Tuesday, December 7, 2021
spot_img
Homeಇತರ ಸುದ್ದಿಮದುವೆ ಮನೆಗಳಲ್ಲಿ ಈಗ ಭಜನೆಯ ಝೇಂಕಾರ

ಮದುವೆ ಮನೆಗಳಲ್ಲಿ ಈಗ ಭಜನೆಯ ಝೇಂಕಾರ

ಹೆಬ್ರಿ, ನ. 25 : ಮದುವೆ ಮನೆಗಳಲ್ಲಿ ಈಗ ಭಜನೆಯ ಝೇಂಕಾರ. ಮದುವೆಗೂ ಭಜನೆಗೂ ಎಲ್ಲಿಂದೆಲ್ಲಿಯ ಸಂಬಂಧ ಎಂದು ಕೇಳಿದಿರಾ? ಮದುವೆಗಿಂತ ಮೊದಲು ನಡೆಯುವ ಮದರಂಗಿ ಶಾಸ್ತ್ರ ಅಥವಾ ಮೆಹಂದಿ ಕಾರ್ಯಕ್ರಮಗಳಲ್ಲಿ ಈಗ ಸದ್ದಿಲ್ಲದೆ ಬದಲಾವಣೆಯೊಂದು ಆಗುತ್ತಿದೆ. ಮೆಹಂದಿ ಎಂದರೆ ಗುಂಡು – ತುಂಡಿನ ಪಾರ್ಟಿ, ತಡರಾತ್ರಿಯ ತನಕ ಡಿಜೆ ಸಂಗೀತಕ್ಕೆ ಹುಚ್ಚು ನೃತ್ಯ ಎಂಬಂತಾಗಿತ್ತು. ಮೆಹಂದಿ ಶಾಸ್ತ್ರದ ನಿಜವಾದ ಉದ್ದೇಶ ಮರೆಗೆ ಸರಿದು ಮಾಂಸದಡುಗೆಯ ಅದ್ದೂರಿ ಸಮಾರಂಭ, ಜೊತೆಗೆ ಮದ್ಯದ ಹೊಳೆ, ಅಬ್ಬರದ ಡಿಜೆ ಸಂಗೀತ ಮತ್ತು ಅದರ ತಾಳಕ್ಕೆ ನಸುಕಿನ ತನಕ ಯುವಕ-ಯುವತಿಯರ ಎರ್ರಾಬಿರ್ರಿ ಕುಣಿತ. ಇದು ಈಗಿನ ಮದುವೆ ಮನೆಗಳಲ್ಲಿ ಮೆಹಂದಿ ದಿನ ಕಂಡು ಬರುವ ದೃಶ್ಯ. ಸಾಲಸೋಲ ಮಾಡಿಯಾದರೂ ಮೆಹಂದಿ ಕಾರ್ಯಕ್ರಮವನ್ನು ಭಾರಿ ಗಡದ್ದು ಮಾಡಲೇ ಬೇಕು. ಕೆಲವೊಮ್ಮೆ ಇಡೀ ಮದುವೆ ಖರ್ಚಿಗಿಂತಲೂ ಮೆಹಂದಿ ಖರ್ಚೇ ಹೆಚ್ಚಾಗುತ್ತಿತ್ತು.
ನಮ್ಮ ಸಂಪ್ರದಾಯ ಅಲ್ಲ
ಇಷ್ಟಕ್ಕೂ ಬಲ್ಲವರು ಹೇಳುವ ಪ್ರಕಾರ ಮೆಹಂದಿ ಎನ್ನುವುದು ತುಳುನಾಡಿನ ಸಂಪ್ರದಾಯವೇ ಅಲ್ಲ. ಹಿಂದಿನ ತುಳುನಾಡಿನ ಮದುವೆ ಕಟ್ಟುಪಾಡುಗಳಲ್ಲಿ ಮೆಹಂದಿಗೆ ಅಂಥ ಪ್ರಾಮುಖ್ಯವಾದ ಸ್ಥಾನ ಇರಲಿಲ್ಲ. ಉತ್ತರ ಭಾರತದಲ್ಲಿ ಮಾತ್ರ ಮೆಹಂದಿ ಶಾಸ್ತ್ರ ಹಿಂದಿನಿಂದಲೂ ಪ್ರಚಲಿತದಲ್ಲಿತ್ತು. ಮುಂಬಯಿಗೆ ಹೋದ ತುಳುನಾಡಿನವರು ಮೆಹಂದಿ ಸಂಪ್ರದಾಯವನ್ನು ಇಲ್ಲಿಗೆ ತಂದರು ಎನ್ನುತ್ತಾರೆ ಕೆಲವು ಹಿರಿಯರು.
ಗುಂಡು ತುಂಡಿಗೆ ಕಡಿವಾಣ
ಹೆಬ್ರಿ ಸುತ್ತಮುತ್ತ ಇತ್ತೀಚೆಗೆ ನಡೆದ ಕೆಲವು ಮದುವೆಯ ಮೆಹಂದಿ ಕಾರ್ಯಕ್ರಮಗಳಲ್ಲಿ ಗುಂಡು ತುಂಡು ಮತ್ತು ಡಿಜೆ ಸಂಗೀತದ ಬದಲಾಗಿ ಭಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಇದಕ್ಕೆ ನಾಂದಿ ಹಾಡಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಜನ ಜಾಗೃತಿ ವೇದಿಕೆ ಮತ್ತು ಇತರ ಸಂಘ ಸಂಸ್ಥೆಗಳ ಸಹಕಾರದಲ್ಲಿ ಮದ್ಯಪಾನ ವಿರೋಧಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ -1
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅನಂತ ಶ್ರೀ ಜ್ಞಾನ ವಿಕಾಸ ಕೇಂದ್ರದ ಸದಸ್ಯರಾದ ಸವಿತಾ ಅವರ ಮಗಳ ಮದುವೆಯ ಮುಂಚಿನ ಮದರಂಗಿಯಲ್ಲಿ ಅನಂತ ಶ್ರೀ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಕುಣಿತ ಭಜನೆ ಮಾಡುವುದರ ಮೂಲಕ ಶುಭ ಕಾರ್ಯಕ್ಕೆ ಚಾಲನೆ ನೀಡಿದರು. ಆ ಮೂಲಕ ಗುಡು ತುಂಡು ಪಾರ್ಟಿಗೆ ಕಡಿವಾಣ ಹಾಕಿದರು.
ಕಾರ್ಯಕ್ರಮ -2
ನಾಡ್ಪಾಲಿನ ಶ್ರೀ ದುರ್ಗಾ ಸಂಘದ ಸದಸ್ಯೆ ಸುಮಲತಾ ಇವರ ಮದುವೆಯ ಮದರಂಗಿಯಲ್ಲಿ ಶಾರದಾಂಬ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಭಜನಾ ಕಾರ್ಯಕ್ರಮ ನೆರವೇರಿಸಿದರು.
ಕಾರ್ಯಕ್ರಮ- 3
ಬಚ್ಚಪು ಶಿವಶಕ್ತಿ ಸಂಘದ ಸದಸ್ಯ ರಮೇಶ್ ನಾಯ್ಕ ಅವರ ಮಗನ ಹುಟ್ಟುಹಬ್ಬದ ಸಂಭ್ರಮ ಸಂದರ್ಭದಲ್ಲಿ ಗದ್ದುಗೆ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಭಜನಾ ಮಂಡಳಿಯ ಸದಸ್ಯರು ಕುಣಿತ ಭಜನೆ ಮಾಡಿದರು.
ಕಾರ್ಯಕ್ರಮ -4
ಬಚ್ಚಪು ಶ್ರೀ ನವದುರ್ಗಾ ಸಂಘದ ಸದಸ್ಯ ಶಶಿಧರ್ ನಾಯ್ಕ ಮತ್ತು ಬಚ್ಚಪು ಶಿವಶಕ್ತಿ ಸಂಘದ ಸದಸ್ಯ ನಾಗರಾಜ್ ಅವರ ಮದುವೆ ಯಲ್ಲಿ ಗದ್ದುಗೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಭಜನಾ ಮಂಡಳಿಯ ಸದಸ್ಯ ಕುಣಿತ ಭಜನೆಯ ಮೂಲಕ ಸಂಭ್ರಮಿಸಿದರು.
ಕಾರ್ಯಕ್ರಮ-5
ಹೆಬ್ರಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ದಿವಾಕರ ಮರಕಾಲ ಅವರ ಮದುವೆಯ ಮದರಂಗಿಯಲ್ಲಿ ಹೆಬ್ರಿ ಗ್ರಾಮದ ವಿಘ್ನೇಶ್ವರ ಸಂಘದ ಸದಸ್ಯರು, ಶ್ರೀ ಅನಂತಶ್ರೀ ಭಜನಾ ಮಂಡಳಿ ಮತ್ತು ರಾಘವೇಂದ್ರ ಭಜನಾ ಮಂಡಳಿಯಿಂದ ಭಜನೆ ನಡೆಯಿತು.
ಕಾರ್ಯಕ್ರಮ -6
ಬೆಳಂಜೆ ಕಾರ್ಯಕ್ಷೇತ್ರದ ಏಕದಂತ ಸಂಘದ ಸದಸ್ಯ ಆನಂದ ಅವರ ಗೃಹ ಪ್ರವೇಶದಲ್ಲಿ ಮಲ್ಲಿಕಾರ್ಜುನ ಭಜನಾ ಮಂಡಳಿ ಮತ್ತು ಬ್ರಹ್ಮಶ್ರೀ ನವಜೀವನ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ-7
ನಾಡ್ಪಾಲು ಗ್ರಾಮದ ದೇವಳಾರಬೆಟ್ಟು ಪ್ರಗತಿ ಬಂಧು ತಂಡದ ಸದಸ್ಯ ಪ್ರವೀಣ್ ಅವರು ಮಗನ ಹುಟ್ಟುಹಬ್ಬ ಆಚರಣೆಯನ್ನು ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ಶ್ರೀ ಲಕ್ಷ್ಮೀ ನಾರಾಯಣ ಭಜನಾ ಮಂಡಳಿಯ ಭಜನಾ ಕಾರ್ಯಕ್ರಮದ ಮೂಲಕ ನಡೆಸಿದರು.
ಕಾರ್ಯಕ್ರಮ -8
ಚಾರ ಗ್ರಾಮದ ವಂಡಾರುಬೆಟ್ಟು ಒಕ್ಕೂಟದ ಹೆರ್ಗಲ್ಲು ಸಂಘದ ಸಂತೋಷ್ ಅವರ ಮದರಂಗಿ ಕಾರ್ಯಕ್ರಮದಲ್ಲಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕೊಂಜಾಡಿ ಮತ್ತು ಶ್ರೀ ರಾಮ ಭಜನಾ ಮಂಡಳಿ ಚಾರ ಇವರ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮ -9
ಹೆಬ್ರಿ ಗ್ರಾಮದ ಹೆಬ್ರಿ ಬಿ ಒಕ್ಕೂಟದ ಶ್ರೀ ಗುರು ಸಂಘದ ಸದಸ್ಯ ಶ್ರೀಧರ್ ಮದುವೆಯ ಮದರಂಗಿಯಲ್ಲಿ ಶ್ರೀ ಗದ್ದುಗೆ ದುರ್ಗಾಪರಮೇಶ್ವರಿ ಅಮ್ಮನವರ ಭಜನಾ ಮಂಡಳಿ, ಶ್ರೀ ಅನಂತಲಕ್ಷ್ಮೀ ಭಜನಾ ಮಂಡಳಿ ಹೆಬ್ರಿ, ಶ್ರೀ ಅನಂತಪದ್ಮನಾಭ ಭಜನಾ ಮಂಡಳಿ ಬೀಡು ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.
ಹೀಗೆ ಹಳ್ಳಿ ಪರಿಸರದಲ್ಲಿ ಕ್ರಾಂತಿಕಾರಿ ಎನ್ನಬಹುದಾದ ಬದಲಾವಣೆಯ ಗಾಳಿ ಬೀಸುತ್ತಿರುವುದು ಒಂದು ಉತ್ತಮ ಬೆಳವಣಿಗೆ ಎನ್ನಬಹುದು.
ಶುಭ ಕಾರ್ಯಗಳಲ್ಲಿ ಭಜನೆಯ ಸುಂದರ ಕಾರ್ಯಕ್ರಮವನ್ನು ಇಟ್ಟುಕೊಂಡಲ್ಲಿ ಅನೇಕ ಯುವಕರು ದುಶ್ಚಟಗಳಿಗೆ ಬಲಿಯಾಗುವುದನ್ನು ತಡೆದು ಜಾಗೃತಿ ಮೂಡಿಸಬಹುದು. ಈ ಮೂಲಕ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮದ್ಯ ಮುಕ್ತ ಸಮಾಜ ನಿರ್ಮಾಣದ ಕಾರ್ಯದಲ್ಲಿ ನಾವು ಅರ್ಥಪೂರ್ಣವಾಗಿ ಕೈಜೋಡಿಸಬಹುದು.

ಪ್ರವೀಣ್‌ ಆಚಾರ್ಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ರಿ ವಲಯ ಮೇಲ್ವೀಚಾರಕ

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!