಾಲು































