ಅಂತಾರಾಷ್ಟ್ರೀಯ ಮಹಿಳಾ ದಿನ ಇರುವಂತೆ ಅಂತಾರಾಷ್ಟ್ರೀಯ ಪುರುಷ ದಿನವೂ ಇದೆ ಮತ್ತು ಅದು ಇಂದೇ (ನ.19).ಮಹಿಳಾ ದಿನಾಚರಣೆಯಷ್ಟು ಪುರುಷರ ದಿನಾಚರಣೆ ಜನಪ್ರಿಯವಾಗಿಲ್ಲ. ಬಹುತೇಕ ಪುರುಷರಿಗೇ ತಮಗಾಗಿ ಹೀಗೊಂದು ಅಂತಾರಾಷ್ಟ್ರೀಯ ದಿನ ಇದೆ ಎಂಬುದು ಕೂಡ ಗೊತ್ತಿಲ್ಲ. ಮಹಿಳಾ ದಿನಾಚರಣೆ ದಿನ ಇರುವಂಥ ಹಾರೈಕೆಗಳು, ಶುಭಾಶಯಗಳು, ಗೋಷ್ಠಿಗಳು, ಚಿಂತನ-ಮಂಥನಗಳು, ವಿಶೇಷ ಕಾರ್ಯಕ್ರಮಗಳು, ಗೌಜಿ ಗಮ್ಮತ್ತುಗಳು ಪುರುಷರ ದಿನದಂದು ಇಲ್ಲ. ಈ ವಿಚಾರದಲ್ಲೂ ಪುರುಷರು ನತದೃಷ್ಟರು.
ದೇಶ, ಸಮಾಜ, ಸಮುದಾಯ, ಕುಟುಂಬ, ಮದುವೆ, ಮಕ್ಕಳ ಲಾಲನೆ ಪಾಲನೆ ಇತ್ಯಾದಿಗಳಿಗೆ ಪುರುಷ ನೀಡುತ್ತಿರುವ ಯೋಗದಾನವನ್ನು ಸ್ಮರಿಸಲು ಮತ್ತು ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತಿದೆ ಎಂದು ಹೇಳುತ್ತಿದೆ ಅಂತಾರಾಷ್ಟ್ರೀಯ ಪುರುಷರ ದಿನದ ವ್ಯಾಖ್ಯಾನ.
ಥಾಮಸ್ ಓಸ್ಟರ್ ಎಂಬಾತ 1992 ಫೆ.7ರಂದು ಅಂತಾರಾಷ್ಟ್ರೀಯ ಪುರುಷರ ದಿನವನ್ನು ಪ್ರಾರಂಭಿಸಿದನಂತೆ. ಅನಂತರ ಜೆರೊಮ್ ಟೀಲಕ್ಸಿಂಗ್ ಎಂಬಾತ ಇದನ್ನು ಪರಿಷ್ಕರಿಸಿ ನ.19ನ್ನು ಪುರುಷರ ದಿನಕ್ಕಾಗಿ ಆಯ್ಕೆ ಮಾಡಿಕೊಂಡ. ಅಂದಿನಿಂದ ನ.19 ಅಂತಾರಾಷ್ಟ್ರೀಯ ಪುರುಷರ ದಿನವಾಗಿದೆ.
ಈತ ನ.19ನ್ನು ಆಯ್ಕೆ ಮಾಡಲು ಎರಡು ಕಾರಣಗಳಿವೆ, ಒಂದು ಆದು ಅವನ ತಂದೆಯ ಹುಟ್ಟಿದ ದಿನ. ಎರಡನೆಯದ್ದು 1989ರಲ್ಲಿ ಟ್ರಿನಿಡಾಡ್ ಮತ್ತು ಟೊಬ್ಯಾಗೊ ಫುಟ್ ಬಾಲ್ ತಂಡಗಳು ತಮ್ಮ ಎಲ್ಲ ವಿರೋಧ, ಸ್ಪರ್ಧೆ ಮತ್ತು ಪೈಪೋಟಿಗಳನ್ನು ಮರೆತು ವಿಶ್ವಕಪ್ ಆಡಲು ಅರ್ಹತೆ ಪಡೆಯುವ ಸಲುವಾಗಿ ಒಂದಾದ ದಿನವಂತೆ. ಇದನ್ನು ಸ್ಮರಣೀಯವಾಗಿಸಲು ಅಂದು ಅಂತಾರಾಷ್ಟ್ರೀಯ ಪುರುಷರ ದಿನವನ್ನು ಆಚರಿಸುವ ಸಂಪ್ರದಾಯ ಶುರುವಾಯಿತು. ಎರಡು ಫುಟ್ಬಾಲ್ ತಂಡಗಳು ಒಂದಾದುದಕ್ಕೂ ಜಗತ್ತಿನ ಪುರುಷರೆಲ್ಲ ಅಂದಿನ ದಿನವನ್ನು ನಮ್ಮ ದಿನವೆಂದು ಭಾವಿಸಿ ಸಂಭ್ರಮಿಸುವುದಕ್ಕೂ ಎಲ್ಲಿಂದೆಲ್ಲಿಯ ಸಂಬಂಧ ಎನ್ನುವುದನ್ನು ಆ ಟೀಲಕ್ಸಿಂಗ್ ಎಂಬ ಮಹನೀಯನೇ ಬಂದು ಹೇಳಬೇಕು.
ಭಾರತದಲ್ಲಿ ಬಹಳ ತಡವಾಗಿ ಅಂದರೆ 2007ರಲ್ಲಿ ಅಂತಾರಾಷ್ಟ್ರೀಯ ಪುರುಷರ ದಿನವನ್ನು ಮೊದಲ ಬಾರಿಗೆ ಆಚರಿಸಲಾಯಿತು. ಇಂಡಿಯನ್ ಫ್ಯಾಮಿಲಿ ಎಂಬ ಪುರುಷರ ಹಕ್ಕನ್ನು ಪ್ರತಿಪಾದಿಸುವ ಸಂಸ್ಥೆಯೊಂದು ಈ ನ.19ರಂದು ಈ ದಿನವನ್ನು ಆಚರಿಸಿತಂತೆ.

ಈ ವರ್ಷದ ಥೀಮ್
ಈ ವರ್ಷದ ಅಂತಾರಾಷ್ಟ್ರೀಯ ಪುರುಷರ ದಿನದ ಥೀಮ್ “ಪುರುಷರು ಮತ್ತು ಬಾಲಕರಿಗೆ ಉತ್ತಮ ಆರೋಗ್ಯ”.ಜಗತ್ತಿನ ಸಮಸ್ತ ಪುರುಷರು ಆರೋಗ್ಯದಿಂದಿರಲಿ ಎಂದು ಹಾರೈಸುವ ಥೀಮ್ ಇದು.
“ಪುರುಷರು ದೇವರ ಅದ್ಭುತ ಸೃಷ್ಟಿ, ಆದರೆ ಅವರು ಪರಿಪೂರ್ಣರಲ್ಲ. ಅವರು ಹಲವಾರು ಕುಂದುಕೊರತೆಗಳನ್ನು ಹೊಂದಿರುವುದು ಸಹಜ. ಅವರನ್ನು ಅವರಿದ್ದ ಹಾಗೇ ಒಪ್ಪಿಕೊಂಡರೆ ಬದುಕು ಸುಖಮಯ” ಎಂಬ ಹಾರೈಕೆಯೊಂದು ಅಂತಾರಾಷ್ಟ್ರೀಯ ಪುರುಷರ ದಿನದಂದು ಬಂದಿದೆ. ಇದು ಪುರುಷರಿಗೆ ಸರಿಯಾಗಿ ಹೊಂದುವ ಮಾತು ಆಗಿರಬಹುದೇನೋ…








































