ಶಾಲಾರಂಭ ವಿಳಂಬವಾಗುವುದರಿಂದ ಮಕ್ಕಳ ಕಲಿಕಾ ಸಾಮರ್ಥ್ಯ ಕುಂಠಿತವಾಗುವ ಭೀತಿ

ಕಾರ್ಕಳ: ಶಾಲಾರಂಭವನ್ನು ವರ್ಷಾಂತ್ಯದ ತನಕ ಮುಂದೂಡಿರುವ ಸರಕಾರದ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯರ ವ್ಯಕ್ತವಾಗಿದೆ. ಶಿಕ್ಷಣ ತಜ್ಞರು, ಶಿಕ್ಷಕರು, ಶಾಲಾಡಳಿತ, ಪೋಷಕರ ಪೈಕಿ ಕೆಲವರು ನಿರ್ಧಾರವನ್ನು ಸ್ವಾಗತಿಸಿದರೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ಶಾಲಾರಂಭ ತಡವಾಗುತ್ತಿರುವುದರಿಂದ ಗ್ರಾಮೀಣ ಭಾಗಗಳಲ್ಲಿ ಬಾಲ್ಯ ವಿವಾಹ, ಬಾಲ್ಯ ಕಾರ್ಮಿಕ ಪಿಡುಗು ಹೆಚ್ಚುತ್ತಿದೆ ಎಂದು ಕೆಲವು ಸಮಾಜ ಶಾಸ್ತ್ರಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಬಹುತೇಕ ಪೋಷಕರು ಅನಿಶ್ಚಿತ ಕಲಿಕೆಯಿಂದಾಗಿ ಮಕ್ಕಳ ಕಲಿಕಾ ಸಾಮರ್ಥ್ಯ ಕಡಿಮೆಯಾಗುವ ಬಗ್ಗೆ ಆತಂಕ ಹೊಂದಿದ್ದಾರೆ.
ಸದ್ಯದಲ್ಲೇ ಶಾಲೆಗಳು ಪ್ರಾರಂಭವಾಗದಿದ್ದರೆ ಸರಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳ ಮನಸಿನಲ್ಲಿ ನಕರಾತ್ಮಕವಾದ ಭಾವನೆಗಳು ಮೂಡುವ ಸಾಧ್ಯತೆಯಿದೆ. ಶಾಲಾರಂಭವನ್ನು ವಿಳಂಬಿಸುತ್ತಿರುವುದಕ್ಕೆ ಯಾವುದೇ ವೈಜ್ಞಾನಿಕವಾದ ಕಾರಣಗಳು ಇಲ್ಲ. ಹೀಗಾಗಿ ಸರಕಾರ ಈ ನಿರ್ಧಾರವನ್ನು ಮರು ಪರಿಶಿಲಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ ಹಿರಿಯ ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ.
ಶಾಲೆಗೆ ಬರಲು ತಯಾರು ಇರುವ ಮಕ್ಕಳಿಗೆ ಅನುಮತಿ ಕೊಡಿ ಎನ್ನುವುದಷ್ಟೇ ಸರಕಾರಕ್ಕೆ ನಮ್ಮ ಮನವಿ. ಜಗತ್ತಿನಾದ್ಯಂತ ಕೊರೊನದಿಂದಾಗಿ ಮಕ್ಕಳ ಶಿಕ್ಷಣ ಮೊಟಕುಗೊಳ್ಳುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವುದನ್ನು ಸರಕಾರ ಗಮನಿಸಬೇಕು ಎಂದು ಓರ್ವ ಶಾಲಾ ವ್ಯವಸ್ಥಾಪಕರು ಹೇಳಿದ್ದಾರೆ.
ಅನೇಕ ಪೋಷಕರು ಆನ್‌ ಲೈನ್‌ ಪಾಠದ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದಾರೆ. ಇದರಿಂದ ಪರಿಪೂರ್ಣ ಕಲಿಕೆಯಂತೂ ಸಾಧ್ಯವಿಲ್ಲ. ಬದಲಾಗಿ ಮಕ್ಕಳು ಸುಲಭವಾಗಿ ಮೊಬೈಲ್‌ ಚಟಕ್ಕೆ ಬಲಿಯಾಗುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ನೆಟ್‌ ವರ್ಕ್‌ ಸಮಸ್ಯೆಯಿಂದ ಆನ್‌ ಲೈನ್‌ ಕಲಿಕೆಯೂ ಹಲವು ಅಡಚಣೆಗಳನ್ನು ಎದುರಿಸುತ್ತಿದೆ ಎಂದು ಕೆಲವು ಪೋಷಕರು ಸಂಕಟ ತೋಡಿಕೊಂಡಿದ್ದಾರೆ.
ಇದೇ ವೇಳೆ ಕೆಲವು ಪೋಷಕರು ಮಾತ್ರ ಕೊರೊನ ಆತಂಕ ಇರುವುದರಿಂದ ಸರಕಾರ ಶಾಲಾರಂಭವನ್ನು ಮುಂದೂಡಿರುವುದು ಒಳ್ಳೆಯದಾಯಿತು ಎಂದಿದ್ದಾರೆ. ಮಕ್ಕಳು ಶಾಲೆಗೆ ಹೋದರೆ ನಮಗೆ ಸದಾ ಆತಂಕವಿರುತ್ತದೆ. ಅಲ್ಲಿ ಏನಾದರೂ ಹೆಚ್ಚುಕಮ್ಮಿಯಾದರೆ ಮನೆಯವರೆಲ್ಲ ಕಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿ ಕೊರೊನ ಭೀತಿ ದೂರವಾದ ಬಳಿಕವೇ ಶಾಲೆಗಳನ್ನು ಶುರು ಮಾಡಿದರೆ ಸಾಕು ಎಂದು ಕೆಲವು ಪೋಷಕರು ಅಭಿಪ್ರಾಯಪಟ್ಟಿದ್ದಾರೆ.





























































































































error: Content is protected !!
Scroll to Top