ನಿವಾರ್‌ ಚಂಡಮಾರುತ : ದಕ್ಷಿಣದ ರಾಜ್ಯಗಳಲ್ಲಿ ಹೈ ಅಲರ್ಟ್‌

ಚೆನ್ನೈ, ನ. 24 : ಈ ವರ್ಷದ ಈಶಾನ್ಯ ಮಾನ್ಸೂನ್‌ನ ಮೊದಲ ಚಂಡಮಾರುತ ನಿವಾರ್ ಇಂದು ತಮಿಳುನಾಡಿಗೆ ಅಪ್ಪಳಿಸಲಿದ್ದು, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ನಿವಾರ್ ಚಂಡಮಾರುತ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಸೃಷ್ಟಿಯಾಗಿದ್ದು, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದ ಅನೇಕ ಕಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ನ. 25ರಂದು ಕರೈಕಲ್, ಪುದುಚೇರಿಯಲ್ಲಿ, ನ. 25 ಮತ್ತು 26ರಂದು ಆಂಧ್ರಪ್ರದೇಶದ ದಕ್ಷಿಣ ಕರಾವಳಿ ಮತ್ತು ರಾಯಲಸೀಮೆ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಸುವ ಸಂಭವವಿದೆ. ವಿಶಾಖಪಟ್ಟಣಂ ಮತ್ತು ಪೂರ್ವ ಗೋದಾವರಿ ಜಿಲ್ಲೆಯಲ್ಲಿಯೂ ಮಳೆ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಪ್ರಸ್ತುತ ನಿವಾರ್ ಚಂಡಮಾರುತವು ಶ್ರೀಲಂಕಾದ ಉತ್ತರ ಭಾಗ ಮತ್ತು ದಕ್ಷಿಣ ತಮಿಳುನಾಡು ಕರಾವಳಿಯತ್ತ ಪಶ್ಚಿಮದಿಂದ ಚಲಿಸುತ್ತಿದೆ. ಹೀಗಾಗಿ ಈ ಭಾಗಗಳಲ್ಲಿ ನವೆಂಬರ್ 26ರವರೆಗೆ ಮಳೆ ಸುರಿಯುವ ಸಾಧ್ಯತೆ ಇದೆ.
ತಮಿಳುನಾಡಿನ ಚೆನ್ನೈ ಸೇರಿದಂತೆ ಅನೇಕ ಭಾಗಗಳಲ್ಲಿ ವ್ಯಾಪಕ ಮಳೆ ಸುರಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ತಮಿಳುನಾಡು ಕರಾವಳಿಯತ್ತ ಸಾಗುತ್ತಿರುವ ಈ ಚಂಡಮಾರುತ ನಾಳೆ ಕರೈಕಲ್ ಮತ್ತು ಮಹಾಬಲಿಪುರಂಗೆ ಅಪ್ಪಳಿಸಲಿದೆ. ಹೀಗಾಗಿ ಈ ಭಾಗದಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ. ಕೇವಲ ತಮಿಳುನಾಡು ಮಾತ್ರವಲ್ಲದೆ ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಕೆಲ ಭಾಗಗಳಿಗೂ ನಿವಾರ್ ಚಂಡಮಾರುತದ ಎಪೆಕ್ಟ್ ತಟ್ಟಲಿದ್ದು, ಇಲ್ಲಿಯೂ ಕೂಡ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಹವಾಮಾನ ಇಲಾಖೆ ನೀಡಿರುವ ಮಾಹಿತಿ ಮೇರೆಗೆ, ಇಂದು ತಮಿಳುನಾಡಿನ ಪುದುಕೋಟ್ಟೈ, ತಂಜಾವೂರ್, ತಿರುವರೂರ್, ಕರೈಕಲ್, ನಾಗಪಟ್ಟಣಂ, ಕುಡಲೂರ್, ಅರಿಯಲೂರ್ ಮತ್ತು ಪೆರಂಬೂರ್, ರಾಮನಾಥಪುರಂ, ಶಿವಗಂಗೈ, ತಿರುಚಿನಾಪಳ್ಳಿ, ಕಲ್ಲಾಕುರಿಚಿ, ವಿಳ್ಳುಪುರಂ, ಪುದುಚೆರಿ, ಚೆನ್ನೈ, ಕಾಂಚೀಪುರಂ, ತಿರುವಳ್ಳೂರ್, ರಾಣಿಪೇಟೈ, ತಿರುವಣ್ಣಾಮಲೈ, ತಿರುಪತ್ತೂರ್ ಮತ್ತು ವೆಲೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಚಂಡಮಾರುತದ ಪರಿಣಾಮ ಚೆನ್ನೈ ಮತ್ತು ನೆರೆಯ ಜಿಲ್ಲೆಗಳಲ್ಲಿ 11 ಸೆಂ.ಮೀ ನಿಂದ 20 ಸೆಂ.ಮೀ ಮಳೆಯಾಗುವ ಸಾಧ್ಯತೆಯಿದ್ದು, ಗಾಳಿಯ ವೇಗವು ಮಂಗಳವಾರ 55-65 ಕಿ.ಮೀ ವೇಗದಿಂದ 75 ಕಿ.ಮೀ.ಗೆ ಏರುತ್ತದೆ. ಬುಧವಾರ ಉತ್ತರ ತಮಿಳುನಾಡು ಮತ್ತು ಪುದುಚೇರಿಯ ಕರಾವಳಿ ಪ್ರದೇಶಗಳಲ್ಲಿ ಗಾಳಿಯ ವೇಗ 100 ಕಿ.ಮೀ. ನಿಂದ 120 ಕಿ.ಮೀ.ವರೆಗೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.





























































































































error: Content is protected !!
Scroll to Top