ಕಾರ್ಕಳ, ನ.16: ಸುಮಾರು ಎಂಟು ತಿಂಗಳ ಅಂತರದ ನಂತರ ಪದವಿ ಕಾಲೇಜುಗಳು ನ.17ರಿಂದ ಆರಂಭ ಆಗಲಿವೆ. ಉಡುಪಿ ಮತ್ತು ಮಂಗಳೂರಿನ ಎಲ್ಲಾ ಪದವಿ ಕಾಲೇಜುಗಳ ಆರಂಭಕ್ಕೆ ಉಭಯ ಜಿಲ್ಲಾಧಿಕಾರಿಗಳು ಹಸಿರು ನಿಶಾನೆ ತೋರಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಾರ್ಗ ಸೂಚಿಗಳನ್ನು ಸರಿಯಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಕೊರೊನ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿ ನೆಗೆಟಿವ್ ವರದಿ ಇದ್ದರೆ ಮಾತ್ರ ಕಾಲೇಜಿಗೆ ಪ್ರವೇಶ ಎಂದು ಮೊದಲೇ ತಿಳಿಸಿದ್ದ ಕಾರಣ ಸರಕಾರಿ ಆಸ್ಪತ್ರೆಗಳಲ್ಲಿ ಪ್ರಮಾಣಪತ್ರ ಪಡೆಯಲು ವಿದ್ಯಾರ್ಥಿಗಳ ಸಾಲುಗಳು ಕಂಡು ಬಂದವು. ಕಾಲೇಜುಗಳಲ್ಲಿ ಸ್ಯಾನಿಟೈಜೇಶನ್ ಕೆಲಸಗಳು ಮುಕ್ತಾಯದ ಹಂತದಲ್ಲಿ ಇವೆ. ಆರಂಭದ ಒಂದೆರಡು ದಿನಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇದ್ದರೂ ಮುಂದೆ ಕಾಲೇಜು ಚಟುವಟಿಕೆಗಳು ಹಿಂದಿನ ಲಯಕ್ಕೆ ಮರಳಬಹುದು ಎನ್ನುವ ಅಭಿಪ್ರಾಯ ಕಂಡು ಬಂದಿದೆ.
ನಾಳೆಯಿಂದ ಪದವಿ ಕಾಲೇಜು ಆರಂಭ







































